“ವಿಶ್ವ ಫಾರ್ಮಸಿಸ್ಟರ ದಿನ- ಸೆಪ್ಟೆಂಬರ್ 25” – ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadba.com ಸೆ. 25. ಪ್ರತಿ ವರ್ಷ ಸಪ್ಟೆಂಬರ್ 25ರಂದು ವಿಶ್ವದಾದ್ಯಂತ ಫಾರ್ಮಸಿ‍ಸ್ಟ್ ಗಳು “ವಿಶ್ವ ಫಾರ್ಮಸಿಸ್ಟ್ ದಿನ” ಎಂದು ಆಚರಿಸಿರುತ್ತಾರೆ. 2009ರಲ್ಲಿ ಎಪ್‍ಐಪಿ ಅಂದರೆ ಇಂಟರ್‍ ನ್ಯಾಷನಲ್ ಫಾರ್ಮಸುಟಿಕಲ್ ಪೆಡರೇಶನ್‍ ಆದೇಶದಂತೆ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾದ ‘ಫಾರ್ಮಸಿ’ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನು ವಿಮರ್ಶಿಸಿ ಕುಂದು ಕೊರತೆಗಳನ್ನು ಪರಾಮರ್ಷಿಸಿ ಮಗದೊಮ್ಮೆ ತಮ್ಮನ್ನು ತಮ್ಮ ವೃತ್ತಿಗೆ ಸಮರ್ಪಿಸಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸುದಿನ. ಪ್ರತಿ ವರ್ಷ ಏನಾದರೊಂದು ತಿರುಳನ್ನು ಇಟ್ಟುಕೊಂಡು ಈ ಆಚರಣೆಯನ್ನು ಆಚರಿಸಿ, ಜನರಲ್ಲಿ ಮತ್ತು ವೃತ್ತಿ ಬಂದುಗಳಲ್ಲಿ ಔಷಧಿಗಳ ಬಗ್ಗೆ ಹೆಚ್ಚಿನ ಅರಿವು ಜಾಗೃತಿ ಮತ್ತು ಕಾಳಜಿ ಮೂಡಿಸುವ ಏಕಮೇವ ಆದ್ಯತೆಯನ್ನು ಈ ಆಚರಣೆ ಹೊಂದಿದೆ. 2015ರ ಆಚರಣೆಯ ತಿರುಳು ಏನೆಂದರೆ “ಫಾರ್ಮಸಿಸ್ಟರು ನಿಮ್ಮ ಆರೋಗ್ಯದ ಓಡನಾಡಿ” ಎಂಬುದಾಗಿದೆ. 2023ರ ಆಚರಣೆಯ ಧ್ಯೇಯ ವಾಕ್ಯ “ಆರೋಗ್ಯ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಔಷಧಿ ವಿಜ್ಞಾನ” ಎಂಬುದಾಗಿದೆ.

ಆರೋಗ್ಯ ಕ್ಷೇತ್ರ ಮತ್ತು ಪಾರ್ಮಸಿ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬ ಯಶಸ್ವಿ ವೈದ್ಯರ ಹಿಂದೆ ಖಂಡಿತವಾಗಿಯೂ ಒಂದು ಪರಿಣಾಮಕಾರಿ ಔಷಧಿ ಹಾಗೂ ನಿಷ್ಟಾವಂತ ಫಾರ್ಮಸಿಸ್ಟ್ ಇದ್ದೇ ಇರುತ್ತಾರೆ. ಒಳ್ಳೆಯ ಗುಣಮಟ್ಟದ, ಪರಿಣಾಮಕಾರಿ ಔಷಧಿ ತಯಾರಿಕೆ, ಸಂಸ್ಕರಣೆ, ಶೇಖರಣೆ ಮತ್ತು ಸಂಶೋಧನೆ ಎಲ್ಲವೂ  ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಅನಿವಾರ್ಯವೆನಿಸಿದೆ. ಪಾರ್ಮಕೋನ್ ಎಂಬ ಗ್ರೀಕ್ ಪದದಿಂದ ಹುಟ್ಟಿದ ಫಾರ್ಮಸಿ ಎಂಬ ಶಬ್ದಕ್ಕೆ ಹಲವಾರು ಅರ್ಥ ಮತ್ತು ಆಯಾಮಗಳನ್ನು ಹೊಂದಿವೆ. ಒಂದೇ ಮಾತಲ್ಲಿ ಹೇಳುವುದಾದರೆ ಔಷಧಿಗಳು ಉತ್ಪಾದನೆ ಶೇಖರಣೆ, ವಿತರಣೆ, ಅಧ್ಯಯನ ಮತ್ತು ಅವಿಷ್ಕಾರ ಎಲ್ಲವೂ ಈ ಫಾರ್ಮಸಿ ಕಾರ್ಯಕ್ಷೇತ್ರದಲ್ಲಿಯೇ ಬರುತ್ತದೆ. ಫಾರ್ಮಸಿ ಕ್ಷೇತ್ರ ಅಂದರೆ ಔಷಧಿ ವಿಜ್ಞಾನದ ವಿಷಯದಲ್ಲಿ ವಿದ್ಯಾರ್ಹತೆ ಪಡೆದು ವೃತ್ತಿಪರವಾಗಿ ಈ ಔಷಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಎಲ್ಲರನ್ನೂ ಫಾರ್ಮಸಿಸ್ಟ್ ಎಂದು ಕರೆಯಲಾಗುತ್ತದೆ.

