ಕಡಬ: ಅನ್ನಭಾಗ್ಯದ ಅಕ್ಕಿ ಜೊತೆ ಕಲ್ಲು ಹಾಗೂ ಕಲಬೆರಕೆ ವಸ್ತುಗಳು ಫ್ರೀ- ಅಧಿಕಾರಿಗಳಿಂದ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖೆಯಲ್ಲಿ ಆಹಾರ ಸರಬರಾಜು ಇಲಾಖೆಯ ಪಡಿತರ ಅಕ್ಕಿಯ ಕೆಲವು ಗೋಣಿ ಚೀಲದಲ್ಲಿ ಅಕ್ಕಿಯೊಂದಿಗೆ ಹುಣಸೆ ಬೀಜ, ಕಲ್ಲಿನ ಕಟ್ಟು, ಹೆಸರು ಕಾಳಿನ ಪುಡಿ, ಕಲ್ಲುಸಕ್ಕರೆ ಮಿಶ್ರಿತ ಪುಡಿ ಸೇರಿದ್ದು, ಈ ಬಗ್ಗೆ ಪಡಿತರದಾರರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.


ಕಲಬೆರಕೆ ಬಗ್ಗೆ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳನ್ನು ಪೋನ್ ಮೂಲಕ ಸಂಪರ್ಕಿಸಿ ಕೊಯಿಲ ಪಡಿತರ ವಿತರಣಾ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು. ಅದರಂತೆ ಪಡಿತರ ವಿತರಣಾ ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷಕ ಎಸ್. ಪೃಥ್ವಿರಾಜ್, ಕಡಬ ಆಹಾರ ನೀರಿಕ್ಷಕ ಎಂ.ಎಲ್ ಶಂಕರ, ಕೆ.ಎಫ್.ಸಿ.ಎಸ್ ನ ಸಗಟು ಗೋದಾಮಿನ ಮ್ಯಾನೇಜರ್ ಚಂದ್ರಹಾಸ ತಪಾಸಣೆ ನಡೆಸಿದ್ದು, ಕಳಪೆ ಗುಣಮಟ್ಟದ ಪಡಿತರ ಅಕ್ಕಿಯೊಂದಿಗೆ ಕೆಲವೊಂದು ಗೋಣಿ ಚೀಲದಲ್ಲಿ ಹುಣಸೆ ಬೀಜ, ಕಲ್ಲಿನ ಕಟ್ಟು, ಹೆಸರುಕಾಳಿನ ಪುಡಿ ಇರುವುದನ್ನು ಧೃಡಪಡಿಸಿದ್ದು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಹಾಗೂ ನಿರ್ದೇಶಕರು, ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಕೊಯಿಲ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ಸುಭಾಸ್ ಶೆಟ್ಟಿ ಆರುವಾರ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!
Scroll to Top