ಬದುಕು ತ್ಯಜಿಸುವ ಮುನ್ನ ಒಂದು ಕ್ಷಣ ಯೋಚಿಸಿ- ಡಾ. ಸುದರ್ಶನ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 16. ಯುವ ಜನರು ವ್ಯಸನದಿಂದ ದೂರ ಉಳಿದು ಸದೃಢ ಮನಸ್ಸನ್ನು ಹೊಂದಿದರೆ ಮಾತ್ರ ಆತ್ಮಹತ್ಯೆಯಂತಹ ಹೇಯ ಕೃತ್ಯಗಳಿಂದ ದೂರ ಉಳಿಯಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುದರ್ಶನ್ ತಿಳಿಸಿದರು. ಅವರು ಶನಿವಾರದಂದು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಅವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಯುವಜನರು ಸಾಮಾನ್ಯ ಸಮಸ್ಯೆಗಳನ್ನು ಎದುರಿಸಲಾಗದೇ ಮನನೊಂದು ಒತ್ತಡ, ಖಿನ್ನತೆಗೆ ಒಳಗಾಗುತ್ತಾರೆ ಹಾಗೂ ಆತ್ಮಹತ್ಯೆಗೂ ಶರಣಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಜನರು ಹೆಚ್ಚಾಗಿ ಆತ್ಮಹತ್ಯೆಗೆ ಮುಂದಾಗುತ್ತಿರುವುದು ನಾವು ಪ್ರತಿದಿನ ಕಾಣುತ್ತಿದ್ದೇವೆ ಇಂತಹ ಕೃತ್ಯಗಳನ್ನು ಮಾಡುವ ಮುನ್ನ ತಮ್ಮ ಪೋಷಕರು ಮಾಡಿರುವ ತ್ಯಾಗವನ್ನು ನೆನಪಿಸಿಕೊಂಡು ಇವುಗಳಿಂದ ದೂರ ಸರಿಯಬೇಕು ಎಂದರು.

Also Read  ಮಂಗಳೂರು: ಚಿತ್ರದ ಶೂಟಿಂಗ್ ವೇಳೆ ನಟ - ನಟಿಯ ನಡುವೆ ಹೊಡೆದಾಟ

ಆತ್ಮಹತ್ಯೆ ಎನ್ನುವುದು ಜನರು ತಮ್ಮ ಜೀವನವನ್ನು ಕೊನೆಗೊಳಿಸಲು ತೆಗೆದುಕೊಳ್ಳುವ ಒಂದು ಗಂಭೀರ ನಿರ್ಧಾರ. ಆದರೆ ಬದುಕು ತ್ಯಜಿಸುವ ಮುನ್ನ ಒಂದು ಕ್ಷಣ ಯೋಚಿಸುವುದು ತುಂಬಾ ಮುಖ್ಯ. ವಿವಿಧ ರೀತಿಯ ಕ್ಷುಲ್ಲಕ ಕಾರಣದಿಂದ ಯುವಜನರು ಮಾನಸಿಕ ಕಿರುಕುಳಕ್ಕೆ ಒಳಗಾಗಿ ಮನನೊಂದು ದುಶ್ಚಟಗಳಿಗೆ ಬಲಿಯಾಗಿ ಮತ್ತಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಯುವ ಜನರಲ್ಲಿ ಬದುಕಿನ ಬಗ್ಗೆ ವಿಶ್ವಾಸ ಮೂಡಿಸಿ ಆತ್ಮಹತ್ಯೆಯನ್ನು ತಡೆಯುವುದು ಹಾಗೂ ಆತ್ಮಹತ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಆತ್ಮಹತ್ಯೆಯ ಪ್ರೇರಣೆ ಬರುವುದು ಸಮಯ ಕ್ಷಣಿಕ ಆ ಸಮಯದಲ್ಲಿ ಅವರು ತಮ್ಮ ಮನಸ್ಸನ್ನು ಬೇರೆ ಕೆಲಸದಲ್ಲಿ ತೊಡಗಿಸಿಕೊಂಡರೆ ಮತ್ತೆ ಆತ್ಮಹತ್ಯೆ ಅಂತಹ ಕೆಟ್ಟ ಆಲೋಚನೆಯಿಂದ ದೂರ ಉಳಿಯಬಹುದು. ಮಾದಕ ವ್ಯಸನ ಮತ್ತು ಮಧ್ಯಪಾನದಂತಹ ಅಂಶಗಳು ಆತ್ಮಹತ್ಯೆಯಂತಹಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಣೆ ನೀಡುವುದರಿಂದ ಅವುಗಳನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ ಎಂದರು.

ಕೋವಿಡ್ ಸಾಂಕ್ರಾಮಿಕ ರೋಗದ ಕಾಲದಲ್ಲಿ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭ್ಯಾಸವನ್ನು ಮೊಬೈಲ್ ಮೂಲಕ ಮಾಡಲಾಗಿತ್ತು, ವಿದ್ಯಾರ್ಥಿಗಳು ಮೊಬೈಲ್ ಗೆ ಮಾರು ಹೋಗಿ ಅದರಿಂದ ಹೊರಬರಲು ಸಾಧ್ಯವಾಗದೆ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಮೊಬೈಲ್‍ನಿಂದ ಹೊರಬರಲು ಅನೇಕ ಸಮಸ್ಯೆಗಳು ಶಿಕ್ಷಕರಿಗೆ ಮತ್ತು ಪಾಲಕರಿಗೆ ಎದುರಾಗಿವೆ. ಇದರಿಂದ ಮೊಬೈಲ್ ಕೂಡ ಒಂದು ಖಿನ್ನತೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಎನ್. ಎಸ್.ಎಸ್ ಸಯೋಜನಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ಮತ್ತು ತಾಲೂಕು ಆರೋಗ್ಯ ಅಧಿಕಾರಿ ಡಾ. ಚಿರಾಗ್ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಮನೋರೋಗ ತಜ್ಞರಾದ ಡಾ. ಸುಪ್ರೀತಾ, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಮಾನಸಿಕ ಆರೋಗ್ಯ ತಜ್ಞರಾದ ಡಾ. ಸುನೀಲ್ ಹಾಗೂ ಶಾಲಾ ಕಾಲೇಜು ಮಕ್ಕಳು ಉಪಸ್ಥಿತರಿದ್ದರು.

Also Read  ಪುತ್ತೂರು: ವಿಶ್ವ ಜನಸಂಖ್ಯಾ ದಿನಾಚರಣೆ-2020

error: Content is protected !!
Scroll to Top