(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 14. ಕಂಬಳವನ್ನು 24 ಗಂಟೆಯಲ್ಲಿ ಮುಕ್ತಾಯಗೊಳಿಸುವ ಹಿನ್ನೆಲೆ ಹೊಸ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದ ಕಂಬಳ ಹಾಗೂ ಶಿಸ್ತು ಸಮಿತಿ ಸಭೆ ಒಮ್ಮತದ ತೀರ್ಮಾನವನ್ನು ಕೈಗೊಂಡಿದೆ.
ಖಾಸಗಿ ಹೊಟೇಲೊಂದರ ಸಭಾಂಗಣದಲ್ಲಿ ಶುಕ್ರವಾರದಂದು ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ನವೆಂಬರ್‌ನಲ್ಲಿ ವರ್ಷದ ಕಂಬಳ ಋತು ಆರಂಭಗೊಳ್ಳುವ ಹಿನ್ನೆಲೆ ಏರ್ಪಡಿಸಿದ ಸಭೆಯಲ್ಲಿ ನ್ಯಾಯಾಲಯ ಹಾಗೂ ಸರ್ಕಾರದ ಆದೇಶ ಪ್ರಕಾರ ಶಿಸ್ತುಬದ್ಧವಾಗಿ ಕಂಬಳ ಆಯೋಜನೆ ಯಾವ ರೀತಿಯಲ್ಲಿ ಇರಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಯಿತು.
ಕಂಬಳ ಮಂಜೊಟ್ಟಿಗೆ ಓಡಿಸುವವರು ಒಂದು ಬಾರಿ ಮಾತ್ರ ಕೋಣದ ಮೇಲೆ ಮೆಲ್ಲನೆ ಹೊಡೆಯಬಹುದು. ಒಂದು ಕಂಬಳದಲ್ಲಿ ಕೋಣಗಳಿಗೆ ಹೆಚ್ಚು ಬಾರಿ ಹೊಡೆದರೆ ಓಡಿಸುವವರಿಗೆ ಒಂದು ಬಾರಿ ಎಚ್ಚರಿಕೆ ನೀಡುವುದು ಹಾಗೂ ಅದರ ಮಾಲೀಕರಿಗೆ ಮಾಹಿತಿ ನೀಡುವುದು. ಎಚ್ಚರಿಕೆ ನೀಡಿದ ಬಳಿಕವೂ ಮುಂದಿನ ಕಂಬಳದಲ್ಲಿ ತಪ್ಪು ಪುನರಾವರ್ತಿಸುವ ಕಂಬಳದ ಓಟಗಾರನಿಗೆ 5,000 ರೂ. ದಂಡ ವಿಧಿಸುವುದು. ಮೂರನೇ ಬಾರಿ ನಿಯಮ ಉಲ್ಲಂಘಿಸುವ ಓಟಗಾರನಿಗೆ ಮುಂದಿನ 1 ಕಂಬಳದಲ್ಲಿ ಅವಕಾಶ ನಿರಾಕರಣೆ ಶಿಕ್ಷೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.