ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಸಹಾಯವಾಣಿ ಜಾಗೃತಿ ಮೂಡಿಸಲು ಆಯೋಗ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 17. ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವಸತಿ ನಿಲಯದಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಇದರ ಬಗ್ಗೆ ತರಬೇತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೆಸ್ವಾಮಿ ಕೆ.ಟಿ ಹೇಳಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ಶಾಲೆ, ಪಂಚಾಯತ್ ಕಟ್ಟಡ ಹಾಗೂ ಬಸ್ ಸ್ಟ್ಯಾಂಡ್‍ ಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು 112ನ್ನು ಕಡ್ಡಾಯವಾಗಿ ಗೋಡೆಯಲ್ಲಿ ಶಾಶ್ವತ ಬರಹದಲ್ಲಿಯೇ ಬರೆಯಬೇಕು. ಯಾವುದೇ ಕಾರಣಕ್ಕೂ ಪೇಪರ್ ಪ್ರಿಂಟ್ ಹಾಕಬಾರದು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಶಾಲೆ, ವಸತಿ ನಿಲಯಗಳ ಕಟ್ಟಡದ ಮೇಲೆ ವಿದ್ಯುತ್ ತಂತಿ ಹಾದು ಹೋಗುವುದು ಅಥವಾ ಶಾಲಾ ಮೈದಾನದಲ್ಲಿ ಟ್ರಾನ್ಸ್ ಫಾರ್ಮರ್ ಕಂಬಗಳು ಇದ್ದರೆ ಅಂತಹ ಶಾಲೆಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಪ್ರತಿ ಗ್ರಾಮದಲ್ಲಿ ಅತೀ ಹೆಚ್ಚು ಮಕ್ಕಳು ಇರುವ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿ ವಿದ್ಯಾರ್ಥಿಗಳು ಸ್ವಾತಂತ್ರ್ಯವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಆರೋಗ್ಯ ಇಲಾಖೆಯವರು ಪ್ರತಿ ಆಸ್ಪತ್ರೆಯಲ್ಲಿ ಹೊರರೋಗಿ ಚೀಟಿಯಲ್ಲಿ ಬಾಲ್ಯ ವಿವಾಹ ಶಿಕ್ಷರ್ಹ ಅಪರಾಧ ಎಂದು ಮುದ್ರಿಸಬೇಕು ಎಂದು ಅವರು ಸೂಚಿಸಿದರು. ಮೈತ್ರಿ ಮುಟ್ಟಿನ ಕಪ್ ಯೋಜನೆಯಲ್ಲಿ 11,556 ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ಇಂದ್ರಧನುಷ್ ಕಾರ್ಯಕ್ರಮದಡಿಯಲ್ಲಿ 0-6 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಸಭೆಗೆ ಮಾಹಿತಿ ನೀಡಿದರು.

Also Read  ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದ ಔಷಧ ವಿತರಣೆ

ಟ್ಯೂಷನ್ ಸೆಂಟರ್ ನೊಂದಣಿ ಕಡ್ಡಾಯ-

1ರಿಂದ 10ನೇ ತರಗತಿಯವರೆಗೆ ಟ್ಯೂಷನ್ ಕೇಂದ್ರಗಳು ಶಾಲಾ ಶಿಕ್ಷಣ ಇಲಾಖೆಯಲ್ಲಿ ಹಾಗೂ ಪಿಯುಸಿ ಟ್ಯೂಷನ್ ಕೇಂದ್ರಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ನೋಂದಣಿ ಮಾಡಬೇಕು ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸುವಂತೆ ಅವರು ಸೂಚಿಸಿದರು.

ಭಿಕ್ಷಾಟಣೆ- ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟಣೆ ಮಾಡುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವರದಿಯಾಗುತ್ತಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು, ಪೊಲೀಸರು, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಸಹಾಯವಾಣಿ ಜಂಟಿಯಾಗಿ ಕಾರ್ಯನಿರ್ವಹಿಸಿ ಭಿಕ್ಷಾಟಣೆಯಿಂದ ಮಕ್ಕಳನ್ನು ರಕ್ಷಿಸಬೇಕು ಎಂದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್.ಎ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Also Read  ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಇಳಿಕೆ ಕಂಡ ಕೊರೋನಾ ➤ 24 ಗಂಟೆಗಳಲ್ಲಿ 120 ಮಂದಿಗೆ ಕೊರೋನಾ ಪಾಸಿಟಿವ್

 

error: Content is protected !!
Scroll to Top