(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 13. ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಯೋಧನನ್ನು ರಕ್ಷಣೆ ಮಾಡಿದ 6 ವರ್ಷದ ಸೇನಾ ಶ್ವಾನ ಕೆಂಟ್, ಉಗ್ರರ ಗುಂಡೇಟಿಗೆ ಸಾವನ್ನಪ್ಪಿದ ಘಟನೆ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಬುಧವಾರದಂದು ನಡೆದಿದೆ.
ರಜೌರಿಯ ನರ್ಲಾ ಗ್ರಾಮದಲ್ಲಿ ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ವೇಳೆ ಸೇನಾ ತುಕ್ಕಡಿಯೊಂದನ್ನು ಮುನ್ನಡೆಸುತ್ತಿದ್ದ ಕೆಂಟ್, ಉಗ್ರರ ಗುಂಡೇಟಿಗೆ ಬಲಿಯಾಗಿದೆ ಎನ್ನಲಾಗಿದೆ. ಕೆಂಟ್ ಎಂಬ ಲ್ಯಾಬ್ರಡಾರ್ ತಳಿಯ ಹೆಣ್ಣು ನಾಯಿಯೊಂದು 21ನೇ ಸೇನಾ ಶ್ವಾನ ಘಟಕದಲ್ಲಿ ಸೇವೆ ಸಲ್ಲಿಸುತ್ತಿತ್ತು. ‘ಕೆಂಟ್’ ಭಯೋತ್ಪಾದಕರ ಜಾಡು ಹಿಡಿದು ಸೈನಿಕರ ತುಕ್ಕಡಿಯನ್ನು ಮುನ್ನಡೆಸುತ್ತಿದ್ದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ತನ್ನ ನಿರ್ವಾಹಕನ ಪ್ರಾಣವನ್ನು ಉಳಿಸಿ, ಕೆಂಟ್ ತನ್ನ ಉಸಿರು ಚೆಲ್ಲಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಶಂಕಿತ ಭಯೋತ್ಪಾದಕ ಮೃತಪಟ್ಟು, ಭಾರತೀಯ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಅಲ್ಲದೇ ಮೂವರು ಭದ್ರತಾ ಸಿಬ್ಬಂದಿಗಳು ಕೂಡಾ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.