(ನ್ಯೂಸ್ ಕಡಬ) newskadaba.com ಸುಳ್ಯ, ನ. 23. ಪರವಾನಗಿ ಇಲ್ಲದೇ ನಾಡಕೋವಿ ಹೊಂದಿದ್ದ ಪ್ರಕರಣದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಸುಳ್ಯ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ವಿಧಿಸಿರುವ ಕುರಿತು ವರದಿಯಾಗಿದೆ.
2013ರಲ್ಲಿ ಕಣ್ಣೂರು ಜಿಲ್ಲೆಯ ಎಂ.ಕೆ. ಅಜಿತ್ ಎಂಬಾತ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿರುವ ಮನೆಯ ಅಂಗಳಕ್ಕೆ ಪರವಾನಿಗೆ ಇಲ್ಲದ ನಾಡ ಕೋವಿ, ಗನ್ ಪೌಡರ್ ಹಾಗೂ 2 ಕಬ್ಬಿಣದ ಕಡ್ಡಿಗಳನ್ನು ತಂದಿದ್ದು, ಈ ವಿಚಾರ ಪೊಲೀಸರಿಗೆ ತಿಳಿದು ಆರೋಪಿಯ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು, ಇದೀಗ ಅಪರಾಧ ಸಾಬೀತಾಗಿದೆ. ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಬಿ.ಮೋಹನ್ ಬಾಬು ಅವರು ಅಪರಾಧಿಗೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಕಲಂ 3(1), 25 ಯಡಿಯಲ್ಲಿ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 10,000 ದಂಡ ಪಾವತಿಯ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.