ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್-ಪ್ರೆಸ್ ರೈಲು ಸಂಚಾರ ಆರಂಭ – ಸಂಸದರ ಮನವಿಗೆ ರೈಲ್ವೇ ಸಚಿವರ ಭರವಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ಅಕ್ಟೋಬರ್ ತಿಂಗಳ ಅಂತ್ಯದೊಳಗೆ ನಗರದಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲು ಸೇವೆ ಆರಂಭಿಸುವುದಾಗಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. ಹೊಸದಿಲ್ಲಿಯಲ್ಲಿ ಶುಕ್ರವಾರದಂದು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ ಈ ಭರವಸೆ ಲಭಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬೆಂಗಳೂರು-ಕಣ್ಣೂರು ರೈಲನ್ನು ಕೊಚ್ಚಿನ್‌ ವರೆಗೆ ವಿಸ್ತರಿಸುವಂತೆ ಸಲ್ಲಿಸಲಾಗಿರುವ ಕೇರಳಿಗರ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸದಂತೆ ಒತ್ತಾಯಿಸಿರುವೆ. ಇದಕ್ಕೂ ಸಚಿವರು ಸ್ಪಂದಿಸಿದ್ದು, ಅಂತಹ ಯಾವುದೇ ಪ್ರಸ್ತಾವನೆಗೆ ಅನುಮತಿ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಪ್ರತೀದಿನ ಬೆಳಗ್ಗೆ ಸುಬ್ರಹ್ಮಣ್ಯ ರಸ್ತೆಯಿಂದ ಹೊರಟು ಮಂಗಳೂರಿಗೆ ಹಾಗೂ ಸಂಜೆ ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಗೆ ಪ್ಯಾಸೆಂಜರ್ ರೈಲು ಒದಗಿಸಲು ಒಪ್ಪಿಗೆ ಸಿಕ್ಕಿದೆ. ರೈಲ್ವೇ ಇಲಾಖೆಯನ್ನು ಕೇರಳದ ಹಿಡಿತದಿಂದ ತಪ್ಪಿಸಲು ದಕ್ಷಿಣ ರೈಲ್ವೆಯ ಪಾಲಕ್ಕಾಡು ವಿಭಾಗದಲ್ಲಿರುವ ದ.ಕ. ಜಿಲ್ಲೆಯ ಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕೆಂಬ ಮನವಿಗೆ ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ದಕ್ಷಿಣ ರೈಲ್ವೇ ಹಾಗೂ ಕೊಂಕಣ ರೈಲ್ವೇ ವಿಭಾಗಗಳ ನಡುವೆ ಸಂಚರಿಸುವ ರೈಲುಗಳ ಅನಗತ್ಯ ವಿಳಂಬವನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿರುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Also Read  ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಕೆಜಿಎಫ್ 2 ಪತ್ರಿಕೆ ➤ ಪ್ರೇಕ್ಷಕರ ಮನಗೆದ್ದ ಆ ಪತ್ರಿಕೆಯಲ್ಲಿ ಏನಿದೆ ಎಂಬ ಕುತೂಹಲವೇ..⁉️

error: Content is protected !!
Scroll to Top