ಸೆ. 26: ವಿಶ್ವ ಸಂತಾನ ನಿಯಂತ್ರಣ ಜಾಗೃತಿ ದಿನ – ಡಾ.ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಸೆ. 26. ಪ್ರತಿ ವರ್ಷ ವಿಶ್ವಸಂಸ್ಥೆಯು ಸೆಪ್ಟೆಂಬರ್ 26 ರಂದು ‘ವಿಶ್ವ ಸಂತಾನ ನಿಯಂತ್ರಣ ಜಾಗ್ರತಿ ದಿನ’ ಎಂದು ಆಚರಿಸಿ ಜನರಲ್ಲಿ ಜನ ಸಂಖ್ಯೆ ನಿಯಂತ್ರಣ, ಮಹಿಳೆಯರ ಆರೋಗ್ಯ ಮತ್ತು ಸಂತಾನ ನಿಯಂತ್ರಣದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಯುವಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸಿ ಅವರ ದೈಹಿಕ ಮತ್ತು ಲೈಂಗಿಕ ಜೀವನದ ಬಗ್ಗೆ ಪರಿಪೂರ್ಣ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಈ ಆಚರಣೆ ಆರಂಭವಾಗಿ 15 ವರ್ಷ ಕಳೆದರೂ ಜನರಲ್ಲಿ ಸಂತಾನ ನಿಯಂತ್ರಣದ ವಿವಿಧ ಕ್ರಮಗಳ ಬಗ್ಗೆ, ಅಸುರಕ್ಷಿತ ಸಂತಾನ ನಿಯಂತ್ರಣದಿಂದ ಉಂಟಾಗುವ ತೊಂದರೆಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಬಹಳ ದೌರ್ಭಾಗ್ಯಕರ ವಿಚಾರವಾಗಿದೆ. 2023ನೇ ಇಸವಿಯ ಈ ಆಚರಣೆಯ ಧ್ಯೇಯ ವಾಕ್ಯ “It is Your life, It is your responsibility” ನಿಮ್ಮ ಜೀವ ನಿಮ್ಮ ಜವಾಬ್ದಾರಿ ಎಂಬುದಾಗಿದೆ.


ವಿಶ್ವ ಗರ್ಭನಿರೋಧಕ ಜಾಗೃತಿ ದಿನದ ದಿನಾಚರಣೆಯ ಹಿಂದಿನ ಉದ್ದೇಶಗಳು ಈ ಕೆಳಗಿನಂತಿದೆ.

1. ಜಗತ್ತಿನಾದ್ಯಂತ 211 ಮಿಲಿಯನ್ ಗರ್ಭಧಾರಣೆ ಮಾನವರಲ್ಲಿ ವಾರ್ಷಿಕವಾಗಿ ಉಂಟಾಗುತ್ತಿದ್ದು, ಅವರಲ್ಲಿ ಸುಮಾರು 40 ಶೇಕಡಾ ಗರ್ಭಧಾರಣೆ ತಮಗರಿವಿಲ್ಲದೇ ಆಗುತ್ತಿದೆ.
2. ಈ 40 ಶೇಕಡಾ ಅನಗತ್ಯ ಅನಿವಾರ್ಯ ಗರ್ಭಧಾರಣೆಗಳಲ್ಲಿ ಸುಮಾರು 50 ಶೇಕಡಾ ಮಂದಿ ಗರ್ಭಪಾತದಲ್ಲಿ ಮುಕ್ತಾಯ ಕಾಣುತ್ತಾರೆ, ಈ ಗರ್ಭಪಾತ ಅಸುರಕ್ಷಿತ ಮತ್ತು ಮಹಿಳೆಯ ಆರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಜೀವಕ್ಕೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.
