ವಿಶ್ವ ದೃಷ್ಟಿ ದಿನ- ಅಕ್ಟೋಬರ್ 12- ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನ ಎಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ವಿಶ್ವದಾದ್ಯಂತ ಮಾಡಲಾಗುತ್ತದೆ. 2022ರ ಧ್ಯೇಯ ವಾಕ್ಯ ‘love your eyes at work’ ಅಂದರೆ ಸದಾ ಕೆಲಸದಲ್ಲಿರುವ ನಿಮ್ಮ ಕಣ್ಣನ್ನು ಪ್ರೀತಿಸಿರಿ ಎಂಬುದಾಗಿದೆ.

ನೇತ್ರದಾನ ಮಹಾದಾನ

ನೇತ್ರದಾನ ಬಹಳ ಪವಿತ್ರವಾದ ದಾನ. ನಾವು ಸತ್ತ ಬಳಿಕವೂ ಜಗತ್ತನ್ನು ಆನಂದಿಸಬೇಕಿದ್ದಲ್ಲಿ ನಮ್ಮ ಕಣ್ಣುಗಳನ್ನು ಇನ್ನೊಬ್ಬರಿಗೆ ನಮ್ಮ ಮರಣಾನಂತರ ದಾನ ಮಾಡಬೇಕು. ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರಕಲಿಕ್ಕಿಲ್ಲ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಮಂದಿ ದೃಷ್ಟಿಹೀನತೆಯಿಂದ ಬಳಲುತ್ತಿದ್ದು 3ರಿಂದ 4 ಮಿಲಿಯನ್ ಮಂದಿ ಕಾರ್ನಿಯಾದ ಅಂಧತ್ವದಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇಕಡಾ 60 ಮಂದಿ 12ವರ್ಷಕ್ಕಿಂತ ಕೆಳಗಿನವರಾಗಿರುತ್ತಾರೆ.

ಯಾರು ದಾನ ಮಾಡಬಹುದು?

ಒಂದು ವಯಸ್ಸಿನ ಮಗುವಿನಿಂದ ಹಿಡಿದು ಎಂಬತ್ತರ ಮುದುಕರೂ ನೇತ್ರದಾನ ಮಾಡಬಹುದು. ಯಾವುದೇ ರೀತಿಯ ವಯಸ್ಸು, ಜಾತಿ, ಮತ ಬೇಧಗಳ ನಿರ್ಭಂಧ ನೇತ್ರದಾನಕ್ಕೆ ಇಲ್ಲ. ತಮ್ಮ ಕುಟುಂಬದ ಅನುಮತಿ ಮಾತ್ರ ಅತೀ ಅಗತ್ಯ. ಕನ್ನಡಕ ಬಳಸುವವರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವವರೂ ಕೂಡಾ ನೇತ್ರದಾನ ಮಾಡಬಹುದು. ವ್ಯಕ್ತಿಯ ಮರಣಾನಂತರ ಮಾತ್ರ ನೇತ್ರದಾನ ಮಾಡಬಹುದಾಗಿದೆ. ನೇತ್ರದಾನ ಮಾಡಿದಾಗ ಮುಖಕ್ಕೆ ಯಾವುದೇ ರೀತಿಯ ವಿಕಲತೆ ಬರುವುದಿಲ್ಲ. ನೇತ್ರದಾನಕ್ಕಿಂತ ಮೊದಲು ರಕ್ತ ಪರೀಕ್ಷೆ ಮಾಡಿ ಸಾಂಕ್ರಾಮಿಕ ರೋಗಗಳಿಲ್ಲ ಎಂದು ಪರಾಮರ್ಶಿಸಿದ ಬಳಿಕವೇ ಕಾರ್ನಿಯಾವನ್ನು ತೆಗೆಯಲಾಗುತ್ತದೆ. ಕಣ್ಣಿನ ತೆಳುವಾದ ಸಾರದರ್ಶಕ ಪದರವಾದ ಕಾರ್ನಿಯಾವನ್ನು ಮಾತ್ರ ತೆಗೆಯಲಾಗುವುದು. ಒಂದು ವೇಳೆ ನೇತ್ರದಾನಿಯಿಂದ ಪಡೆದ ಕಣ್ಣಿನಿಂದ ಕಾರ್ನಿಯಾ ಕಸಿ ಮಾಡಲು ಉಪಯೋಗವಾಗದಿದ್ದಲ್ಲಿ (ವೈದ್ಯಕೀಯ ಕಾರಣಗಳಿಂದಾಗಿ) ಅಂತಹ ಕಣ್ಣುಗಳನ್ನು ಸಂಶೋಧನೆಗಳಿಗೆ ಮತ್ತು ವಿದ್ಯಾರ್ಜನೆಗೆ ಉಪಯೋಗಿಸಲಾಗುವುದು ನೆನಪಿರಲಿ. ಒಂದು ಜೊತೆ ಕಣ್ಣುಗಳಿಂದ ಎರಡು ಕಾರ್ನಿಯ ಅಂಧತ್ವವಿರುವ ವ್ಯಕ್ತಿಯ  ಬಾಳಿಗೆ ಬೆಳಕು ನೀಡಬಹುದು.

