(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ. 12. ಮೂರು ದಿನದ ಹಿಂದೆ ಸಾಯಂಕಾಲದ ವೇಳೆಗೆ ಉದನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಗಾಂಭೀರ್ಯದಿಂದ ಸಂಚರಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯೊಂದು ಇದೀಗ ಮತ್ತೆ ಉದನೆಯಲ್ಲಿ ಹಗಲು ವೇಳೆಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಉದನೆ- ಶಿಬಾಜೆ ರಸ್ತೆಯಲ್ಲಿರುವ ಉದನೆ ಹೈಸ್ಕೂಲ್ ಸಮೀಪ ಶುಕ್ರವಾರದಂದು ಬೆಳಗ್ಗೆ 9.30ರ ವೇಳೆಗೆ ಕಾಡಾನೆಯೊಂದು ಹೆದ್ದಾರಿ ದಾಟುತ್ತಿರುವ ದೃಶ್ಯ ಕಂಡು ಬಂದಿದೆ. ಶಿರಾಡಿ ಗ್ರಾ.ಪಂ.ನ ಕುಡಿಯುವ ನೀರು ನಿರ್ವಾಹಕ ಸನಿಲ್‌ಕುಮಾರ್ ಅವರು ಉದನೆಯಿಂದ ಕಳಪ್ಪಾರುಗೆ ತೆರಳುತ್ತಿದ್ದ ವೇಳೆ ಉದನೆಯ ಹೈಸ್ಕೂಲ್‌ನಿಂದ ಸ್ವಲ್ಪ ದೂರದಲ್ಲಿ ಕಾಡಾನೆ ಹೆದ್ದಾರಿ ದಾಟುತ್ತಿರುವುದು ಕಂಡುಬಂದಿದೆ. ಸನಿಲ್‌ಕುಮಾರ್ ಅವರು ತಮ್ಮ ಮೊಬೈಲ್‌ನಲ್ಲಿ ಕಾಡಾನೆ ಹೆದ್ದಾರಿ ದಾಟುತ್ತಿರುವ ದೃಶ್ಯ ಸೆರೆ ಹಿಡಿದಿದ್ದು, ಅದು ಇದೀಗ ವೈರಲ್ ಆಗಿದೆ. ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತಿರುವ ಉದನೆ -ಶಿಬಾಜೆ ಹೆದ್ದಾರಿಯ ಒಂದು ಬದಿಯ ಅರಣ್ಯ ಪ್ರದೇಶದಿಂದ ಬಂದ ಆನೆ ರಸ್ತೆ ದಾಟಿ ಇನ್ನೊಂದು ಬದಿಯ ಅರಣ್ಯದೊಳಗೆ ಸಂಚರಿಸಿದೆ ಎನ್ನಲಾಗಿದೆ.
ಆನೆ ಹೆದ್ದಾರಿಯನ್ನು ದಾಟುವ ಮೂರು-ನಾಲ್ಕು ನಿಮಿಷದ ಮೊದಲು ಉದನೆ ಹೈಸ್ಕೂಲ್‌ನ ಅಡುಗೆ ಸಿಬ್ಬಂದಿ ಮಹಿಳೆಯೋರ್ವರು ಇದೇ ಹೆದ್ದಾರಿಯಲ್ಲಿ ನಡೆದುಕೊಂಡು ಬಂದಿದ್ದು, ಆನೆ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕೆಲವು ದಿನಗಳಿಂದ ಶಿರಾಡಿ ಗ್ರಾಮದ ಉದನೆ ಹಾಗೂ ಕುದ್ಕೋಳಿ ಭಾಗದಲ್ಲಿ ಹಗಲು ವೇಳೆಯಲ್ಲೇ ಕಾಡಾನೆಗಳು ಗ್ರಾಮಸ್ಥರಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ರಾತ್ರಿ ವೇಳೆ ತೋಟಗಳಿಗೆ ಕಾಡಾನೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿಗೊಳಿಸುತ್ತಿರುವುದರಿಂದ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.