ನಡೆ ನುಡಿಯ ಸಮನ್ವಯದ ಸಮಗ್ರ ವ್ಯಕ್ತಿತ್ವ ಅಮೃತ ಸೋಮೇಶ್ವರ- ನುಡಿ ನಮನ ಸಲ್ಲಿಸಿ ಡಾ।ಪೆರ್ಲ ಅಭಿಮತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12.  ಅಪಾರ ಪಾಂಡಿತ್ಯ ಹೊಂದಿದ್ದ ನಗುಮೊಗದ ನಿಗರ್ವಿ, ನಡೆ ಹಾಗೂ ನುಡಿಯಲ್ಲಿ ಉನ್ನತ ಆದರ್ಶಗಳನ್ನೇ ಪರಿಪಾಲಿಸಿದ ಸಮಗ್ರ ವ್ಯಕ್ತಿತ್ವ ಅಮೃತ ಸೋಮೇಶ್ವರರದು ಎಂದು ಖ್ಯಾತ ಸಾಹಿತಿ ಡಾ। ವಸಂತಕುಮಾರ ಪೆರ್ಲ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕ, ನಗರದ  ಶಾರದಾ ವಿದ್ಯಾಲಯದಲ್ಲಿ ಏರ್ಪಡಿಸಿದ ಪ್ರೊ. ಅಮೃತ ಸೋಮೇಶ್ವರರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು. ಅಮೃತರು ಕರಾವಳಿಯ ಮೂರೂ ಜಿಲ್ಲೆಗಳ ಸಮರ್ಥ ಪ್ರತಿನಿಧಿಯಾಗಿ ಗೋಚರಿಸುತ್ತಿದ್ದರು ಮತ್ತು ಸರ್ವರನ್ನೂ ಸಮಭಾವ ಮತ್ತು ಸಮಪ್ರೀತಿಯಿಂದ ಕಾಣುತ್ತಿದ್ದರು. ಸಾಹಿತ್ಯ, ಕಲೆ, ಯಕ್ಷಗಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಅವರದು ಶಿಖರಪ್ರಾಯ ಸಾಧನೆ ಎಂದು ವಿವರಿಸಿದರು.

ಕ.ಸಾ.ಪ ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು, ಕ.ಸಾ.ಪ ಕೇಂದ್ರ ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು. ಘಟಕದ ಡಾ। ಮೀನಾಕ್ಷಿ ರಾಮಚಂದ್ರ ಅಮೃತರೊಂದಿಗಿನ ಒಡನಾಟ,  ಅವರ ಮಾರ್ಗದರ್ಶನ, ಒಲುಮೆ ಮತ್ತು ನರ್ಮದಕ್ಕನೂ ಸೇರಿ ಮನೆಯವರೆಲ್ಲರ ಪ್ರೀತಿಯ ಮೆಲುಕು ಹಾಕುತ್ತಾ ಕಂಬನಿಯ ಕಾಣಿಕೆಯಿತ್ತರು. ವಿದ್ವಾನ್ ಚಂದ್ರಶೇಖರ ನಾವಡರು ಅಮೃತರಿಗೆ ರೂಪಕ, ನೃತ್ಯ ನಿರ್ದೇಶನದ ಬಗ್ಗೆ ಇದ್ದ ಪಾಂಡಿತ್ಯವನ್ನು ವಿವರಿಸಿ ನೃತ್ಯವನ್ನು ಸ್ವತಃ ಅಭಿನಯಿಸಿ ಪ್ರತ್ಯಕ್ಷೀಕರಿಸಿದರು. ಅಮೃತರ ನೇರ ಶಿಷ್ಯ ರಘು ಇಡ್ಕಿದು ಅವರು, ಅವರ ಪಾಠ ಪ್ರವಚನಗಳ ಬಗೆಗೆ ಬೆಳಕು ಚೆಲ್ಲುತ್ತಾ, ಉದಯೋನ್ಮುಖ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದ ಪರಿಯನ್ನು ಪರಿಚಯಿಸಿದರು. ತಾಲೂಕು ಘಟಕದ ಅಧ್ಯಕ್ಷ  ಡಾ। ಮಂಜುನಾಥ ರೇವಣ್ಕರ್ ಮಾತನಾಡಿ, ಅಮೃತರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದರು.

Also Read  ಬೀದಿ ನಾಯಿಗಳ ದಾಳಿ- ಬಾಲಕ ಗಂಭೀರ

ಘಟಕದ ಗೌ. ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ನಿರ್ವಹಿಸಿದರು. ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ಸದಸ್ಯರಾದ ಬಿ. ಕೃಷ್ಣಪ್ಪ ನಾಯ್ಕ್, ರತ್ನಾವತಿ ಜೆ ಬೈಕಾಡಿ, ಸುಖಲಾಕ್ಷಿ, ಉಷಾ ಜಿ.ಪ್ರಸಾದ್, ರವೀಂದ್ರನಾಥ್ ಕೆ.ಪಿ. ಹಾಗೂ ನಿಜಗುಣ ದೊಡ್ಡಮನಿ ಉಪಸ್ಥಿತರಿದ್ದು ಪುಷ್ಪ ನಮನ ಸಲ್ಲಿಸಿದರು.

Also Read  ವೇತನ ಹೆಚ್ಚು ಮಾಡಿಲ್ಲ ಅಂತ ಮಾಲೀಕರ ಮನೆಯಲ್ಲಿ ಕಳ್ಳತನ… ಆರೋಪಿ ಅರೆಸ್ಟ್​..

error: Content is protected !!
Scroll to Top