3. ಸುಮಾರು 15 ರಿಂದ 19ರ ವಯಸ್ಸಿನ ವಯೋಮಾನದಲ್ಲಿ ವಿಶ್ವದಾದ್ಯಂತ ವಾರ್ಷಿಕವಾಗಿ ಸುಮಾರು 16 ಮಿಲಿಯನ್ ಯುವತಿಯರು ಗರ್ಭವತಿಯರಾಗುತ್ತಾರೆ ಮತ್ತು 15ರ ವಯಸ್ಸಿನ ಕಡಿಮೆ ವಯೋಮಾನದಲ್ಲಿ 1 ಮಿಲಿಯನ್ ಗರ್ಭವತಿಯರಾಗುತ್ತಾರೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ.
4. ಅಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ದೈಹಿಕ ಸಂಪರ್ಕದಿಂದಾಗಿ ಸಣ್ಣ ವಯಸ್ಸಿನ ಯುವಕ- ಯುವತಿಯರು ಲೈಂಗಿಕವಾಗಿ ಹರಡುವ ರೋಗಗಳಾದ ಏಡ್ಸ್, ಹೆಪಟೈಟಿಸ್ ಮುಂತಾದ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
5. ವಿಶ್ವದಾದ್ಯಂತ ಸರಿಸುಮಾರು 38 ಮಿಲಿಯನ್ ದಂಪತಿಗಳು ಅಥವಾ ಸಂಗಾತಿಗಳು ಲೈಂಗಿಕವಾಗಿ ಕ್ರಿಯಾತ್ಮಕವಾಗಿರುತ್ತಿದ್ದು, ಅದರಲ್ಲಿ 60 ಶೇಕಡಾ ಮಂದಿ ಯಾವುದೇ ಸಂತಾನ ನಿಯಂತ್ರಣ ಪರಿಕರಗಳನ್ನು ಬಳಸುವುದಿಲ್ಲ. ಮದುವೆಯಾದ ಮತ್ತು ಸಣ್ಣ ವಯಸ್ಸಿನ ಯುವತಿಯರಲ್ಲಿ ಈ ಸಂತಾನ ನಿಯಂತ್ರಣದ ಅವಶ್ಯಕತೆ ಅತಿಯಾಗಿದ್ದು, ಹೆಚ್ಚಿನ ಮಾಹಿತಿ ಅನಿವಾರ್ಯವಾಗಿದೆ.
6. ಬಡತನ, ಅನಕ್ಷರತೆ, ಆರ್ಥಿಕ ಅಡಚಣೆ, ಮಾಹಿತಿಯ ಕೊರತೆಯಿಂದಾಗಿ ಹೆಚ್ಚಿನ ಬೆಳೆಯುತ್ತಿರುವ ರಾಷ್ಟ್ರಗಳ ಎಳೆ ವಯಸ್ಸಿನ ಮಹಿಳೆಯರು ಅಸುರಕ್ಷಿತ, ಅನಿವಾರ್ಯ ಹಾಗೂ ಅನಗತ್ಯ ಗರ್ಭಪಾತದಿಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ವಿಷಾದನೀಯ ವಿಚಾರ. ಪ್ರತಿದಿನ ವಿಶ್ವದಾದ್ಯಂತ ಸುಮಾರು 500 ಮಂದಿ ಯುವತಿಯರು ಮತ್ತು ಮಹಿಳೆಯರು ಗರ್ಭಪಾತ ಮತ್ತು ಹೆರಿಗೆಯ ಸಮಯದಲ್ಲಿನ ಸಂಕೀರ್ಣತೆಯಿಂದ ಸಾವನ್ನಪ್ಪುತ್ತಿರುವುದು ದೌರ್ಭಾಗ್ಯದ ವಿಚಾರವಾಗಿದೆ.
