(ನ್ಯೂಸ್ ಕಡಬ) newskadaba.com ಉಡುಪಿ, ಸೆ. 22. ರಾಜ್ಯದಲ್ಲಿ ಏಕಕಾಲಕ್ಕೆ ಹಿಂಜಾವೇ ರಾಜ್ಯ ಫೇಸ್ಬುಕ್ ಪೇಜ್ ಹಾಗೂ ಎಲ್ಲಾ ಹಿಂಜಾವೇ ಜಿಲ್ಲಾ ನಾಯಕರ ಫೇಸ್ ಬುಕ್ ಅಕೌಂಟ್ ಹಾಗೂ ಜಾಗರಣಾ ವೇದಿಕೆ ಮುಖಂಡರ ವೆಬ್ ಪೇಜ್, ಡಿಜಿಟಲ್ ಚಾನೆಲ್ ಹ್ಯಾಕ್ ಮಾಡಲಾಗಿದೆ. ಹಲವು ಮುಖಂಡರ ಪ್ರೊಫೈಲ್ಗಳು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದೆ. ಹಿಂಜಾವೆಯ ರಾಜ್ಯದ 20ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ. ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಸರ್ಕಾರದ ಸೂಚನೆ ಹೋಗಿ ಮಾಡಿದ್ದರೋ? ಅಥವಾ ಹ್ಯಾಕರ್ಸ್ ಗಳನ್ನು ಬಳಸಿ ಮಾಡಿದ್ದರೋ ಎಂಬುವುದು ತನಿಖೆಯಾಗಬೇಕು. ಈ ಸೈಬರ್ ದಾಳಿಯನ್ನು ಗಮನಿಸಿದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕುತಂತ್ರವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ. 2014 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಆ ರೀತಿಯ ಅಭಿಯಾನ ಈ ಬಾರಿ ಅಗಬಾರದು ಎನ್ನುವ ನಿಟ್ಟಿನಲ್ಲಿ ಮುಖಂಡರ ಪೇಜ್ ಗಳನ್ನು ತೆಗೆದು ಹಾಕಿದ್ದಾರೆ. ಹಿಂಜಾವೇ ಕೇವಲ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡಿರುವ ಫೇಸ್ ಬುಕ್ ಹುಲಿಗಳಲ್ಲ. ಹಿಂಜಾವೇ ಜನರ ಮಧ್ಯೆ ಕೆಲಸ ಮಾಡಿದೆ, ಮುಂದೆಯೂ ಮಾಡಲಿದೆ ಎಂದು ಹೇಳಿದ್ದಾರೆ.