ಕಾರ್ನಿಯಾ ಎಂದರೇನು ? 

ಕಣ್ಣಿನೊಳಗಿನ ಪಾರದರ್ಶಕವಾದ, ತಿಳಿಯಾದ, ಶುಭ್ರವಾದ ಪೊರೆಯನ್ನು ಕಾರ್ನಿಯಾ ಎನ್ನಲಾಗುತ್ತದೆ. ಕಾರ್ನಿಯಾ ಮೇಲೆ ಬಿದ್ದ ಬೆಳಕು ತನ್ನ ಪಥವನ್ನು ಬದಲಿಸಿಕೊಂಡು ರೆಟಿನಾದ ಮೇಲೆ ಕೇಂದ್ರೀಕೃತವಾಗುತ್ತದೆ. ಕಾರ್ನಿಯ ಪದರ ತನ್ನ ಪಾರದರ್ಶಕತೆ ಕಳೆದುಕೊಂಡಲ್ಲಿ ಅಂಧತ್ವ ಅಥವಾ ದೃಷ್ಟಿ ಮಂದವಾಗಬಹುದು. ಸೋಂಕು ತಗಲಿದಾಗ, ಗಾಯದಿಂದಾಗಿ, ಜೀವಸತ್ವಗಳ ಕೊರತೆಯಿಂದ ಅಥವಾ ಅನುವಂಶಿಕ ಕಾರಣದಿಂದ ಕಾರ್ನಿಯಾ ತನ್ನ  ಪಾರದರ್ಶಕತ್ವವನ್ನು ಕಳೆದುಕೊಂಡು ದೃಷ್ಟಿ ಮಂದವಾಗಬಹುದು. ಪಾರದರ್ಶಕತೆಯನ್ನು ಕಳೆದುಕೊಂಡ ಕಾರ್ನಿಯಾವನ್ನು ತೆಗೆದು ದಾನಿಗಳಿಂದ ಪಡೆದ ಪಾರದರ್ಶಕ ಕಾರ್ನಿಯಾ ಜೋಡಿಸಿದಾಗ ದೃಷ್ಟಿ ಬರುತ್ತದೆ. ಜೀವಂತ ವ್ಯಕ್ತಿಯು ನೇತ್ರದಾನ ಮಾಡಲು ಕಾನೂನಿನಲ್ಲಿ ಸಮ್ಮತಿ ಇಲ್ಲ. ಆದರೆ ಮರಣಾನಂತರ ನೀಡಬಹುದು. ಅದೇ ರೀತಿ ರೆಟಿನಾ ತೊಂದರೆಯಿಂದಾಗಿ ಅಥವಾ ಕಣ್ಣಿನ ನರದ ತೊಂದರೆ (ಒಪ್ಟಿಕ್ ನರ) ಯಿಂದಾಗಿ ಅಂಧತ್ವವಿದ್ದ ವ್ಯಕ್ತಿಗಳು ಕೂಡಾ ನೇತ್ರದಾನ ಮಾಡಬಹುದು. ಅಂತಹ ವ್ಯಕ್ತಿಗಳ ಕಾರ್ನಿಯಾ ಪರದರ್ಶಕವಾಗಿದ್ದಲ್ಲಿ ಖಂಡಿತವಾಗಿಯೂ ಬೇರೆ ಅಂಧತ್ವ ಇರುವ ವ್ಯಕ್ತಿಗಳಿಗೆ ಬೆಳಕು ನೀಡಬಲ್ಲದು.

