(ನ್ಯೂಸ್ ಕಡಬ) newskadaba.com ಮಂಗಳೂರು, ನ. 23. ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗರೂಕರಾಗಿರಬೇಕು. ಅಗತ್ಯವಿಲ್ಲದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳುವಾಗ ಎಚ್ಚರಿಕೆ ಅತೀ ಅಗತ್ಯ ಎಂದು ಕಡಬ ತಾಲೂಕಿನ ಐತ್ತೂರು ನಿವಾಸಿ ಚಂದ್ರಶೇಖರ್ ರವರು ಹೇಳಿದರು.
ತಾನು ಮಾಡದ ತಪ್ಪಿಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸುಮಾರು ಒಂದು ವರ್ಷಗಳ ಕಾಲ ಜೈಲುವಾಸ ಅನುಭವಿಸಿ ತಾಯ್ನಾಡಿಗೆ ವಾಪಾಸಾಗಿರುವ ಅವರು ಗುರುವಾರದಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ರೀತಿ ಮನವಿ ಮಾಡಿದರು. ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ಹ್ಯಾಕರ್‌ಗಳ ವಂಚನಾ ಜಾಲಕ್ಕೆ ಸಿಲುಕಿ ಏಳು ತಿಂಗಳುಗಳ ಕಾಲ ರಿಯಾದ್‌ನ ಜೈಲಿನಲ್ಲಿ ಹಾಗೂ ನಾಲ್ಕು ತಿಂಗಳು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಬಂಧಿಯಾಗಿದ್ದ ಚಂದ್ರಶೇಖರ್, ತನ್ನಂತೆ ಇನ್ನು ಯಾರೂ ಇಂತಹ ತೊಂದರೆಗೆ ಒಳಗಾಗಬಾರದು ಎಂದು ಹೇಳಿದರು. ಅಲ್ಲದೇ ತನ್ನಂತೆ ವಿನಾ ಕಾರಣ ಸಂಕಷ್ಟಕ್ಕೆ ಸಿಲುಕಿದ ಅನೇಕ ಮಂದಿ ಭಾರತೀಯರು ರಿಯಾದ್ ಜೈಲಿನಲ್ಲಿದ್ದಾರೆ, ಕನಿಷ್ಠ ಅವರ ನೆರವಿಗಾದರೂ ರಿಯಾದ್‌ನಲ್ಲಿರುವ ಭಾರತೀಯ ವಿದೇಶಾಂಗ ಇಲಾಖೆ ಪ್ರಮಾಣಿಕ ಪ್ರಯತ್ನ ನಡೆಸಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ್ ಸಹೋದರ ಹರೀಶ್ ಕಡಬ, ಮುಖಂಡ ಬಾಲಕಷ್ಣ ಬಳಕ ಮೊದಲಾದವರು ಉಪಸ್ಥಿತರಿದ್ದರು.