(ನ್ಯೂಸ್ ಕಡಬ) newskadaba.com ಕಾಪು, ಸೆ. 22. ತಿಂಗಳ ಹಿಂದೆ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಆಗುಂಬೆ ಸಮೀಪದ ಫಾಲ್ಸ್ ಗೆ ಹೋಗಿ ವಾಪಸ್ ಬರುವಾಗ ಹಿಂದೂ ಕಾರ್ಯಕರ್ತರು ತಡೆದು ವಿಚಾರಣೆ ಮಾಡಿ ಕಳುಹಿಸಿದ್ದರು. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯುವತಿಯ ಸಹೋದರ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ- ತಿಂಗಳ ಹಿಂದೆ ಬೈಕ್ ನಲ್ಲಿ ಆಗುಂಬೆಯ ಜಲಪಾತಕ್ಕೆ ತೆರಳಿದ ವಿದ್ಯಾರ್ಥಿಗಳಿಬ್ಬರು ಅಲ್ಲಿಂದ ಮರಳುತ್ತಿದ್ದ ವೇಳೆ ಬೈಕ್ ಅನ್ನು ತಡೆಹಿಡಿದ ಸ್ಥಳೀಯ ಹಿಂದೂ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಬಳಿಕ ಹಿಂದೂ ಕಾರ್ಯಕರ್ತರು ಯುವಕ-ಯುವತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ನಂತರ ಆಗುಂಬೆ ಪೊಲೀಸರು ಯುವತಿ ಹಾಗೂ ಯುವಕನ ಮನೆಯವರನ್ನು ಠಾಣೆಗೆ ಕರೆಸಿ, ಇಬ್ಬರ ಮನೆಯವರು ಪರಿಚಯಸ್ಥರಾಗಿದ್ದರಿಂದ ಪ್ರಕರಣ ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸಿದ್ದರು. ಈ ವಿಡಿಯೋವನ್ನು ಕಾರ್ಯಕರ್ತರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದರು. ಇದೀಗ ವಿಡಿಯೋ ತಿಂಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯುವತಿಯ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.