(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 13. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಪೈಕಿ 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ/ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (ಕಲಾ/ ವಾಣಿಜ್ಯ/ ವಿಜ್ಞಾನ ವಿಭಾಗ) ಉಚಿತ ಲ್ಯಾಪ್ ಟಾಪ್‍ಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ, ಅರ್ಜಿ ನಮೂನೆಯನ್ನು ಕಾರ್ಮಿಕ ಅಧಿಕಾರಿ ಕಚೇರಿ ಅಥವಾ ಆಯಾ ತಾಲ್ಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಎಸ್‍ಎಸ್‍ಎಲ್‍ಸಿ ಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ (ಮೆರಿಟ್ ಆಧಾರದ ಮೇಲೆ) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸಮಾನ ಅಂಕಗಳನ್ನು ಪಡೆದಿದ್ದರೆ ಫಲಾನುಭವಿಯ ನೋಂದಣಿ ಸದಸ್ಯತ್ವದ ಹಿರಿತನವನ್ನು ಆಯ್ಕೆಗೆ ಪರಿಗಣಿಸಲಾಗುವುದು. ಇದು ಕರ್ನಾಟಕ ರಾಜ್ಯದ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಮಾತ್ರ ಅನ್ವಯವಾಗುವುದು. ಮುಕ್ತ ವಿಶ್ವವಿದ್ಯಾನಿಲಯ/ ದೂರ ಶಿಕ್ಷಣ ಮೂಲಕ ವ್ಯಾಸಂಗ ಮಾಡುತ್ತಿರುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಮಾರ್ಚ್-2023 ರ ಅಂತ್ಯಕ್ಕೂ ಮೊದಲು ನೋಂದಣಿಯಾಗಿರುವ ಕಾರ್ಮಿಕರ ಮಕ್ಕಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಅರ್ಜಿಯೊಂದಿಗೆ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಗುರುತಿನ ಚೀಟಿಯ ಪ್ರತಿ ಹಾಗೂ ನವೀಕರಣದ ಗುರುತಿನ ಚೀಟಿಯ ಪ್ರತಿ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ. 2023-24 ನೇ ಸಾಲಿನಲ್ಲಿ ವಿದ್ಯಾರ್ಥಿಯು ಪ್ರಥಮ/ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ವಿದ್ಯಾ ಸಂಸ್ಥೆಯ ಮುಖ್ಯಸ್ಥರ ಸಹಿ ಹಾಗೂ ಮೊಹರನ್ನು ಅರ್ಜಿಯಲ್ಲಿ ಮಾಡಿಸಿ ಸಲ್ಲಿಸತಕ್ಕದ್ದು. ಪ್ರಾಂಶುಪಾಲರ ಸಹಿ ಹಾಗೂ ಮೊಹರಿನೊಂದಿಗೆ ವಿದ್ಯಾರ್ಥಿಯ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯ ದೃಢೀಕೃತ ಪ್ರತಿ. ಸರ್ಕಾರ/ ಯಾವುದೇ ಇಲಾಖೆ/ ನಿಗಮ/ ಮಂಡಳಿಯಿಂದ ಇದುವರೆಗೆ ಯಾವುದೇ ಯೋಜನೆಯಲ್ಲಿ ಟ್ಯಾಬ್/ ಲ್ಯಾಪ್‍ಟಾಪ್ ಪಡೆಯದೇ ಇರುವ ಬಗ್ಗೆ ಸ್ವಯಂ ದೃಢೀಕರಣ ದಾಖಲಾತಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆ. 14 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ, ನಿಬಂಧನೆಗಳು/ ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಯವರ ಕಚೇರಿ ಅಥವಾ ಆಯಾಯ ತಾಲ್ಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು.