(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ. 11. ಕಾಂಗ್ರೆಸ್ ಪಕ್ಷವು ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದಾಗಿ ಬುಧವಾರದಂದು ತಿಳಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯ ಲಾಭಕ್ಕಾಗಿ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಂದ ಅಪೂರ್ಣ ಮಂದಿರದ ಉದ್ಘಾಟನೆಯನ್ನು ಮಾಡಲಾಗುತ್ತಿದೆ. 2019ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಮತ್ತು ಶ್ರೀರಾಮನನ್ನು ಆರಾಧಿಸುವ ಕೋಟ್ಯಂತರ ಜನರ ಭಾವನೆಗಳನ್ನು ಗೌರವಿಸಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ ರಂಜನ ಚೌಧುರಿ ಅವರು ಸ್ಪಷ್ಟವಾಗಿ ಆರೆಸ್ಸೆಸ್/ಬಿಜೆಪಿ ಕಾರ್ಯಕ್ರಮವಾಗಿರುವ ಮಂದಿರ ಉದ್ಘಾಟನೆಯ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.