ಎಂಡೋಸಲ್ಪಾನ್ ಸಂತ್ರಸ್ತೆಯ ಅತ್ಯಾಚಾರ ಪ್ರಕರಣ – ಆರೋಪಿಗೆ 10 ವರ್ಷ ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 12. ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿಯನ್ನು ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33 ) ಎಂದು ಗುರುತಿಸಲಾಗಿದೆ. ರಾಜೇಶ್ 2015ರ ಅ. 01ರಂದು ತನ್ನದೇ ಊರಿನ 19ರ ಹರೆಯದ ಎಂಡೋಸಲ್ಫಾನ್ ಪೀಡಿತೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭ ಅತ್ಯಾಚಾರವೆಸಗಿದ್ದರೆಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಂದಿನ ಎಸ್.ಐ. ಆಗಿದ್ದ ಪ್ರಕಾಶ್ ದೇವಾಡಿಗರವರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ತನಿಖೆ ನಡೆಸಿದ ಅಂದಿನ ಎಎಸ್ಪಿ ರಾಹುಲ್ ಕುಮಾರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆಯಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಆರೋಪಿಯ ವಿರುದ್ಧ 27 ಸಾಕ್ಷಿದಾರರನ್ನು ಉಲ್ಲೇಖಿಸಿ, ಅದರಲ್ಲಿ 14 ಸಾಕ್ಷಿದಾರರ ವಿಚಾರಣೆ ನಡೆದಿತ್ತು. ಸೆ. 07ರಂದು ನ್ಯಾಯಾಧೀಶರು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಕಲಂ 376(2)(ಎಲ್) ಅಡಿಯಲ್ಲಿ 10 ವರ್ಷದ ಕಠಿಣ ಸಜೆ ಹಾಗೂ 10,000 ರೂ. ದಂಡ, ಕಲಂ 448ರಡಿ 3 ತಿಂಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು.

Also Read  ಸ್ಕೂಟರ್ ಗೆ ಕಂಟೈನರ್ ಢಿಕ್ಕಿ- ಸಹಸವಾರೆ ಮೃತ್ಯು..!

error: Content is protected !!
Scroll to Top