(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 22. ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ್ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ, ಪಿ.ಎಮ್ ಸ್ವ-ನಿಧಿ ಯೋಜನೆಯಡಿ ಈವರೆಗೆ ಸಾಲ ಪಡೆಯದೇ ಇರುವ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯವು ಪ್ರಥಮ ಹಂತದಲ್ಲಿ 10,000ರೂ., ನಂತರ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿ ಸಹಾಯಧನ ಸೌಲಭ್ಯದೊಂದಿಗೆ ಸಾಲ ಮರುಪಾವತಿಸಿದ ಬಳಿಕ ದ್ವಿತೀಯ ಹಂತದಲ್ಲಿ 20,000 ರೂ., ನಂತರ ತೃತೀಯ ಹಂತದಲ್ಲಿ 50,000ರೂ. ಬ್ಯಾಂಕ್ ಸಾಲ ಸೌಲಭ್ಯ ದೊರೆಯಲಿದೆ. ಡಿಜಿಟಲ್ ವ್ಯವಹಾರ ಮಾಡುವ ಬೀದಿ ಬದಿ ವ್ಯಾಪಾರಿಗಳಿಗೆ ವಾರ್ಷಿಕ 1,200ರೂ. ಕ್ಯಾಶ್ ಬ್ಯಾಕ್ ದೊರೆಯಲಿದೆ.
ಪಿ.ಎಮ್, ಸ್ವ-ನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಸೌಲಭ್ಯವನ್ನು ಹಾಲು ಮತ್ತು ದಿನಪತ್ರಿಕೆ ವಿತರಕರು, ಡೋಬಿ ಮತ್ತು ಇಸ್ತ್ರಿ ಸೇವೆ, ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವವರು, ಬಡಗಿ, ಚಮ್ಮಾರರು, ಬಿದಿರಿನ ಬುಟ್ಟಿ, ಬೊಂಬು ಬಾಸ್ಕೆಟ್, ಏಣಿ ವ್ಯಾಪಾರಸ್ಥರು, ಹೂವಿನ ಕುಂಡಗಳನ್ನು ಮಾಡುವವರು, ನೇಯ್ಗೆಗಾರರು, ಎಳನೀರು ಮಾರಾಟಗಾರರು, ಆಹಾರ ತಯಾರಿಸಿ ಮಾರಾಟ ಮಾಡುವವರು (ಕ್ಯಾಟರಿಂಗ್ ಸರ್ವಿಸ್) ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಕೂಡ ವಿಸ್ತರಿಸಲಾಗಿದೆ.
ಪಿ.ಎಮ್. ಸ್ವನಿಧಿ ಯೋಜನೆಯಡಿ ಈ ರೆಗೆ ಸಾಲ ಪಡೆಯದೇ ಇರುವ ಬೀದಿ ಬದಿ ವ್ಯಾಪಾರಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸಲು, ಬ್ಯಾಂಕ್ ಸಾಲ ವಿತರಿಸಲು, ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಬ್ಯಾಂಕ್ ಸಾಲ ಮಂಜೂರಾತಿ ಮತ್ತು ನಗದು ಬಿಡುಗಡೆ ಮತ್ತು ಸ್ವ-ನಿಧಿ ಸೇವಾ ಸಮೃದ್ಧಿ ಕಾರ್ಯಕ್ರಮಡಿ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಒದಗಿಸುವ ಸಲುವಾಗಿ ಸಾಮಾಜಿಕ ಮತ್ತು ಅರ್ಥಿಕ ಸಮೀಕ್ಷೆ, ಬ್ಯಾಂಕ್ ಶಾಖಾ ಮಟ್ಟದಲ್ಲಿ ಸಾಲ-ಮೇಳ, ಮೈ ಬೀ ಡಿಜಿಟಲ್ ಕ್ಯಾಂಪ್, ಆರೋಗ್ಯ ಶಿಬಿರ, ಆಹಾರ ಮೇಳ ಇತ್ಯಾದಿ ಕಾರ್ಯಕ್ರಮಗಳನ್ನು ಸ್ವನಿಧಿ ಸೇವಾ ಸಮೃದ್ಧಿ ಮಾಸಾಚರಣೆ ಪ್ರಯುಕ್ತ 2023ರ ಸೆ.16ರಿಂದ ಅ.15ರ ವರೆಗೆ ನಗರದ ಪ್ರಮುಖ ಬ್ಯಾಂಕುಗಳ ಸಹಯೋಗದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ಸುರತ್ಕಲ್ ವಲಯ ಕಚೇರಿ ಮತ್ತು ಕದ್ರಿ ವಲಯ ಕಚೇರಿಯಲ್ಲಿ ಆಯೋಜಿಸಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಧಾನ್ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಅತ್ಮ ನಿರ್ಭರ್ ನಿದಿ, ಪಿ.ಎಮ್. ಸ್ವ-ನಿಧಿ ಯೋಜನೆಯ ಸೌಲಭ್ಯ ಪಡೆಯುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.