Also Read  ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವವರೇ ಎಚ್ಚರ…!

 

ಔಷಧಿಯ ದುರ್ಬಳಕೆ ತಡೆಯುವುದು ಹೇಗೆ?

ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಔಷಧಿ ಕ್ಷೇತ್ರವೂ ಈ ಸಮೀಕರಣಕ್ಕೆ ಹೊರತಾಗಿಲ್ಲ. ದಿನಕ್ಕೊಂದರಂತೆ ಹೊಸ ಹೊಸ ಅಣುಜೀವಿಗಳು, ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತಿವೆ. ಅದೇ ರೀತಿ ಹೊಸತಾದ ಔಷಧಿಗಳೂ ಹುಟ್ಟಿಕೊಳ್ಳುತ್ತವೆ. ವಾತಾವರಣದ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ವಿಕಿರಣ, ವಾತಾವರಣದ ಕಲ್ಮಶಗಳಿಂದಲೂ ಅಣುಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ದಿನೇ ದಿನೇ ವಂಶವಾಹಿನಿಗಳಲ್ಲಿ ಪರಿವರ್ತನೆ ಮಾಡಿಸಿಕೊಂಡು ಮನುಕುಲದ ವಿರುದ್ಧ ತೊಡೆತಟ್ಟಿಕೊಂಡು ಸಮರ ಸಾರುತ್ತಲೇ ಇದೆ. ಈಗ ಪ್ರತಿಯೊಂದು ರೋಗಕ್ಕೂ ಒಂದು ಔಷಧಿ ಇದೆ. ಈಗಿನ ಕಾಲಘಟ್ಟದಲ್ಲಿ ಹೊಟ್ಟೆಗೆ ಊಟವಿಲ್ಲದಿದ್ದರೂ ಬದುಕಬಹುದು ಆದರೆ ಔಷಧಿ ಇಲ್ಲದೆ ಬದುಕಲಾರ ಎಂಬ ಅನಿವಾರ್ಯತೆಗೆ ಬಂದು ತಲುಪಿದ್ದೇವೆ. ಹಲವಾರು ರೋಗಗಳನ್ನು ಔಷಧಿಗಳ ಬಳಕೆಯಿಲ್ಲದೆ ಆಹಾರ ನಿಯಂತ್ರಣ, ನಿಯಮಿತ ವ್ಯಾಯಾಮ, ದೈಹಿಕ ಕಸರತ್ತು, ಶುದ್ಧ ನೀರು, ಗಾಳಿ ಆಹಾರಗಳಿಂದ ತಡೆಗಟ್ಟಬಹುದೆಂದು ತಿಳಿದಿದ್ದರೂ ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳಿಗೆ ದಾಸರಾಗುತ್ತಿದ್ದೇವೆ ಎಂಬುದೇ ವಿಪರ್ಯಾಸ. ಹೆಚ್ಚು ದಢೂತಿಯಿದ್ದರೆ ತೆಳ್ಳಗಾಗಲು ಮಾತ್ರೆ, ತೀರ ಸಣಕಲಾಗಿದ್ದರೆ ದೇಹತೂಕ ಹೆಚ್ಚಿಸಲು ಚೂರ್ಣ, ಬುದ್ಧಿಶಕ್ತಿ ಹೆಚ್ಚಿಸಲು ಕಷಾಯ, ಮಾತ್ರೆ ಹೀಗೆ ಪ್ರತಿಯೊಂದಕ್ಕೂ ಮನುಷ್ಯ ಒಂದಲ್ಲ ಒಂದು ಔಷಧಿ ತಯಾರಿ ಮಾಡಿಕೊಂಡು ಅನಗತ್ಯವಾಗಿ ಔಷಧಿಗಳ ಮೇಲೆ  ಅವಲಂಬಿತನಾಗಿದ್ದಾನೆ.

