(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 23. ಇಲ್ಲಿನ ಹಳೆಗೇಟು ಗಣೇಶ ಚತುರ್ಥಿ ಹೆಸರಿನಲ್ಲಿ ಮದ್ಯದ ಬಾಟಲಿಯ ಲಕ್ಕಿ ಕೂಪನ್ ಆಯೋಜನೆ ಮಾಡಲಾಗಿದ್ದು, ಪ್ರಕರಣದ ಆರೋಪಿಯನ್ನ ಪತ್ತೆಹಚ್ಚಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಗಣೇಶ ಚತುರ್ಥಿ ಪ್ರಯುಕ್ತ ಹಳೆಗೇಟು ಎಂಬಲ್ಲಿ ನಡೆಯುವ ಗಣೇಶ ಹಬ್ಬದ ಹೆಸರಿನಲ್ಲಿ ಲಕ್ಕಿ ಕೂಪನ್ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪ್ರಥಮ ಬಹುಮಾನ ಬ್ಲ್ಯಾಕ್ ಆಂಡ್ ವೈಟ್ ಮದ್ಯ ಹಾಗೂ ದ್ವಿತೀಯ ಬಹುಮಾನವಾಗಿ ಒಂದು ಕೇಸ್ ಬಿಯರ್ ಇಡಲಾಗಿತ್ತು. ಈ ಲಕ್ಕಿ ಕೂಪನ್ ಗೆ ಸುಳ್ಯ ಪರಿಸರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಹಿಂದೂ ಧರ್ಮದ ಹಬ್ಬದಲ್ಲಿ ಇಂತಹ ಲಕ್ಕಿ ಕೂಪನ್ ಮಾಡಿದವನ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗಿತ್ತು. ಇದೀಗ ಲಕ್ಕಿ ಕೂಪನ್ ಮಾಡಿದವನನ್ನ ಸುಳ್ಯ ಪೊಲೀಸರು ಪತ್ತೆ ಹಚ್ಚಿ ವಿಚಾರಣೆ ಮಾಡಿದ್ದು, ಈ ವೇಳೆ ತಪ್ಪು ಒಪ್ಪಿಕೊಂಡಿರುವ ಯುವಕ ಮುಂದೆ ಇಂತಹ ತಪ್ಪು ಆಗದಂತೆ ಕ್ಷಮೆಯಾಚನೆ ಮಾಡಿದ್ದಾನೆ. ಆತನಿಗೆ ಎಚ್ಚರಿಕೆ ನೀಡಿದ ಪೊಲೀಸರು ಮುಚ್ಚಳಿಕೆ ಬರೆಯಿಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.