(ನ್ಯೂಸ್ ಕಡಬ) newskadaba.com ಉಡುಪಿ, ಸೆ. 22. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಟಿ. ನಾರಾಯಣಗೌಡ ಬಣ) ಉಡುಪಿ ಜಿಲ್ಲಾ ಕಾರ್ಯಕರ್ತರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.
ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ರಾಜ್ಯದಲ್ಲಿ ವಾಡಿಕೆಯಂತೆ ಮಳೆ ಆಗದೇ ಇದ್ದು, ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಷ್ಟು ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 236 ತಾಲೂಕುಗಳ ಪೈಕಿ 192 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವೇ ಘೋಷಿಸಿದ್ದು, ರಾಜ್ಯದ ಬೆನ್ನೆಲುಬಾಗಿರುವ ರೈತರ ಜೀವನದಿ ಕಾವೇರಿಯ ನೀರು ತಮಿಳುನಾಡಿಗೆ ಬಿಡದಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಛೇರಿಯ ಗೇಟ್ ಬಳಿ ಮಣಿಪಾಲ ಪೊಲೀಸರು ತಡೆದು ನಿಲ್ಲಿಸಿ, ಪ್ರತಿಭಟನೆ ಕೈ ಬಿಟ್ಟು ವಾಪಸು ಹೋಗಿ ಎಂದು ಎಚ್ಚರಿಸಿದರು. ಆದರೆ ಅದಕ್ಕೆ ಒಪ್ಪದ ಕಾರ್ಯಕರ್ತರು, ಸ್ಥಳದಲ್ಲಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದರು. ಪೊಲೀಸರನ್ನು ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು. ಇದೇ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದರು ಪೊಲೀಸರು, ಎಲ್ಲರನ್ನೂ ಪೊಲೀಸ್ ವಾಹನದಲ್ಲಿ ಮಣಿಪಾಲ ಪೊಲೀಸ್ ಠಾಣೆಗೆ ಕರೆದೊಯ್ದು ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿದರು ಎನ್ನಲಾಗಿದೆ.