Also Read  ನಿಮ್ಮ ಬೆಡ್ ರೂಂ ಹೀಗಿದ್ದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ

ನೇತ್ರದಾನ

ಕಣ್ಣು ದಾನವೆಂದರೆ ಮರಣದ ನಂತರ ವ್ಯಕ್ತಿಯ ಕಣ್ಣುಗಳನ್ನು ಕುಟುಂಬದ ಸಮ್ಮತಿಯೊಡನೆ ದಾನ ನೀಡುವುದು ಎಂದಾಗಿದೆ.

ಕಣ್ಣುಗಳನ್ನು ಮರಣದ ನಂತರ 4-6 ಗಂಟೆಗಳ ಒಳಗಾಗಿ ದಾನ ಮಾಡಬೇಕು.

ವಯಸ್ಸು, ಲಿಂಗ, ರಕ್ತ ಗುಂಪು, ಧರ್ಮದ, ಮತದ ಸಂಬಂಧವಿಲ್ಲದೆ ಯಾರು ಬೇಕಾದರೂ ದಾನ ಮಾಡಬಹುದು.

ಕಣ್ಣಿನ ಪೊರೆ ಇರುವ ಅಥವಾ ಕನ್ನಡಕ ಬಳಸುವ ಯಾರಾದರೂ ಕಣ್ಣುಗಳನ್ನು ದಾನ ಮಾಡಬಹುದು.

ಅಧಿಕ ರಕ್ತದೊತ್ತಡ, ಮಧುಮೇಹವಿರುವ ವ್ಯಕ್ತಿಗಳು ಸಹ ಕಣ್ಣುಗಳನ್ನು ದಾನ ನೀಡಬಹುದು.

ಎಲ್ಲಾ ಪ್ರಕ್ರಿಯೆಗೆ 15-20 ನಿಮಿಷಗಳಾಗುತ್ತದೆ. ದಾನ ಮಾಡಿದವರ ಮುಖವು ಅಂದಹೀನವಾಗುವುದಿಲ್ಲ.

ಕಣ್ಣುಗಳನ್ನು ಮೃತ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ಔಪಚಾರಿಕವಾಗಿ ದಾನ ನೀಡುವುದಕ್ಕಾಗಿ ಪ್ರತಿಜ್ಞೆ ಮಾಡಿದ್ದರೂ ಸಹ ದಾನ ನೀಡಬಹುದು.

ನೇತ್ರ ಬ್ಯಾಂಕ್ ತಂಡವು ದಾನಿಯ ಮನೆಗೆ ಅಥವಾ ಮರಣದ ನಂತರ ಯಾವುದೇ ಸ್ಥಳಕ್ಕೆ ಧಾವಿಸುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಯಲ್ಲಿ ಉಚಿತ ಸೇವೆಯಾಗಿರುತ್ತದೆ.

ಕಣ್ಣುಗಳನ್ನು ದಾನ ನೀಡುವುದಾಗಿ ಪ್ರತಿಜ್ಞೆ ಮಾಡಿದ ನಂತರ ನಿಮ್ಮ ಕುಟುಂಬಕ್ಕೆ ಅದನ್ನು ಪೂರೈಸುವ ಸಲುವಾಗಿ ಕಣ್ಣುಗಳನ್ನು ದಾನ ನೀಡುವ ನಿಮ್ಮ ಇಚ್ಚೆಯನ್ನು ದಯವಿಟ್ಟು ತಿಳಿಸಿರಿ

ಕಣ್ಣುಗಳ ದಾನವನ್ನು ಕುಟುಂಬದ ಸಂಪ್ರದಾಯವಾಗಿಸಿಕೊಳ್ಳಿ. ಯಾರಿಗಾದರೂ ಪ್ರಕಾಶಮಾನವಾದ ನಾಳೆಯನ್ನು ನೀಡಿರಿ

ಮರಣ ಹೊಂದಿದ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡುವಾಗ ನೆನಪಿಡಬೇಕಾದ ಅಂಶಗಳು-

ಎಲ್ಲಾ ಫ್ಯಾನ್‍ಗಳನ್ನು ಆಫ್ ಮಾಡಿರಿ ಮತ್ತು ಹವಾನಿಯಂತ್ರಣವನ್ನು ಅಥವಾ ಕೂಲರ್ ಅನ್ನು ಆನ್ ಮಾಡಿ.

ತಲೆಯನ್ನು ತಲೆದಿಂಬಿನ ಸಹಾಯದಿಂದ ಎತ್ತರಿಸಿ.

