ಪದವಿ ಪರೀಕ್ಷೆ ಮುಗಿದ 12 ದಿನದಲ್ಲೇ ಫಲಿತಾಂಶ ಪ್ರಕಟಿಸಿದ ಬೆಂಗಳೂರು ವಿವಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24.  ಪದವಿ ಪರೀಕ್ಷೆ ನಡೆದ 12 ದಿನಗಳಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯವು ಫಲಿತಾಂಶ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ.

ಬೆಂಗಳೂರು ವಿವಿಯು 6ನೇ ಸೆಮಿಸ್ಟರ್‌ ಬಿ.ಕಾಂ, ಬಿಬಿಎ ಮತ್ತು ಬಿಸಿಎ ಪದವಿ ಪರೀಕ್ಷೆಯನ್ನು ಸೆ.11 ರಂದು ನಡೆಸಿದ್ದು, ಶನಿವಾರದಂದು ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಮೂರು ಕೋರ್ಸ್‌ಗಳಿಂದ 72 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 35 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಆದಷ್ಟು ಬೇಗ ನೀಡಿದರೆ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುವ ಉದ್ದೇಶದಿಂದ ಸಾಧ್ಯವಾದಷ್ಟು ತ್ವರಿತವಾಗಿ ಫಲಿತಾಂಶ ನೀಡಲು ಬೆಂಗಳೂರು ವಿವಿ ಪರೀಕ್ಷಾ ವಿಭಾಗವು ಮೊದಲೇ ಯೋಜನೆ ರೂಪಿಸಿತ್ತು ಎಂದು ವಿವಿ ತಿಳಿಸಿದೆ. ಈ ಕುರಿತು ಮಾತನಾಡಿದ ಬೆಂವಿವಿ ಕುಲಸಚಿವ(ಮೌಲ್ಯಮಾಪನ) ಡಾ. ಸಿ.ಶ್ರೀನಿವಾಸ್‌, ಪರೀಕ್ಷೆ ಮುಗಿದ ತಕ್ಷಣವೇ ಡಿಜಿಟಲ್‌ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಿಸಿ, ಮೌಲ್ಯಮಾಪನ ಮಾಡಿಸಿ ಫಲಿತಾಂಶವನ್ನು ಬೇಗ ನೀಡಿದ್ದೇವೆ. ಕುಲಪತಿಗಳ ಮಾರ್ಗದರ್ಶನ ಹಾಗೂ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಫಲಿತಾಂಶವನ್ನು https://bangaloreuniversity.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಡಬಹುದು.

error: Content is protected !!

Join the Group

Join WhatsApp Group