(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ಮೂರು ವರ್ಷಗಳ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೊರೋನಾ ಇದೀಗ ಕೇರಳದಲ್ಲಿ ಮತ್ತೆ ಏರಿಕೆ ಕಂಡಿರುವ ಕುರಿತು ವರದಿಯಾಗಿದೆ.
ಸಿಂಗಾಪುರ, ಇಂಡೋನೇಷ್ಯಾ ಹಾಗೂ ಮಲೇಷ್ಯಾ ದೇಶಗಳ ಬಳಿಕ ಇದೀಗ ಕೇರಳದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ದೃಢಪಡುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವಿಶೇಷ ನಿಗಾ ಇರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಈ ಕುರಿತಾಗಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಕಳೆದೆರಡು ದಿನಗಳಿಂದ ತಾಲೂಕಿನ ವೈದ್ಯರ ಸಭೆ ನಡೆಯುತ್ತಿದ್ದು, ಬೆಳ್ತಂಗಡಿ, ಬಂಟ್ವಾಳ ಮತ್ತು ಮಂಗಳೂರಿನಲ್ಲಿ ವೈದ್ಯರ ಸಭೆ ನಡೆಸಲಾಗಿದೆ. ಹಾಗೆಯೇ ಶನಿವಾರ ಪುತ್ತೂರು ಮತ್ತು ಸುಳ್ಯ ತಾಲೂಕಿನ ವೈದ್ಯರ ಸಭೆ ನಡೆಸಲಾಗುತ್ತಿದೆ. ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಐಎಲ್‌ಐ, ಪ್ರಕರಣಗಳನ್ನು ನಿಗಾ ಇಡುವಂತೆ ವೈದ್ಯರಿಗೆ ಸೂಚಿಸಲಾಗಿದೆ.
ಈ ಸಂದರ್ಭ ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ವೈದ್ಯಾಧಿಕಾರಿ ಡಾ. ತಿಮ್ಮಯ್ಯ, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಕೋವಿಡ್ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದೆ ಎಂಬ ವರದಿ ಇದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹ ಗಾಬರಿಯ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದರೂ ಮುಂಜಾಗ್ರತಾ ದೃಷ್ಟಿಯಿಂದ ನಾವು ಸನ್ನದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.