Also Read  'ಬೆಳಕಿನ ಹಬ್ಬ ದೀಪಾವಳಿ ವೇಳೆ ಆಹಾರದ ಸಾಂಸ್ಕೃತಿಕ ಮಹತ್ವ' ✍️ ಡಾ.ಅಜಿತ್ ಕೆ ಕೋಡಿಂಬಾಳ

ಮುಚ್ಚಿರುವ ಕಣ್ಣುಗಳ ಮೇಲೆ ತೇವವಾದ ಹತ್ತಿಯನ್ನು ಇಡಿ.

ಸಾಧ್ಯವಾದರೆ ರೋಗನಿರೋಧಕ ದ್ರಾವಣಗಳನ್ನು ಕಣ್ಣುಗಳಿಗೆ ಸಿಂಪಡಿಸಿದಲ್ಲಿ ಬ್ಯಾಕ್ಟೀರಿಯಾ ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮರಣ ಸಂಭವಿಸಿದ 3 ಗಂಟೆಗಳ ಒಳಗೆ ನಿಮ್ಮ ಹತ್ತಿರದ ಕಣ್ಣಿನ ಆಸ್ಪತ್ರೆಗೆ ಕರೆ ಮಾಡಿ.

ನಿಮ್ಮ ಕಣ್ಣುಗಳನ್ನು ರಕ್ಷಿಸಿರಿ – ಅದು ನಿಮ್ಮನ್ನು ರಕ್ಷಿಸುತ್ತದೆ. 

ಗರ್ಭಿಣಿ ಸ್ತ್ರೀಯರು ಸಾಕಷ್ಟು ಆಹಾರ ಸೇವಿಸುವುದರಿಂದ, ಹುಟ್ಟುವ ಮಗುವಿನ ಕಣ್ಣಿನ ದೃಷ್ಟಿ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಹೆರಿಗೆಯ ಸ್ಥಳ ಮತ್ತು ಹೆರಿಗೆಗೆ ಉಪಯೋಗಿಸುವ ವಸ್ತುಗಳು ಸ್ವಚ್ಛವಾಗಿರಬೇಕು.

ನವಜಾತ ಶಿಶುವಿನ ಕಣ್ಣುಗಳು ಸೋಂಕಿನಿಂದ (ಕೆಂಪಾಗಿ ಕಂಡುಬರುವುದು) ಕೂಡಿದ್ದಲ್ಲಿ ತಕ್ಷಣ ಸಮೀಪದ ವೈದ್ಯರ ಸಲಹೆ ಪಡೆಯಿರಿ. ಇಲ್ಲವಾದಲ್ಲಿ ಮಗು ಶಾಶ್ವತವಾಗಿ ಕುರುಡಾಗಬಹುದು.

ಮಕ್ಕಳಿಗೆ ಅನ್ನಾಂಗ ಎ ಭರಿತ ಆಹಾರ ನೀಡಿರಿ. ಮತ್ತು ಅನ್ನಾಂಗ ಎ ದ್ರಾವಣವನ್ನು ಆರು ತಿಂಗಳಿಗೊಮ್ಮೆ ಮೂರು ವರ್ಷದವರೆಗೆ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ನಿಯಮಿತವಾಗಿ ಕೊಡಿಸಿರಿ.

ಪ್ರತಿದಿನ ಮುಂಜಾನೆ ಮತ್ತು ರಾತ್ರಿ ಸ್ವಚ್ಛ ನೀರಿನಿಂದ ಕಣ್ಣಿನ ರೆಪ್ಪೆಗಳನ್ನು ತೊಳೆಯಿರಿ. ಮಕ್ಕಳ ಕೈಗೆ ಚೂಪಾದ ಆಟದ ಸಾಮಾನುಗಳನ್ನು ಕೊಡಬಾರದು. ಗಿಲ್ಲಿದಾಂಡು, ಬಿಲ್ಲಬಾಣ ಮುಂತಾದ ಅಪಾಯಕಾರಿ ಆಡುವುದು, ಮೇಲ್ವಿಚಾರಣೆ ಇಲ್ಲದೆ ಪಟಾಕಿ ಸಿಡಿಸುವುದು ನಿಷೇಧಿಸಬೇಕು.