7. ಪ್ರತಿ ಯುವಕ-ಯುವತಿ ದಂಪತಿಗಳಿಗೆ ಸುಮಾರು 17 ವಿವಿಧ ರೀತಿಯ ಸಂತಾನ ನಿಯಂತ್ರಣ ಕ್ರಮಗಳು ಲಭ್ಯವಿದ್ದು, ಮಹಿಳೆಯರಲ್ಲಿ ಗರ್ಭಪಾತ ಔಷಧ ಬಳಕೆ ಅತೀ ಹೆಚ್ಚು ಬಳಸುವ ಮಾರ್ಗವಾಗಿದೆ. ಗರ್ಭಕೋಶದೊಳಗೆ ಗರ್ಭಿಣಿಯಾಗದಂತೆ ತಡೆಯುವ ಪರಿಕರ ಬಳಸುವುದು ಎರಡನೆ ಅತೀ ಸಾಮಾನ್ಯ ಸಂತಾನ ನಿಯಂತ್ರಣ ಕ್ರಮವಾಗಿದೆ.
8. ಸಂತಾನ ನಿಯಂತ್ರಣ ಕೈಪಿಡಿಯ ಮಾಹಿತಿಯಂತೆ ಮೊದಲ ಗರ್ಭನಿಯಂತ್ರಣ ಕಾಂಡೋಮ್ ನೂರಾರು ವರ್ಷಗಳ ಹಿಂದೆ ಬಳಕೆಯಾಗಿತ್ತು. ಈ ಕಾಂಡೋಮ್‍ಗಳನ್ನು ಪ್ರಾಣಿಗಳ ಕರುಳುಗಳಿಂದ ಮತ್ತು ಮೀನುಗಳ ಮೂತ್ರಚೀಲಗಳಿಂದ ಮಾಡಲಾಗಿತ್ತು.
9. ಮೊದಲ ಗರ್ಭ ನಿಯಂತ್ರಣ ಗುಳಿಗೆ 1981 ರಲ್ಲಿ ಇಂಗ್ಲೆಂಡ್‍ನಲ್ಲಿ ವಿವಾಹಿತ ಮಹಿಳೆಯರಿಗಾಗಿ ತಯಾರಿಸಿ ಬಳಸಲಾಯಿತು. ಆದರೆ ಈಗ ವಿವಾಹಿತ ಮಹಿಳೆಯರಿಗಿಂತ ಅವಿವಾಹಿತ ಯುವತಿಯರೇ 80 ಶೇಕಡಾ ಜನ ಬಳಸುತ್ತಿರುವುದು ದುರಂತವೇ ಸರಿ.
10. ಬ್ರಿಟನ್ ದೇಶದಲ್ಲಿ ಪ್ರತಿಯೊಬ್ಬ ಗರ್ಭಧಾರಣೆ ವಯಸ್ಸಿನ ಯುವತಿಗೆ ಎಲ್ಲಾ ರೀತಿಯ ಗರ್ಭ ನಿಯಂತ್ರಣಾ ಸಾಧನಗಳ ಪೂರೈಕೆಗಾಗಿ ಒಂದು ಪೌಂಡ್ ಖರ್ಚಾಗುತ್ತಿದ್ದು, ಈ ಸೌಲಭ್ಯ ಎಲ್ಲಾ ಯುವತಿಯರಿಗೆ ತಲುಪಬೇಕಾದಲ್ಲಿ ಕನಿಷ್ಟ ಎರಡು ಪೌಂಡ್ ಅಗತ್ಯವಿದೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಬೆಳೆಯುತ್ತಿರುವ ರಾಷ್ಟ್ರಗಳಾದ ಭಾರತದಂತಹ ರಾಷ್ಟ್ರಗಳಲ್ಲಿ ಕನಿಷ್ಟ ಒಂದೆರಡು ಸುಲಭ ಮಾರ್ಗದ ಕಡಿಮೆ ಖರ್ಚಿನ ಸಂತಾನ ನಿಯಂತ್ರಣ ವ್ಯವಸ್ಥೆ ಎಲ್ಲಾ ಗರ್ಭಧಾರಣಾ ವಯಸ್ಸಿನ ಯುವತಿಯರಲ್ಲಿ ತಲುಪಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ತುರ್ತಾದ ಕ್ರಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆಯಬೇಕಾಗಿದೆ.

