(ನ್ಯೂಸ್ ಕಡಬ) newskadaba.com ಮಂಗಳೂರು,ಸೆ. 16. ನಮ್ಮ ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸಿ ಅದರ ಆಶಯದಂತೆ ನಡೆದುಕೊಂಡಾಗ ಮಾತ್ರ ಸದೃಢ ದೇಶ ನರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹೇಳಿದರು. ಅವರು ಶುಕ್ರವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆದ ಸಂವಿಧಾನದ ಪೀಠಿಕೆಯ ಓದು ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದೆ ನಮ್ಮ ದೇಶದಲ್ಲಿ ರಾಜರ ಆಡಳಿತವಿತ್ತು ಆದರೆ ಈಗ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿ ಪ್ರಜೆಗಳೇ ತಮ್ಮ ಪ್ರಭುಗಳನ್ನು ಆಯ್ಕೆ ಮಾಡುವ ಅವಕಾಶವಿದೆ. ಮತದಾನದ ಹಕ್ಕು ಚಲಾಯಿಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶವನ್ನು ಸಂವಿಧಾನದ ಮೂಲಕ ಕಲ್ಪಿಸಲಾಗಿದೆ ಎಂದರು. ಸಂವಿಧಾನದ ಅರಿವು ಎಲ್ಲರಿಗೂ ಅಗತ್ಯವಾಗಿದೆ. ಪ್ರತಿಯೊಬ್ಬರಿಗೂ ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಶಾಂತಿ, ನೆಮ್ಮದಿ ದೊರಕಲು ಸಂವಿಧಾನ ನೀಡಿರುವ ಅವಕಾಶಗಳು ಕಾರಣವಾಗಿದೆ. ಸಂವಿಧಾನದ ಪಾವಿತ್ರ್ಯ್ಯತೆ, ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಗುರುತರ ಜವಾಬ್ದಾರಿಯಾಗಿದೆ ಎಂದರು. ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಭೋಧಿಸಿ, ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳಿಂದ ಪ್ರಜಾಪ್ರಭುತ್ವ ಎಂದರೇನು ಅವುಗಳಲ್ಲಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದು ಅವುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಅಲ್ಲದೇ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬ ಮಾಹಿತಿ ನೀಡಿದರು.
ನ್ಯಾಯಾವಾದಿಗಳಾದ ಅರುಣಾ. ಬಿ.ಪಿ ಅವರು ವಿದ್ಯಾರ್ಥಿಗಳು ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಬೇಕು. ಸಂವಿಧಾನವು ಭಾರತೀಯ ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕು ಸೇರಿದಂತೆ ರಾಜ್ಯ ನಿರ್ದೇಶಕ ತತ್ವವನ್ನು ಒದಗಿಸಿದೆ. ಪ್ರತಿಯೊಬ್ಬ ನಾಗರೀಕರೂ ಸಂವಿಧಾನ ಬದ್ಧವಾಗಿ ಸೇವೆ ಸಲ್ಲಿಸಬೇಕು. ದೇಶದ ಐಕ್ಯತೆ ಹಾಗೂ ಅಖಂಡತೆಗೆ ಬದ್ಧರಾಗಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಡಿ.ಜಿ. ಸಂತೋಷ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ., ಸಮಾಜ ಕಲ್ಯಾಣ ಉಪನರ್ದೇಶಕರಾದ ಮಾಲತಿ ಬಿ. ಹಾಗೂ ಜಿಲ್ಲಾಪಂಚಾಯತ್ ನ ಉಪ ಕಾರ್ಯರ್ಶಿಯಾದ ರಘು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಸಂಬಂಧಿಸಿದ ಅಧಿಕಾರಿಗಳು, ವಸತಿ ನಿಲಯದ ವಿದ್ಯರ್ಥಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನಾಧಿಕಾರಿ ಶಿವಕುಮಾರ್. ಸಿ ವಂದಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಗುರುಪುರದ ಪ್ರಾಂಶುಪಾಲರಾದ ಸುಮಂಗಲ ಎಸ್. ನಿರೂಪಿಸಿದರು.