‘ರಾಜ್ಯದ ಸ್ವಚ್ಛ ಗ್ರಾಮ’ ಖ್ಯಾತಿಯ ಕಡಬದಲ್ಲೀಗ ಮರೀಚಿಕೆಯಾಗಿರುವ ಸ್ವಚ್ಛತೆ ► ಬಯಲು ಶೌಚದ ದುರ್ನಾಥದಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಅನಿವಾರ್ಯತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.11. ಸ್ವಚ್ಛ ಗ್ರಾಮವೆಂದು ರಾಜ್ಯದ ಗಮನ ಸೆಳೆದಿದ್ದ ಕಡಬ ತಾಲೂಕಿನ ಕೇಂದ್ರ ಸ್ಥಾನವಾದ ಕಡಬದಲ್ಲಿ ಇದೀಗ ಸ್ವಚ್ಛತೆಯ ವಿಚಾರದಲ್ಲಿ ಮೂಗು ಮುಚ್ಚಿ ಕೊಳ್ಳುವಂತಾಗಿದೆ.

ಕಡಬ ತಾಲೂಕಾಗಿ ಘೋಷಣೆಯಾಗಿದ್ದು ಈಗಾಗಲೇ ತಾಲೂಕು ಕೇಂದ್ರದ ಕಾರ್ಯವೈಖರಿಗಳು ಭರದಿಂದ ಸಾಗುತ್ತಿದ್ದರೂ ಇಲ್ಲಿನ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾತ್ರ ಅಧೋಗತಿ ತಲುಪಿದ್ದು, ಎರಡು ಶೌಚಾಲಯಗಳನ್ನು ಬಂದ್ ಮಾಡಿದ್ದರ ಪರಿಣಾಮವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ದ್ರವ ತ್ಯಾಜ್ಯ ಮತ್ತು ಘನ ತಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ರಾಜ್ಯದಲ್ಲಿ ಮಾದರಿ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಹಲವು ಪ್ರಶಸ್ತಿ, ಬಿರುದುಗಳನ್ನು ತನ್ನ ಮಡಿಲಿಗೆ ಎಳೆದುಕೊಂಡಿದ್ದ ಕಡಬ ಗ್ರಾಮ ಪಂಚಾಯತ್ ಶೌಚಾಲಯದಲ್ಲಿ ಸ್ವಚ್ಛತೆಯ ಕಡೆಗೆ ಗಮನ ಹರಿಸುವಲ್ಲಿ ಎಡವಿದೆ. ಮೂಗು ಬಿಡಲು ಸಾಧ್ಯವಾಗದಷ್ಟು ದುರ್ನಾಥ ಶೌಚಾಲಯದಿಂದ ಬೀರುತ್ತಿದ್ದರೂ, ಕಡಬ ಪೇಟೆಗೆ ಹೊಂದಿಕೊಂಡೇ ಇರುವ ಕಡಬ ಗ್ರಾಮ ಪಂಚಾಯತ್ ನವರು ಕಡೆಗೆ ಗಮನ ಹರಿಸಿದಂತೆ ಕಾಣುತ್ತಿಲ್ಲ. ಕಡಬದ ಹೃದಯಭಾಗದಲ್ಲಿ ಈ ಹಿಂದೆ ಇದ್ದ ಶೌಚಾಲಯವನ್ನು ಬಂದ್ ಮಾಡಿ ದುರಸ್ತಿ ಮಾಡಲಾಗುತ್ತಿದೆ. ಇದರ ಪಕ್ಕದಲ್ಲಿ ಕಳೆದ ಆರು ತಿಂಗಳ ಹಿಂದೆ ನೂತನವಾಗಿ ನಿರ್ಮಿಸಲಾಗಿದ್ದ ಶೌಚಾಲಯವನ್ನೂ ದುರಸ್ತಿಯ ನೆಪದಲ್ಲಿ ಕಳೆದ 10 ದಿನಗಳಿಂದ ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಸ್ವಚ್ಛ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಕಡಬದ ಪೇಟೆಯಲ್ಲಿ ಬಹುಕಾಲದಿಂದಿದ್ದ ಸುಸಜ್ಜಿತ ಶೌಚಲಯವಿಲ್ಲವೆಂಬ ಕೊರಗಿಗೆ ನಿರ್ಮಲ ಭಾರತ ಯೋಜನೆಯಡಿಯಲ್ಲಿ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೋಣೆಗಳಿದ್ದ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಕಳೆದ ಆರು ತಿಂಗಳ ಹಿಂದೆ ಕಾರ್ಯರಂಭವಾದ ನೂತನ ಶೌಚಾಲಯ ನಿರ್ವಹಣೆ ಕೊರತೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಶೌಚಾಲಯದ ಹೊಂಡ ಆರೇ ತಿಂಗಳಲ್ಲಿ ಭರ್ತಿಯಾಗಿದೆ‌. ಇದೀಗ ದುರಸ್ತಿ ನೆಪದಲ್ಲಿ ಈ ಶೌಚಾಲಯವನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.

ನೂತನ ಶೌಚಾಲಯದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆಯಿಲ್ಲದ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬಳಕೆಯಿಲ್ಲದ ಹಳೇ ಶೌಚಾಲಯವನ್ನು ಮಹಿಳೆಯರಿಗೆ ಮೀಸಲಿಡುವ ಸಲುವಾಗಿ ನವೀಕರಿಸಲಾಗುತ್ತಿದೆ. ದಿನವೊಂದಕ್ಕೆ ಸಾವಿರಾರು ಸಾರ್ವಜನಿಕರು ವಿದ್ಯಾರ್ಥಿಗಳು ಬಂದು ಹೋಗುವ ಕಡಬ ಪೇಟೆಯಲ್ಲಿ ಸುಸಜ್ಜಿತ ಶೌಚಲಯವಿಲ್ಲದೆ ಬಹಿರ್‍ದೆಸೆಗೆ ಪರದಾಡುವಂತಾಗಿದೆ. ಶೌಚಾಲಯದೊಳಗಡೆ ಮದ್ಯದ ಬಾಟಲಿ, ಬೀಡಿ ಸಿಗರೇಟ್ ಮೊದಲಾದ ನಿರುಪಯುಕ್ತ ವಸ್ತುಗಳನ್ನು ಎಸೆಯುತ್ತಿರುವುದು ಶೌಚಲಯದ ಸ್ಚಚ್ಚ ನಿರ್ವಹಣೆಗೆ ಧಕ್ಕೆಯಾಗಿದೆ. ಶೌಚಾಲಯದ ಬಳಕೆಯಲ್ಲಿ ಸಾರ್ವಜನಿಕರು ಸ್ಚಚ್ಚತೆ ಕಾಪಾಡಿಕೊಳ್ಳಬೇಕಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಪಿ ಪಿ ವರ್ಗಿಸ್, ಶೌಚಾಲಯದ ಹೊಂಡ ದುರಸ್ತಿ ಮಾಡುವ ಸಲುವಾಗಿ ಶೌಚಾಲಯವನ್ನು ಬಂದ್ ಮಾಡಲಾಗಿದೆ. ಎರಡು ದಿನದೊಳಗೆ ದುರಸ್ತಿ ಮಾಡಿ ಸಾರ್ವಜನಿಕರು ಉಪಯೋಗಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

error: Content is protected !!

Join the Group

Join WhatsApp Group