ಅಜಿಲಮೊಗರು ಹೋಗುವ ರಸ್ತೆಯಲ್ಲಿ ರಾತ್ರಿ ಕಂಡುಬಂದ ಯಮರಕ್ಕಸ- ಭಯಭೀತರಾದ ಪ್ರಯಾಣಿಕರು – ವೈರಲ್ ಫೇಕ್ ಹರಡಿದ ವಿಘ್ನ ಸಂತೋಷಿಗಳು

(ನ್ಯೂಸ್ ಕಡಬ) newskadaba.com ಮಾಣಿ, ಜ. 05. ಕಾರು ಚಾಲಕ ತನಗಾದ ಭಯವನ್ನು ವಿವರಿಸುವ ಬ್ಯಾರಿ ಭಾಷೆಯ ಆಡಿಯೋ ಹಾಗೂ ಯಮರಕ್ಕಸ ಹಾದು ಹೋದದ್ದು ಎಂದು ಬಿಂಬಿಸುವ ಫೋಟೋ ಒಂದನ್ನು ಶೇರ್ ಮಾಡಿ ಇದು ಅಜಿಲಮೊಗರು ದರ್ಗಾಕ್ಕೆ ರಾತ್ರಿ ವೇಳೆ ಹೋಗುವಾಗ ಉಂಟಾದ ಘಟನೆ. ಯಾರು ಕೂಡಾ ಆ ರಸ್ತೆಯಲ್ಲಿ ಹೋಗಬೇಡಿ ಎಂದು ಸಂದೇಶ ನೀಡುವ ಫೇಕ್ ಸುದ್ದಿಯೊಂದು ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.


ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಾಲಿದಾ ಉರೂಸ್ ಕಳೆದ ವಾರವಷ್ಟೇ ಸಮಾಪ್ತಿಗೊಂಡಿದ್ದು, ಉರೂಸ್ ಕಾರ್ಯಕ್ರಮ ಮುಗಿದರೂ ಜನರು ಝಿಯಾರತ್ ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿರುವುದು ಕಂಡುಬಂದಿದೆ.‌ ಅಜಿಲಮೊಗರು ದರ್ಗಾಕ್ಕೆ ಹೋಗಲು ಬಿ.ಸಿ.ರೋಡ್- ಬಂಟ್ವಾಳ- ಮಣಿಹಳ್ಳ ಮಾರ್ಗವಾಗಿ, ಉಪ್ಪಿನಂಗಡಿ ಬಾಜಾರ- ಸರಳಿಕಟ್ಟೆ ಮಾರ್ಗವಾಗಿ, ಮಾಣಿ- -ಗಡಿಯಾರ ಕಡೇಶ್ವಾಲ್ಯ ಮಾರ್ಗವಾಗಿ ದೋಣಿಯ ಮೂಲಕ, ಮತ್ತು ಈ ಬಾರಿ ಪೆರ್ನೆ ಜಂಕ್ಷನ್ ನಿಂದ ಡ್ಯಾಂ ರಸ್ತೆಯಲ್ಲಿ ತೆಕ್ಕಾರು ಮೂಡಡ್ಕ ಸಂಪರ್ಕಿಸುವ ರಸ್ತೆಯಲ್ಲಿ ಹೋಗುವ ವ್ಯವಸ್ಥೆ ಇತ್ತು. ಪೆರ್ನೆಯಿಂದ ಡ್ಯಾಂ ರಸ್ತೆಯ ಮೂಲಕ ರಾತ್ರಿ ವೇಳೆ ಹೋಗುವವರಿಗೆ ಸ್ವಲ್ಪ ಇಕ್ಕಟ್ಟಾದ ಭಯಮೂಡಿಸುವಂತಹ ಒಳರಸ್ತೆಯಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನೇ ಮತ್ತಷ್ಟು ಭಯ ಹೆಚ್ಚಿಸಲು ವಿಘ್ನ ಸಂತೋಷಿಗಳು ಆಡಿಯೋವೊಂದನ್ನು ಕ್ರಿಯೇಟ್ ಮಾಡಿ ಯೂಟ್ಯೂಬ್ ಚಾನೆಲ್ ಒಂದರ Ghost ವಿಡಿಯೋದಿಂದ ಫೋಟೋ ಸ್ಕ್ರೀನ್‌ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಇದನ್ನು ಹಿಂದೆ ಮುಂದೆ ನೋಡದೇ ಜನರು ಶೇರ್ ಮಾಡಿದ್ದು ಕೆಲವೊಂದು ಊರಿನಲ್ಲಿ ಅದಕ್ಕೆ ಬೇರೆಯೇ ಊರಿನ ಹೆಸರು ಹಾಕಿ ಆ ರಸ್ತೆಯಲ್ಲಿ ರಾತ್ರಿ ಕಾಣಲು ಸಿಕ್ಕಿದ ಬ್ರಹ್ಮ ರಕ್ಕಸ ಎಂಬ ಒಕ್ಕಣೆ ಬರೆದು ಶೇರ್ ಮಾಡಲಾಗುತ್ತಿದೆ. ಒಟ್ಟಾರೆ ಈ ವಿಘ್ನ ಸಂತೋಷಿಗಳು ಹರಡುವ ಫೇಕ್ ಸಂದೇಶದಿಂದಾಗಿ ಜನರು ರಾತ್ರಿ ವೇಳೆ ಒಳ ರಸ್ತೆಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ವರದಿ- ಸಲೀಂ ಮಾಣಿ

Also Read  ರಾಮಕುಂಜ ಪ್ರೌಢಶಾಲೆಯಲ್ಲಿ ವನಮಹೋತ್ಸವ

error: Content is protected !!
Scroll to Top