ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಗಣೇಶೋತ್ಸವ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಘಟಕರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರದಂದು ಗಣೇಶೋತ್ಸವ ಸಂದರ್ಭ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದಿನಂತೆಯೇ ಜಿಲ್ಲೆಯಲ್ಲಿ ಶಾಂತಿ ಹಾಗೂ ಸೌಹಾರ್ದಯುತ ಗಣೇಶೋತ್ಸವ ಆಚರಣೆಗೆ ಎಲ್ಲರೂ ಸಹಕರಿಸಬೇಕು. ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಏಕಗವಾಕ್ಷಿ (ಸಿಂಗಲ್ ವಿಂಡೋ)ಯಡಿ ಅನುಮತಿ ನೀಡಬೇಕು. ಉತ್ಸವಕ್ಕೆ ಸಂಘಟಕರು ಗ್ರಾಮೀಣ ಭಾಗದಲ್ಲಾದರೆ ಪಂಚಾಯತ್ ಅಥವಾ ಸ್ಥಳೀಯ ಸಂಸ್ಥೆಗಳು, ನಗರ ಭಾಗದಲ್ಲಾದರೆ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ಧ್ವನಿವರ್ಧಕ ಅಳವಡಿಕೆಗೆ ಆಯಾಯ ಪೊಲೀಸ್ ಠಾಣೆಗಳು ಅನುಮತಿ ನೀಡಬೇಕು ಎಂದು ಹೇಳಿದರು.

ಪಿಒಪಿಯಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಬಳಸಲು ಅವಕಾಶವಿಲ್ಲ. ಉಳಿದಂತೆ ಶಬ್ಧ ಮಾಲಿನ್ಯವಾಗದಂತೆ ಕ್ರಮ ವಹಿಸುವುದು, ಗಣೇಶೋತ್ಸವದ ಸಂದರ್ಭ ಹೆಚ್ಚು ಜನ ಸೇರುವಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ, ಆ್ಯಂಬುಲೆನ್ಸ್‍ಗಳು ಸನ್ನದ್ಧವಾಗಿರುವಂತೆ ಹಾಗೂ ವಿಸರ್ಜನೆ ಸಂದರ್ಭ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಮನ ಹರಿಸುವಂತೆ ಆಯೋಜಕರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

Also Read  ಸರ್ಪ ಸಂಸ್ಕಾರಕ್ಕೆ ಹೆಚ್ಚಿನ ದಕ್ಷಿಣೆಗೆ ಬೇಡಿಕೆ - ಅರ್ಚಕ ಅಮಾನತು

ಪ್ಲಾಸ್ಟರ್ ಪ್ಯಾರಿಸ್ ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ ಭಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಾಂಪ್ರದಾಯಕವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲಮೂಲಕ್ಕೆ ತೊಂದರೆಯಾಗುತ್ತದೆ. ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಪರಿಸರದಲ್ಲಿ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ ಪ್ರಾಣಿ ಪಕ್ಷಿ, ಜಲಚರಗಳ ಜೀವಕ್ಕೆ ಅಪಾಯವನ್ನುಂಟು ಮಾಡಲಾಗುತ್ತದೆ. ಅಲ್ಲದೆ ಸಾರ್ವಜನಿಕರ ಆರೋಗ್ಯಕ್ಕೂ ಧಕ್ಕೆ ಉಂಟಾಗುತ್ತದೆ. ಕರ್ನಾಟಕ ರಾಜ್ಯ ಮಾಲಿನ ನಿಯಂತ್ರಣ ಮಂಡಳಿಯ ಸದರಿ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕೆರೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಈ ಸಂದರ್ಭ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಗರಿಷ್ಟ 6.5 ಅಡಿ ಎತ್ತರದವರೆಗಿನ ಗಣೇಶ ಮೂರ್ತಿಗಳನ್ನು ಪೂಜಿಸಲಾಗುತ್ತಿದ್ದು, ಮಣ್ಣಿನಿಂದಲೇ ಈ ವಿಗ್ರಹಗಳನ್ನು ತಯಾರಿಸಲಾಗುತ್ತದೆ ಎಂದರು.

Also Read  ಭಾರತದ ಅತಿ ಅಗ್ಗದ 5G ಸ್ಮಾರ್ಟ್​ಫೋನ್ Lava Blaze ಇಂದಿನಿಂದ ಖರೀಗೆ ಲಭ್ಯ

ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಸಾರ್ವಜನಿಕವಾಗಿ ಪಿಒಪಿ ಗಣಪನ ಮೂರ್ತಿಗಳನ್ನು ಬಳಸುವುದು ಕಂಡು ಬಂದಿಲ್ಲ. ಹಾಗಿದ್ದರೂ ಸ್ಥಳೀಯಾಡಳಿತ ಈ ಬಗ್ಗೆ ನಿಗಾ ವಹಿಸುತ್ತಿವೆ ಎಂದರು. ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಬಳಸುವ ವಾಹನಗಳ ಕಾರ್ಯಕ್ಷಮತೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆಯವರು ದೃಢೀಕರಿಸಿಕೊಳ್ಳುವಂತೆ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಲಹೆ ನೀಡಿದರು. ನೇತ್ರಾವತಿ, ಫಲ್ಗುಣಿ ಸೇರಿದಂತೆ  ಕೆರೆಗಳಲ್ಲಿ ಗಣಪತಿ ವಿಸರ್ಜನೆ ಮಾಡುವಲ್ಲಿ ಬೋಟ್, ಸುವ್ಯವಸ್ಥಿತ ಲೈಟಿಂಗ್, ಲೈವ್ ಜಾಕೆಟ್, ಅಗ್ನಿ ಸುರಕ್ಷತೆ ಸೇರಿದಂತೆ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಮನಪಾ ಆಯುಕ್ತ ಆನಂದ್, ಡಿಸಿಪಿ ಸಿದ್ಧಾರ್ಥ್ ಗೋಯಲ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top