ಪತ್ರಕರ್ತರ ಜಿಲ್ಲಾ ಸಮ್ಮೇಳನ – ಕಡಬದ ಹಿರಿಯ ಪತ್ರಕರ್ತ ಕೆ.ಎಸ್.ಬಾಲಕೃಷ್ಣ ಕೊಯಿಲ ರವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ನ. 23. ಮಂಗಳೂರಿನ‌ ಪುರಭವನದಲ್ಲಿ ನವೆಂಬರ್ 21ರಂದು ನಡೆದ ಪತ್ರಕರ್ತರ ಜಿಲ್ಲಾ ಸಮ್ಮೇಳನದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಕಡಬ ತಾಲೂಕು ವರದಿಗಾರ ಹಿರಿಯ ಪತ್ರಕರ್ತ ಕೆ.ಎಸ್ ಬಾಲಕೃಷ್ಣ ಕೊಯಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಡಬ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಇವರ ಪತ್ರಿಕಾ ಕ್ಷೇತ್ರದ ಸಾಧನೆಗಾಗಿ ಈ ಗೌರವ ಸಂದಿದೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 23 ವರ್ಷಗಳಿಂದ ವರದಿಗಾರರಾಗಿ ದುಡಿಯುತ್ತಾ ಕಡಬದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.  ಕೃಷಿ, ರಾಜಕೀಯ, ಸಾಮಾಜಿಕ, ಮಾನವೀಯ ವಿಚಾರಗಳ ಬಗ್ಗೆ, ಸಮಾಜದ ಎಲ್ಲಾ ಸ್ತರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಲೇಖನಗಳು, ವರದಿಗಳು ಹೀಗೆ ಸಾವಿರಕ್ಕೂ ಮಿಕ್ಕ ಲೇಖನಗಳನ್ನು  ಬರೆದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ 25ಕ್ಕೂ ಹೆಚ್ಚು ಲೇಖನಗಳು ರಾಜ್ಯಮಟ್ಟದ ಸುದ್ದಿಗಳಾಗಿ ಪ್ರಕಟಗೊಂಡು ಇವರಿಗೆ ಹೆಸರು ತಂದುಕೊಟ್ಟಿದೆ. ಜನ‌ ಈ ದಿನ, ನಿರಂತರ ಶಿಕ್ಷಣ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲೂ ದುಡಿದಿರುವ ಇವರ ಸದಾ ಬಡವರು, ದೀನದಲಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ ಮಿಡಿಯುತ್ತಾ ಅನೇಕ ಮಾನವೀಯ ಲೇಖನಗಳನ್ನು ಬರೆದು ನ್ಯಾಯ ಒದಗಿಸಿಕೊಟ್ಟ ಅನೇಕ ಉದಾಹರಣೆಗಳಿವೆ. ಇಂತಹ ಒಬ್ಬ ಪ್ರತಿಭಾನ್ವಿತ ಪರ್ತಕರ್ತನನ್ನು ಸನ್ಮಾನಿಸಿ ಗೌರವಿಸಿರುವುದು ಕಡಬಕ್ಕೆ ಹೆಮ್ಮೆಯ ವಿಷಯವಾಗಿದೆ. ಕಳೆದ ವರ್ಷ ಬಿಳಿನೆಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂಡಾ ಇವರನ್ನು ಸನ್ಮಾನಿಸಿ ಗೌರವಿಸಿರುವುದು ಉಲ್ಲೇಖನೀಯ. ಮಂಗಳೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಇವರನ್ನು‌ ಸನ್ಮಾನಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,  ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಜಯರಾಜ್ ಅಮೀನ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

error: Content is protected !!
Scroll to Top