(ನ್ಯೂಸ್ ಕಡಬ) newskadaba.com ಮಂಗಳೂರು, ನ. 22. ಪ್ರತಿಭಾ ಪುರಸ್ಕಾರಗಳು ಮಕ್ಕಳ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಹೇಳಿದರು. ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬಾಲ ಮಂದಿರದ ಅನಾಥ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನದಲ್ಲಿ ಸಾಧನೆ ಮಾಡಲು ಅನೇಕ ಅಡ್ಡಿಗಳು ಎದುರಾದಾಗಲೂ ನಾವು ಮುನ್ನುಗಬೇಕು. ಪ್ರಪಂಚದಲ್ಲಿ ಯಾರೊಬ್ಬರ ಸಹಾಯವಿಲ್ಲದಿದ್ದರೂ ದೇವರ ಸಹಾಯ ನಮಗೆ ಇರುತ್ತದೆ. ನಮ್ಮ ಶ್ರಮಕ್ಕೆ ಸರಿಯಾದ ಫಲವನ್ನು ದೇವರು ನೀಡುತ್ತಾರೆ. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಆದರ್ಶವನ್ನಾಗಿಟ್ಟುಕೊಂಡು ಜೀವನದಲ್ಲಿ ಸಾಧಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಗುರುಗಳಾದ ಕೆ.ಗಾದಿಲಿಂಗಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.