Also Read  ➤➤ ವಿಶೇಷ ಲೇಖನ ಮಾರ್ಚ್ 09- ವಿಶ್ವ ಕಿಡ್ನಿ ದಿನ ✍️ ಡಾ|| ಚೂಂತಾರು

ಸಂತಾನ ನಿಯಂತ್ರಣ ಪದ್ಧತಿಗಳನ್ನು ಪರಿಣಾಮಕಾರಿಯಾಗಿ ಮಾಡುವುದರಿಂದ ಮಹಿಳೆ ಅಥವಾ ಯುವತಿಗೆ ತನ್ನ ಗರ್ಭಧರಿಸುವ ಸಮಯವನ್ನು ನಿಯಂತ್ರಿಸಬಹುದಾಗಿದೆ. ಈ ಮೂಲಕ ಗರ್ಭಧರಿಸುವ ಮೊದಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಯುವತಿ ತನ್ನನ್ನು ತಾನು ಸಿದ್ಧಗೊಳಿಸಬಹುದಾಗಿದೆ. ತಮ್ಮ ದೇಹದ ಪರಿಪೂರ್ಣ ದೈಹಿಕ ಆರೋಗ್ಯದ ಸಂದರ್ಭಗಳನ್ನು ನೋಡಿಕೊಂಡು ಗರ್ಭ ಧರಿಸುವುದರಿಂದ, ಮುಂದಾಗುವ ಅನಾಹುತಗಳನ್ನು ತಡೆಯಬಹುದಾಗಿದೆ, ಅದೇ ರೀತಿ ಯಾವುದಾದರೂ ಔಷಧಗಳನ್ನು ಬಳಸುತ್ತಿದ್ದಲ್ಲಿ ಅದರಿಂದ ಮುಂದೆ ಹುಟ್ಟುವ ಮಗುವಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದಲ್ಲಿ ಅಂತಹ ಔಷಧಗಳ ಬದಲಾಗಿ ಬೇರೆ ಸುರಕ್ಷಿತ ಔಷಧಿಗಳನ್ನು ಬಳಸಿದ ಬಳಿಕ ನಿಮ್ಮ ಗರ್ಭಧಾರಣಾ ಕಾಲವನ್ನು ನಿಯಂತ್ರಿಸಿದಲ್ಲಿ ಮುಂದೆ ಜನಿಸುವ ಮಗುವಿನ ಆರೋಗ್ಯವನ್ನು ಸೂಕ್ತ ರೀತಿಯಲ್ಲಿ ಕಾಪಾಡಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಒಬ್ಬ ಮಹಿಳೆ ತಾನು ಮಾನಸಿಕವಾಗಿ, ದೈಹಿಕವಾಗಿ, ಪರಿಪೂರ್ಣವಾಗಿ ಸಿದ್ಧತೆಯಾದ ಬಳಿಕವೇ ಗರ್ಭಧರಿಸಿದಲ್ಲಿ ಆರೋಗ್ಯವಂತ ಶಿಶು ಪಡೆಯಲು ಎಲ್ಲಾ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

Also Read  ಡಿಸೆಂಬರ್‌ವರೆಗೆ ಶಾಲೆ ಇಲ್ಲ ➤ ಸಿಎಂ ಬಿಎಸ್‍ವೈ ಅಧಿಕೃತ ಘೋಷಣೆ

