ಪತನದ ಅಂಚಿನಲ್ಲಿ ಖಾಸಗಿ ಬಸ್ ಸೇವಾ ವ್ಯವಸ್ಥೆ – ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಆತಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 07. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಅತ್ಯುತ್ತಮ ಸೇವೆ ನೀಡುತ್ತಿದ್ದರೂ ಸರ್ಕಾರದ ಕೆಲವು ಧೋರಣೆಯಿಂದ ಬಸ್ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವು ಬಸ್ ಮಾಲೀಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸದಿದ್ದಲ್ಲಿ 110 ವರ್ಷಗಳ ಇತಿಹಾಸ ಹೊಂದಿರುವ ಖಾಸಗಿ ಬಸ್ಸಿನ ಸೇವಾ ವ್ಯವಸ್ಥೆ ಪತನಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಆತಂಕ ವ್ಯಕ್ತಪಡಿಸಿದೆ.


ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರದಂದು ದ.ಕ. ಜಿಲ್ಲಾ ಸಿಟಿ ಬಸ್ಸು ಮಾಲಕರ ಸಂಘದ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಸರ್ಕಾರದಿಂದ ನೀಡಲಾಗುವ ತೆರಿಗೆ ವಿನಾಯಿತಿ ಖಾಸಗಿ ಬಸ್ಸುಗಳಿಗೆ ಲಭ್ಯವಾಗುತ್ತಿಲ್ಲ. 50 ಪ್ರಯಾಣಿಕರನ್ನು ಸಾಗಿಸುವ ಖಾಸಗಿ ಬಸ್ಸು ಮೂರು ತಿಂಗಳಿಗೊಮ್ಮೆ 50,000 ರೂ. ಮುಂಗಡ ತೆರಿಗೆ ಪಾವತಿಸಬೇಕಾಗುತ್ತದೆ. ಇದು ಬಸ್ಸು ಮಾಲಕರಿಗೆ ಹೊರೆಯಾಗುತ್ತಿದೆ ಎಂದರು. ರಾಜ್ಯ ಸರ್ಕಾರ ಯಶಸ್ವಿನಿ, ಆಯುಷ್ಮಾನ್ ಕಾರ್ಡ್ ಯೋಜನೆಯ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಿಗೂ ಒದಗಿಸುತ್ತದೆ. ಆದರೆ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಒದಗಿಸುವ ಸೌಲಭ್ಯ ಖಾಸಗಿ ಬಸ್ಸುಗಳಿಗೆ ನೀಡುತ್ತಿಲ್ಲ. 1981ರಿಂದ ಖಾಸಗಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ ಜಾರಿಯಲ್ಲಿದೆ. ಸರ್ಕಾರದಿಂದ ಯಾವುದೇ ರೀತಿಯ ರಿಯಾಯಿತಿ, ಸಬ್ಸಿಡಿ ಖಾಸಗಿ ಬಸ್ಸುಗಳಿಗೆ ದೊರಕುತ್ತಿಲ್ಲ . ಇದರ ಜತೆಗೆ ಖಾಸಗಿ ಬಸ್ ವ್ಯವಸ್ಥೆ ಉತ್ತಮ ಸೇವೆ ನೀಡುತ್ತಿರುವ ರೂಟ್‌ಗಳಲ್ಲೇ ಸರ್ಕಾರಿ ಬಸ್ಸುಗಳನ್ನು ಹಾಕುವ ಮೂಲಕ ಅನಾರೋಗ್ಯಕರ ಪೈಪೋಟಿಗೆ ನೀಡಲಾಗುತ್ತಿದೆ ಎಂದು ಅವರು ದೂರಿದರು.
ಶಕ್ತಿ ಯೋಜನೆ ಸಹಿತ ಯಾವುದೇ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಬಸ್ ಸಂಚಾರವಿಲ್ಲದ ಊರುಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಗಮನ ಹರಿಸಬೇಕು. ಕರಾವಳಿಯಲ್ಲಿ 2 ಸಾವಿರ ಖಾಸಗಿ ಬಸ್ಸುಗಳಿವೆ. ಖಾಸಗಿ ಬಸ್ ವ್ಯವಸ್ಥೆ ಸ್ಥಗಿತಗೊಂಡರೆ ಈ ವ್ಯವಸ್ಥೆಯಡಿ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಅಝೀಝ್ ಪರ್ತಿಪ್ಪಾಡಿ ಖಾಸಗಿ ಬಸ್ಸು ಮಾಲಕರ ಸಮಸ್ಯೆಗಳನ್ನು ವಿವರಿಸಿದರು.

ನಿಕಟಪೂರ್ವ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಾತನಾಡಿ, ಮಾದರಿ ಖಾಸಗಿ ಬಸ್ ವ್ಯವಸ್ಥೆ ದ.ಕ. ಜಿಲ್ಲೆಯಲ್ಲಿದ್ದು, ವಿಶ್ವ ಬ್ಯಾಂಕ್‌ನವರು ಸಂಘಟಿತ ಬಸ್ಸು ವ್ಯವಸ್ಥೆಯ ಬಗ್ಗೆ ಅಧ್ಯಯನಕ್ಕಾಗಿ ನಮ್ಮಲ್ಲಿ ಮಾತುಕತೆ ನಡೆಸಿದ್ದರು. ದೇಶದ ಪ್ರಥಮ ಪ್ರಯೋಗವಾಗಿ ಚಲೋ ಆ್ಯಪ್ ನೀಡಿದ ಹೆಮ್ಮೆ ನಮ್ಮದು. ಖಾಸಗಿ ಬಸ್ಸುಗಳು ಶಿಸ್ತುಬದ್ಧ ಟೈಮಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಈ ಅವಧಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಹಾಕಿದಾಗ ಪೈಪೋಟಿಗೆ ಕಾರಣವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ ಎಂದರು. ಖಾಸಗಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳಾದ ರಾಮಚಂದ್ರ ನಾಯ್ಕ, ರಾಮಚಂದ್ರ ಪಿಲಾರ್, ರಾಜೇಶ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮೊದಲಾದವರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿದರು.

error: Content is protected !!

Join the Group

Join WhatsApp Group