(ನ್ಯೂಸ್ ಕಡಬ) newskadaba.com ಕಡಬ, ಜ. 02. ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೋರ್‌ವೆಲ್ ಲಾರಿಯಿಂದ ಕೊಳವೆ ಬಾವಿ ಕೊರೆಯುವ ಸುಮಾರು 25 ಕೆ.ಜಿ. ತೂಕದ 5 ಕಬ್ಬಿಣದ ಡ್ರಿಲ್ಲಿಂಗ್ ಬಿಟ್ ಕಳವುಗೈದಿರುವ ಘಟನೆ ನಡೆದಿದೆ.
ಕಡಬ ತಾಲೂಕು ವ್ಯಾಪ್ತಿಯಲ್ಲಿ ಪುತ್ತೂರಿನ ಯಮುನಾ ಬೋರ್‌ವೆಲ್ಸ್ ನವರಿಗೆ ಕರ್ನಾಟಕ ಸರಕಾರದ ಜಲಜೀವನ ಯೋಜನೆಯಡಿ ಕೊಳವೆ ಬಾವಿ ಕೊರೆಯಲು ಟೆಂಡರ್ ಆಗಿದ್ದು, ಅದರಂತೆ ಬಿಳಿನೆಲೆ ಗ್ರಾ.ಪಂಚಾಯತ್ ಗೆ ಸಂಬಂಧಿಸಿದ ಕೊಳವೆ ಬಾವಿ ಕೊರೆಯಲೆಂದು ಡಿ. 29ರಂದು ರಾತ್ರಿ 12 ಗಂಟೆಗೆ ಬಂದು ಲಾರಿಯನ್ನು ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಕೆಲಸಗಾರರು ವಿಶ್ರಾಂತಿ ಪಡೆಯುತ್ತಿದ್ದರು. ಡಿ. 30ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ಲಾರಿಯನ್ನು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿದ್ದ ಕೊಳವೆ ಬಾವಿ ಕೊರೆಯುವ ಸುಮಾರು 25 ಕೆ.ಜಿ ತೂಕದ 5 ಕಬ್ಬಿಣದ ಡ್ರಿಲ್ಲಿಂಗ್ ಬಿಟ್‌ಗಳು ಕಳವುಗೊಂಡಿರುವುದು ಬೆಳಕಿಗೆ ಬಂದಿದೆ. ಕಳವಾದ ಡ್ರಿಲ್ಲಿಂಗ್ ಬಿಟ್‌ಗಳ ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಯಮುನಾ ಬೋರ್‌ವೆಲ್ ಲಾರಿಯಲ್ಲಿ ಮ್ಯಾನೇಜರ್ ಆಗಿರುವ ದೋಲ್ಪಾಡಿ ನಿವಾಸಿ ದೀಕ್ಷಿತ್ ಎಂಬವರು ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 110/2023 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.