ಕಣ್ಣಿಗೆ ಕಸ ಬಿದ್ದಾಗ ಕಣ್ಣನ್ನು ಉಜ್ಜಬಾರದು. ಕಣ್ಣಿಗೆ ಗಾಯವಾದಾಗ ತಜ್ಞರಲ್ಲಿ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಕಾರ್ಮಿಕರು, ಸಾಣೆ ಹಿಡಿಯುವವರು, ಕಲ್ಲಿನಕೋರೆ ಕೆಲಸ ಮಾಡುವವರು ಮುಂತಾದವರು ಕಣ್ಣಿಗೆ ರಕ್ಷಾ ಕನ್ನಡಕವನ್ನು ಉಪಯೋಗಿಸಬೇಕು.

ಕಣ್ಣಿನ ಯಾವುದೇ ತೊಂದರೆ ಕಂಡುಬಂದಲ್ಲಿ ಆಲಸ್ಯ ಮಾಡದೇ ತಜ್ಞ ವೈದ್ಯರಿಂದ ಚಿಕಿತ್ಸೆ ಮಾಡಬೇಕು. ತಲೆನೋವು ಮತ್ತು ದೃಷ್ಟಿದೋಷಗಳನ್ನು ಅಲಕ್ಷಿಸದೇ ತಜ್ಞರ ಮಾರ್ಗದರ್ಶನದಂತೆ ಕನ್ನಡಕ ಧರಿಸಿರಿ.

ಕಣ್ಣಿನ ಪೊರೆ ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಬರುವ ತೊಂದರೆ. ಇದನ್ನು ಸರಳವಾದ ಶಸ್ತ್ರ ಚಿಕಿತ್ಸೆಯಿಂದ ನಿವಾರಿಸಿ ಉತ್ತಮ ದೃಷ್ಟಿಯನ್ನು ನೀಡಬಹುದು.

ಕೊನೆಮಾತು 

ನೇತ್ರದಾನ ಬಹಳ ಅಮೂಲ್ಯವಾದ ದಾನ. ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಅಂಧತ್ವದಿಂದ ಬಳಲುತ್ತಿದ್ದಾರೆ. ಸಂಪ್ರದಾಯಕ್ಕೆ ಕಟ್ಟು ಬಿದ್ದು ನೀವು ಸತ್ತು ಮಣ್ಣಾಗುವ ಸಮಯದಲ್ಲಿ ನಿಮ್ಮ ಕಣ್ಣುಗಳನ್ನು ಮಣ್ಣು ಪಾಲಾಗಲು ಬಿಡಬೇಡಿ. ನಮ್ಮ ಅಮೂಲ್ಯವಾದ ಕಣ್ಣುಗಳನ್ನು ದಾನ ಮಾಡಿ ಇನ್ನಿಬ್ಬರು ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿ. ಇನ್ನೊಬ್ಬರಿಗೆ ನೀಡುವುದರಲ್ಲಿ ಸಿಗುವ ತೃಪ್ತಿ ಮತ್ತು ಸಂತಸ ಮತ್ತಾವುದರಲ್ಲೂ ಸಿಗದು. ಗೆಳೆಯರೇ ಇನ್ಯಾಕೆ ಯೋಚಿಸುತ್ತೀರಾ..? ನಿಮ್ಮ ಮರಣಾನಂತರ ನೇತ್ರದಾನ ಮಾಡುತ್ತೇನೆಂದು ಇಂದೇ ಶಪಥ ಮಾಡಿ ನಿಮ್ಮ ಪಕ್ಕದ ಯಾವುದೇ ಆಸ್ಪತ್ರೆಗೆ ಭೇಟಿ ನೀಡಿ ನೇತ್ರದಾನ ಮಾಡುವ ಪ್ರಕ್ರಿಯೆಯನ್ನು ಇಂದೇ ಪೂರೈಸಿ ಇನ್ನೊಬ್ಬರಿಗಾಗಿ ಬದುಕುವ ಮತ್ತು ಬಾಳಿಗೆ ಬೆಳಕಾಗುವ ನೇತ್ರದಾನವನ್ನು ಮಾಡಲು ನಿಮ್ಮ ಗೆಳೆಯರನ್ನು ಮತ್ತು ಕುಟುಂಬದವರನ್ನು ಪ್ರಚೋದಿಸಿ ಮತ್ತು ಮಾರ್ಗದರ್ಶನ ನೀಡಿ.

Also Read  “ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ”- ಡಾ. ಮುರಲೀ ಮೋಹನ ಚಂತಾರು

ಡಾ|| ಮುರಲೀ ಮೋಹನ್ ಚೂಂತಾರು 

error: Content is protected !!
Scroll to Top