ಔಷಧಿಗಳ ಸದ್ಬಳಕೆಗಿಂತ ದುರ್ಬಳಕೆಯಾಗುತ್ತಿರುವುದೇ ಬಹುದೊಡ್ಡ ದುರಂತ. ಒಂದು ಔಷಧಿ ಮಾರುಕಟ್ಟೆಗೆ ಬರುವ ಮೊದಲು ಸಾಕಷ್ಟು ಸಂಶೋಧನೆ ನಡೆದು ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿ ಪ್ರಾಣಿಗಳಲ್ಲಿ ಮತ್ತು ಮನುಷ್ಯರ ಮೇಲೆ ಪ್ರಯೋಗ ನಡೆಸಿ ಸುರಕ್ಷಿತವಾಗಿದೆ ಎಂದು ಸಾಬೀತಾದಲ್ಲಿ ಮಾತ್ರ ಮನುಕುಲದ ಮೇಲೆ ಉಪಯೋಗಿಸಲು ಅನುಮತಿ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಔಷಧಿ ಕಾರ್ಖಾನೆಗಳಲ್ಲಿ ತಯಾರಾಗಿ ಮೆಡಿಕಲ್ ಸ್ಟೋರ್‍ ಗಳ ಮುಖಾಂತರ ಗ್ರಾಹಕರ ಕೈ ಸೇರುವವರೆಗೆ ವಿಜ್ಞಾನಿಗಳು, ವೈದ್ಯರು, ಸಂಶೋಧಕರು ಮತ್ತು ಪಾರ್ಮಸಿಸ್ಟ್‍ ಗಳ ಪಾತ್ರ ಬಹಳ ಗಣನೀಯವಾದದ್ದು ಮತ್ತು ಪವಿತ್ರವಾದದ್ದು. ಔಷಧಿ ನಿಯಂತ್ರಣ ಇಲಾಖೆಯಲ್ಲಿ ದೃಢೀಕೃತಗೊಂಡ ಬಳಿಕವೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಈ ರೀತಿ ದೊರಕುವ ಔಷಧಿಗಳ ಸದ್ಬಳಕೆಯಲ್ಲಿ ವೈದ್ಯರ ಮತ್ತು ಪಾರ್ಮಸಿಸ್ಟ್‍ ಗಳ ಪಾತ್ರ ಅತ್ಯಂತ ಹಿರಿದಾದುದು. ವೈದ್ಯರು ಅನಗತ್ಯವಾಗಿ ಔಷಧಿಗಳನ್ನು ನೀಡಬಾರದು ಮತ್ತು ಅತೀ ಅವಶ್ಯವಿದ್ದಲ್ಲಿ  ಮಾತ್ರ ಹಿತಮಿತವಾಗಿ ಬಳಸತಕ್ಕದ್ದು. ಅದೇ ರೀತಿ ವೈದ್ಯ ಬರೆದ ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಮತ್ತು ಅದೇ ಔಷಧಿಗಳನ್ನು ನೀಡುವ ಗುರುತರ ಹೊಣೆಗಾರಿಕೆ ಪಾರ್ಮಸಿಸ್ಟುಗಳ ಕೈಯಲ್ಲಿದೆ. ಹೀಗೆ ಎಲ್ಲರೂ ತಂತಮ್ಮ ಜವಾಬ್ದಾರಿ ಅರಿತು ನಿಭಾಯಿಸಿದಲ್ಲಿ ಮಾತ್ರ ಔಷಧಿಗಳ ದುರ್ಬಳಕೆಯನ್ನು ತಡೆಗಟ್ಟಬಹುದು. ಇಲ್ಲವಾದಲ್ಲಿ ಮುಂದೊಂದು ದಿನ ಅಣುಜೀವಿಗಳು, ವೈರಸ್‍ಗಳು ಮತ್ತು ಬ್ಯಾಕ್ಟೀರಿಯಾಗಳು ಮನುಕುಲವನ್ನು ನುಂಗಿ ನೀರು ಕುಡಿಯಲೂಬಹುದು.

Also Read  ವ್ಯಕ್ತಿಯ ಕೊಲೆಗೈದು, ಡಿಕ್ಕಿಯಲ್ಲಿಟ್ಟು ಕಾರು ಸಮೇತ ಸುಟ್ರು.!?

ಕೊನೆಮಾತು

ಅತಿಯಾದಲ್ಲಿ ಅಮೃತವೂ ವಿಷವಾಗಬಲ್ಲದು ಎಂಬುದು ನಮ್ಮ ಹಿರಿಯರು ಹೇಳಿದ ಮಾತು. ಯಾವುದೇ ವಸ್ತುವನ್ನು ಹಿತಮಿತವಾಗಿ ಬಳಸಬೇಕು ಎಂಬುದೇ ಇದರ ಆಶಯ. ಹಾಗೆಯೇ ಔಷಧಿಗಳ ವಿಷಯದಲ್ಲಿಯೂ ನಾವು ಜಾಗೃತರಾಗಬೇಕಾದ ಅನಿವಾರ್ಯ ಸನ್ನಿವೇಶ ಬಂದೊದಗಿದೆ. ಯಾಕೆಂದರೆ ಹಲವಾರು ಔಷಧಿಗಳು ರೋಗ ಗುಣವಾಗಿಸುವುದರ ಜೊತೆಗೆ ಇತರ ಇನ್ನಿತರ ರೋಗಗಳಿಗೆ ರಹದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಲೇ ಅತೀ ಅಗತ್ಯವಿದ್ದಲ್ಲಿ ಅನಿವಾರ್ಯವಿದ್ದಲ್ಲಿ ಮಾತ್ರ ಔಷಧಿಗಳಿಗೆ ಮೊರೆ ಹೋಗಬೇಕು. ಒಮ್ಮೆ ಔಷಧಿಗಳ ದಾಸರಾದಲ್ಲಿ ಜೀವನ ಪರ್ಯಂತ ಔಷಧಿ ಇಲ್ಲದೇ ಮನುಷ್ಯ ಬದುಕಲಾರದಂತಹ ಸನ್ನಿವೇಶಕ್ಕೆ ತಲುಪಿಬಿಡುತ್ತಾರೆ. ಈ ನಿಟ್ಟಿನಲ್ಲಿ ವೈದ್ಯರಿಗೆ ಮತ್ತು ಫಾರ್ಮಸಿಸ್ಟರಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆ ಇದೆ. ತನ್ನ ವೃತ್ತಿ ಧರ್ಮವನ್ನು ಬಲಿಕೊಡದೇ ವೃತ್ತಿಯ ಘನತೆ, ಗೌರವ, ಗಾಂಭೀರ್ಯಗಳನ್ನು ಎತ್ತಿ ಹಿಡಿದು ಮೌಲ್ಯಾಧಾರಿತವಾದ ಧ್ಯೇಯದಿಂದ ಫಾರ್ಮಸಿಸ್ಟ್‍ ಗಳು ಕಾರ್ಯ ನಿರ್ವಹಿಸಿದಲ್ಲಿ ಸಮಾಜದ ಸ್ವಾಸ್ಥ ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾದಲ್ಲಿ ಮಾತ್ರ ಈ ಆಚರಣೆಗೆ ಹೆಚ್ಚಿನ ಮೌಲ್ಯ ಬಂದೀತು. ಅದರಲ್ಲಿಯೇ ಮನುಕುಲದ ಉನ್ನತಿ ಮತ್ತು ಹಿತ ಅಡಗಿದೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ವೃತ್ತಿ ಬಾಂಧವರಿಗೆ ಮತ್ತು ಫಾರ್ಮಸಿಸ್ಟ್‍ ಗಳಿಗೆ ಶುಭವಾಗಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

Also Read  ಒಂದು ಗ್ಲಾಸ್ ಬಿಸಿ ನೀರಿಲ್ಲದೆ 2ಗಂಟೆ ತಡವಾಗಿ ಔಷಧಿ ಸೇವಿಸಿದ ಮಾಜಿ ಪ್ರಧಾನಿ!

ಡಾ|| ಮುರಲೀ ಮೋಹನ್ ಚೂಂತಾರು

ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು

error: Content is protected !!
Scroll to Top