SSLC, PUC ವರ್ಷಕ್ಕೆ ಮೂರು ಬಾರಿ ಪರೀಕ್ಷೆ -ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಮೂರು ಬಾರಿ ನಡೆಸಲು ತೀರ್ಮಾನಿಸಿದ್ದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಎಸೆಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ವಾರ್ಷಿಕ ಹಾಜರಾತಿ ಶೇ.75 ಕಡ್ಡಾಯವಾಗಿರಬೇಕು. ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿದಲ್ಲಿ ಪರೀಕ್ಷೆ ಬರೆಯಲು ಅನರ್ಹರಾಗಿರುತ್ತಾರೆ. ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುವ ಹೊಸಬರು ಮತ್ತು ಖಾಸಗಿ ಅಭ್ಯರ್ಥಿಗಳು ಎಲ್ಲಾ ವಿಷಯಗಳಲ್ಲಿ ಪರೀಕ್ಷೆ-1 ಬರೆಯುವುದು ಕಡ್ಡಾಯವಾಗಿರುತ್ತದೆ. ಹಾಗಾಗಿ ನೇರವಾಗಿ ಪರೀಕ್ಷೆ-2 ಮತ್ತು ಪರೀಕ್ಷೆ-3ಕ್ಕೆ ಹಾಜರಾಗುವಂತಿಲ್ಲ ಎಂದು ತಿಳಿಸಿದೆ.

ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ನೀಡುವುದಕ್ಕಾಗಿ ಜಿಲ್ಲಾ ಉಪನಿರ್ದೇಶಕರು ಅಗತ್ಯ ತನಿಖಾ ತಂಡವನ್ನು ರಚಿಸಿ ಪ್ರತಿಯೊಂದು ಕಾಲೇಜಿಗೆ ಭೇಟಿ ನೀಡಿ, ಹಾಜರಾದವರ, ಗೈರು ಹಾಜರಾದವರ ಹಾಗೂ ನೋಂದಣಿಯಾದ ವಿದ್ಯಾರ್ಥಿಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ಸಲುವಾಗಿ ಒಂದು ಬಾರಿ ಮಾತ್ರ ನಿಗದಿತ ಶುಲ್ಕವನ್ನು ವಿಧಿಸಬೇಕು. ಎರಡನೆಯ ಬಾರಿ ಶುಲ್ಕ ಪಡೆಯುವಂತಿಲ್ಲ. ಪರೀಕ್ಷೆ-1ರಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ 2 ಮತ್ತು 3ನೆ ಪರೀಕ್ಷೆ ತೆಗೆದುಕೊಳ್ಳಲು ಇಚ್ಛೆ ಇಲ್ಲದಿದ್ದಲ್ಲಿ, ಅಂತಹ ಸಂದರ್ಭದಲ್ಲಿ ಅವರಿಗೆ ಅಂಕಪಟ್ಟಿಗಳನ್ನು ವಿತರಿಸಲು ಕ್ರಮ ವಹಿಸಬೇಕು. ಅಂಕಪಟ್ಟಿಗಳನ್ನು ಪಡೆಯುವ ಸಲುವಾಗಿ ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಆಯಾ ಪರೀಕ್ಷೆಗಳು ಮುಗಿದ ನಂತರ ಅಪ್‍ಲೋಡ್ ಮಾಡಬೇಕು. ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಮರು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಹಾಲಿ ವ್ಯವಸ್ಥೆಯನ್ನು ಮುಂದುವರೆಸಬೇಕು ಎಂದು ಸೂಚಿಸಲಾಗಿದೆ.

Also Read  ಬಿಪಿಎಲ್ ಪಡಿತರ ಚೀಟಿ ಮಾನದಂಡ ಪರಿಶೀಲನೆಗೆ ಸಮಿತಿ ರಚನೆ- ಆರ್.ವಿ.ದೇಶಪಾಂಡೆ

error: Content is protected !!
Scroll to Top