ಗರ್ಭ ನಿರೋಧಕ ಅಥವಾ ನಿಯಂತ್ರಣಕ್ಕೆ ಹಲವಾರು ವಿಧಾನಗಳಿದ್ದು, ಔಷಧಿಗಳ ಬಳಕೆ ಅಥವಾ ರಸದೂತಗಳ ಬಳಕೆ ಅತಿ ಸುಲಭ ಮತ್ತು ಹೆಚ್ಚು ಬಳಸುವ ವಿಧಾನವಾಗಿರುತ್ತದೆ. ಗರ್ಭಧಾರಣೆಯಾಗದಂತೆ ತಡೆಯುವ ಗರ್ಭಕೋಶದೊಳಗೆ ಬಳಸುವ ಸಾಧನಗಳು ಎರಡನೇ ಅತೀ ಸಾಮಾನ್ಯ ವಿಧಾನವಾಗಿದೆ. ಇದಲ್ಲದೇ ಗರ್ಭಧಾರಣೆಯಾಗದಂತೆ ತಡೆಯುವ ಕಾಂಡೋಮ್‍ಗಳ ಬಳಕೆ, ವ್ಯಾಸೆಕ್ಟಮಿ ಅಥವಾ ಟ್ಯೂಬೆಕ್ಟಮಿ ಎಂಬ ಸರ್ಜರಿಗಳು, ತುರ್ತು ಗರ್ಭ ನಿರೋಧಕ ಔಷಧಿಗಳು ಮುಂತಾದ ವಿಧಾನಗಳು ಲಭ್ಯವಿದೆ. ಯಾವ ವಿಧಾನ ಬಳಸಬೇಕು ಮತ್ತು ಹೇಗೆ ಬಳಸಬೇಕು ಎಂಬುದನ್ನು ಸರಿಯಾಗಿ ಮೊದಲೇ ತಿಳಿದುಕೊಂಡು ಅನಗತ್ಯ ಗರ್ಭಧರಿಸುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ. ಒಟ್ಟಿನಲ್ಲಿ ಗರ್ಭಧಾರಣಾ ವಯಸ್ಸಿನ ಎಲ್ಲಾ ಯುವತಿಯರು ಸರಿಯಾದ ಮಾಹಿತಿಯನ್ನು ಪಡೆದಲ್ಲಿ ಮುಂದಾಗುವ ಅನಾಹುತಗಳನ್ನು ಮೊದಲೇ ನಿಯಂತ್ರಿಸಬಹುದಾಗಿದೆ.

ಕೊನೆಮಾತು:
ಸಂತಾನ ನಿಯಂತ್ರಣ ಮತ್ತು ಗರ್ಭಧಾರಣೆ ನಿಯಂತ್ರಣ ಎನ್ನುವುದು ಪ್ರತಿಯೊಬ್ಬ ಮಹಿಳೆ ಮತ್ತು ಪುರುಷರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಗರ್ಭಧಾರಣೆ ನಿಯಂತ್ರಣ ಎನ್ನುವುದು ಕೇವಲ ಹೆಂಡತಿಯ ಜವಾಬ್ದಾರಿ ಎಂದು ಹಾರಿಕೆಯ ಉತ್ತರ ನೀಡುವುದು ಪುರುಷರಿಗೆ ಶೋಭೆ ತರುವ ವಿಚಾರವಲ್ಲ. ಇತ್ತೀಚೆಗೆ ಮುಂಬೈಯಲ್ಲಿನ ಮೆಡಿಕಲ್ ಕಾಲೇಜೊಂದರ ಸಮುದಾಯ ವೈದ್ಯಕೀಯ ವಿಭಾಗದ ವೈದ್ಯರುಗಳು ಮುಂಬೈಯಲ್ಲಿ ಒಂದು ಸರ್ವೆ ನಡೆಸಿದರು. ಅದರ ಪ್ರಕಾರ 121 ವಿವಾಹಿತ ಪುರುಷರನ್ನು ಪ್ರಶ್ನೋತ್ತರ ವಿಚಾರ ನಡೆಸಿದಾಗ 47.1 ಶೇಕಡಾ ಮಂದಿ ಪುರುಷರು ಸಂತಾನ ನಿಯಂತ್ರಣಕ್ಕಾಗಿ ಪುರುಷರಲ್ಲಿ ವ್ಯಾಸೆಕ್ಟಮಿ ಮಾಡಬಾರದೆಂದು ಅಭಿಪ್ರಾಯಪಟ್ಟರು. ಇನ್ನು ಸೋಜಿಗದ ವಿಚಾರವೆಂದರೆ 57.8 ಶೇಕಡಾ ವಿವಾಹಿತ ಪುರುಷರು ಗರ್ಭಧಾರಣೆ ನಿಯಂತ್ರಣ ಪತ್ನಿಯರ ಜವಾಬ್ದಾರಿ ಎಂದು ಖಡಾಖಂಡಿತವಾಗಿ ಹೇಳಿ ತಮ್ಮ ಪುರುಷತ್ವವನ್ನು ಮೆರೆದಿದ್ದರು. ಇವರೆಲ್ಲ 21 ರಿಂದ 50 ವಯೋಮಾನದ ವಿವಾಹಿತ ಪುರುಷರು. ಇವರಲ್ಲಿ 42.1 ಶೇಕಡಾ ಮಂದಿ ಮಹಿಳೆಯರಲ್ಲಿ ಟ್ಯೂಬೆಕ್ಟಮಿ ಮಾಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಹೆಚ್ಚಿನ ಪುರುಷರು ವ್ಯಾಸೆಕ್ಟಮಿ ಮಾಡಿಸುವುದರಿಂದ ಪುರುಷತ್ವಕ್ಕೆ ಧಕ್ಕೆ ಬರುತ್ತದೆ. ಸುಸ್ತಾಗುತ್ತದೆ, ರಕ್ತಸ್ರಾವವಾಗುತ್ತದೆ.‌ ಹೆಚ್ಚಿನ ದೈಹಿಕ ಪರಿಶ್ರಮದ ಕೆಲಸ ಮಾಡಲು ಸಾಧ್ಯವಾಗದು ಮುಂತಾದ ತಪ್ಪು ಕಲ್ಪನೆ ಹೊಂದಿದ್ದರು. ಸುಮಾರು 68.42 ಶೇಕಡಾ ಪುರುಷರು ಗರ್ಭನಿಯಂತ್ರಣ ಕ್ರಮಗಳಿಗೆ ಮಹಿಳೆಯರು ಸೂಕ್ತ ಎಂದು ಅಭಿಪ್ರಾಯಪಟ್ಟರು. ಅದೇನೇ ಇರಲಿ ಇಂದಿನ ಹೆಚ್ಚುತ್ತಿರುವ ನಮ್ಮ ಜನಸಂಖ್ಯೆ ಮತ್ತು ದಿನನಿತ್ಯ ಹೆರಿಗೆ ಸಂಬಂಧ ದುರಂತಗಳ ಕಾರಣದಿಂದಲಾದರೂ ಜನರಲ್ಲಿ ಗರ್ಭಧಾರಣಾ ನಿಯಂತ್ರಣ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನ ನೀಡಬೇಕಾದ ತುರ್ತು ಅನಿವಾರ್ಯತೆ ಇದೆ. ಈ ಕಾರಣದಿಂದಲಾದರೂ ಸರಕಾರಿ ಮತ್ತು ಸರಕಾರೇತರ, ಸೇವಾನಿರತ ಸಂಘಸಂಸ್ಥೆಗಳು ಈ ವಿಚಾರದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಮಾಹಿತಿ ನೀಡಿ ಜನರನ್ನು ಎಚ್ಚರಿಸಿದಲ್ಲಿ ಈ ಸಂತಾನ ನಿಯಂತ್ರಣ ಮತ್ತು ಗರ್ಭಧಾರಣಾ ನಿಯಂತ್ರಣ ದಿನ ಆಚರಣೆ ಹೆಚ್ಚು ಅರ್ಥಪೂರ್ಣವಾದೀತು ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾದೀತು.

Also Read  KEAಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಡಾ| ಮುರಲಿ ಮೋಹನ್ ಚೂಂತಾರು
ಸುರಕ್ಷ ದಂತ ಚಿಕಿತ್ಸಾಲಯ

error: Content is protected !!
Scroll to Top