ಮಂಗಳೂರು: ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ‌ – ಪರಿಸರ ಪ್ರೇಮಿಗಳ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 05. ಮಂಗಳೂರು ನಗರದ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಎಂದಿನಂತೆ ಈ ವರ್ಷ ವಾಡಿಕೆಯ ಮಳೆಯಾಗದೇ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗುವುದು ಖಂಡಿತ. ಇದನ್ನು ಸರಿಪಡಿಸಲು ಹೆಣಗಾಡುತ್ತಿರುವ ವೇಳೆ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗುವ ಕಾರ್ಯವಾಗುತ್ತಿದೆ.

ಮಂಗಳೂರು ನಗರದ ನಂತೂರಿನಿಂದ ಕೆಪಿಟಿವರೆಗೆ ಉಂಟಾಗುವ ಟ್ರಾಫಿಕ್ ಜಾಮ್ ಕಡಿಮೆ ಮಾಡುವ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರವು ಫ್ಲೈಓವರ್ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ರಸ್ತೆಯ ಎರಡೂ ಬದಿಗಳಲ್ಲಿರುವ ಮರಗಳನ್ನು ತೆರವು ಮಾಡಲು ಗುರುತಿಸಲಾಗಿತ್ತು. ಆದರೆ ಮಂಗಳೂರಿನ ಪರಿಸರ ಪ್ರೇಮಿ ಸಂಘಟನೆ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಮರಗಳನ್ನು ಕಡಿಯಲು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಅರಣ್ಯ ಅಧಿಕಾರಿಗಳು ಹಾಗೂ ಎನ್ಎಚ್ಎಐ ಅಧಿಕಾರಿಗಳು ಪರಿಸರ ಪ್ರೇಮಿಗಳ ಸಮಕ್ಷಮದಲ್ಲಿ ಸಭೆ ನಡೆಸಿ 602 ಮರಗಳನ್ನು ಗುರುತಿಸಿತ್ತು. ಇದರಲ್ಲಿ 370 ಮರಗಳನ್ನು ಸ್ಥಳಾಂತರ ಮಾಡಲು 372 ಮರಗಳನ್ನು ಕಡಿಯಲು ಅರಣ್ಯಾಧಿಕಾರಿಗಳು ಗುರುತಿಸಿದ್ದಾರೆ.

Also Read  ಬೈಕ್ ಮತ್ತು ಕಾರು ಡಿಕ್ಕಿ..!    ಯುವಕ ಮೃತ್ಯು..!               

ಆದರೆ ಗುರುತಿಸಿರುವ ಮರಕ್ಕಿಂತ ಅಧಿಕ 40 ಮರಗಳನ್ನು ಕಡಿಯಲು ಪ್ಲ್ಯಾನ್ ಮಾಡಲಾಗಿದ್ದು, ಮೊದಲು ಮರಗಳನ್ನು ಸ್ಥಳಾಂತರ ಮಾಡಿ ಬಳಿಕ ಮರಗಳನ್ನು ಕಡಿಯುವ ಪ್ರಕ್ರಿಯೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದರು. ಅದರಂತೆ ಮರಗಳ ಸ್ಥಳಾಂತರ ಹಾಗೂ ಕಡಿಯುವ ಪ್ರಕ್ರಿಯೆಯನ್ನು ಸಕಲೇಶಪುರದ ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಆದರೆ ಮಂಗಳವಾರದಂದು ಬೆಳಗ್ಗೆ ಏಕಾಏಕಿ ಈ ಏಜೆನ್ಸಿ, ಅರಣ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಸ್ಥಳಾಂತರ ಮಾಡಬಹುದಾದ ಮರಗಳ ಮಾರಣಹೋಮ ಮಾಡಿದೆ. ತಕ್ಷಣವೇ ಸ್ಥಳಕ್ಕೆ ಬಂದ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಪರಿಸರ ಪ್ರೇಮಿ ಸಂಘಟನೆಯ ಸದಸ್ಯರು ಮರ ಕಡಿಯುವುದನ್ನು ತಡೆದಿದ್ದಾರೆ. ಬಳಿಕ ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು, ಮರ ಕಡಿಯುವ ಏಜೆನ್ಸಿ ಹಾಗೂ ಪರಿಸರವಾದಿಗಳ ನಡುವೆ ವಾಗ್ವಾದ ನಡೆದಿದೆ‌. ಮರಗಳ ಮಾರಣಹೋಮ ವಿರೋಧಿಸಿದ ಪರಿಸರ ಪ್ರೇಮಿಗಳು ಕಡಿದು ಬಿದ್ದ ಮರಗಳ ತುಂಡುಗಳಿಗೆ ಬಿಳಿ ಬಟ್ಟೆ ಹೊದಿಸಿ ಅಧಿಕಾರಿಗಳ ಅಣಕು ಶವ ಪ್ರದರ್ಶನ ಮಾಡಿದರು. ಇದರೊಂದಿಗೆ ಅಲ್ಲಿ ಸೃಷ್ಟಿಯಾಗಿದ್ದ ಹೈಡ್ರಾಮಾ ಕೊನೆಗೊಂಡಿದೆ. ಅಭಿವೃದ್ಧಿ ಬೇಕು ಆದರೆ ಪರಿಸರ ಮಾರಕವಾದ ಅಭಿವೃದ್ಧಿ ಬೇಡ ಎನ್ನುವುದು ಪರಿಸರ ಪ್ರೇಮಿಗಳ ಮನವಿಯಾಗಿದೆ.

Also Read  ಗೃಹಲಕ್ಷ್ಮೀ ಯೋಜನೆಗೆ SMS ಅಗತ್ಯವಿಲ್ಲ- ನೇರ ನೋಂದಣಿ

error: Content is protected !!
Scroll to Top