(ನ್ಯೂಸ್ ಕಡಬ) newskadaba.com ಮಂಗಳೂರು, ಆ. 28. ಸರ್ವ ಜನಾಂಗದ ಶಾಂತಿಯ ತೋಟವಾದ ರಾಜ್ಯದಲ್ಲಿ ಬಡವರು, ದುರ್ಬಲರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನತೆಯ ಶ್ರೇಯೋಭಿವೃದ್ದಿಯ ಉದ್ದೇಶದಿಂದ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಆಗಸ್ಟ್ 28ಕ್ಕೆ 100 ದಿನ ಪೂರೈಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ನಾಗರೀಕರಿಗೆ ನೀಡಿದ ಭರವಸೆಯಂತೆ, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ, ಜನ ಸಾಮಾನ್ಯರ ಮೊಗದಲ್ಲಿ ನೆಮ್ಮದಿ ಹಾಗೂ ಸಂತಸ ಮೂಡುವಂತೆ ಮಾಡಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ-20 ರಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನೂತನ ಸಚಿವರೊಂದಿಗೆ ನಡೆದ ಪ್ರಪ್ರಥಮ ಸಚಿವ ಸಂಪುಟದ ಸಭೆಯಲ್ಲಿ, ಚುನಾವಣಾ ಪೂರ್ವದಲ್ಲಿ ಪ್ರಕಟಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಕ್ಷರಶಃ ಜಾರಿಗೆ ತರುವ ಬಗ್ಗೆ ನಿರ್ಧಾರ ಕೈಗೊಂಡು, ತಾತ್ವಿಕ ಅನುಮೋದನೆಯನ್ನು ನೀಡುವ ಮೂಲಕ, ರಾಜ್ಯದ ಜನತೆಗೆ ನೀಡಿದ್ದ ಕೊಟ್ಟ ಮಾತನ್ನು ಈಡೇರಿಸಲು ತೀರ್ಮಾನಿಸಲಾಯಿತು.
ರಾಜ್ಯದ ಎಲ್ಲಾ ಸರ್ಕಾರಿ ಸ್ವಾಮ್ಯದ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ, ರಾಜ್ಯದ ಪ್ರತಿ ಮನೆಗೆ ಗೃಹ ಬಳಕೆಯ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆ, ಪ್ರತಿ ಮನೆಯ ಒಡತಿಗೆ ತಿಂಗಳಿಗೆ ರೂ. 2,000 ನೆರವು ನೀಡುವ ಗೃಹಲಕ್ಷ್ಮೀ ಯೋಜನೆ, ಆದ್ಯತಾ ಮತ್ತು ಅಂತ್ಯೋದಯ ಕುಟುಂಬಗಳ ಪ್ರತೀ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ, ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ. 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ರೂ.1,500 ನೀಡುವ ಯುವನಿಧಿ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ಜಾರಿಗೆ ತರಲು ನಿರ್ಧರಿಸಿದ್ದು, ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳು ನಾಗರೀಕರಿಗೆ ತಲುಪುವ ಮೂಲಕ ಅವರ ಮೊಗದಲ್ಲಿ ಸಂತಸ ಮೂಡಿಸಿದ್ದು, ಸರ್ಕಾರದ ಅತ್ಯಂತ ಮಹಾತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮೀ ಇದೇ 30 ರಂದು ಮಹಿಳೆಯರಿಗೆ ತಲುಪಲಿದೆ. ಯುವನಿಧಿ ಯೋಜನೆ ಡಿಸೆಂಬರ್ ಅಂತ್ಯಕ್ಕೆ ಜಾರಿಗೆ ಬರಲಿದೆ.
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಅಂದಾಜು 1.30 ಕೋಟಿ ಕುಟುಂಬಗಳಿಗೆ ಮಾಸಿಕ 4,000 ದಿಂದ 5,000 ಗಳಷ್ಟು ಹಾಗೂ ವಾರ್ಷಿಕ 48,000 ದಿಂದ 60,000 ಗಳಷ್ಟು ಹೆಚ್ಚುವರಿ ಅರ್ಥಿಕ ನೆರವು ನೀಡುವ ಮೂಲಕ, ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯನ್ನು ಜಾರಿಗೊಳಿಸಿ, ಅಭಿವೃಧ್ದಿಯ ಹೊಸ ಮಾದರಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಲಕ್ಷಾಂತರಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದ್ದು, ಜಿಲ್ಲಾಡಳಿತದ ಮೂಲಕ ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳ ಪ್ರಯೋಜನವನ್ನು ತಲುಪಿಸಲು ಅವಿರತವಾಗಿ ಶ್ರಮಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಜೂನ್ 11 ರಂದು ಜಾರಿಯಾಗಿದ್ದು, ಅಂದಿನಿಂದ ಒಟ್ಟು 1,02,83,000 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ರೂ. 34,06,52,000 ಮೌಲ್ಯದ ಶೂನ್ಯ ಟಿಕೆಟ್ ಗಳನ್ನು ವಿತರಿಸಲಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು, ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಸಹ ಅತಿ ಹೆಚ್ಚಿನ ಆದಾಯ ಬರುತ್ತಿದೆ. ಹಣ ಇಲ್ಲದೆ ಪರದಾಡುವ ಮಧ್ಯಮ ವರ್ಗದ ಜನರಿಗೆ ಈ ಯೋಜನೆ ಉಪಯುಕ್ತವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಸಂತೋಷವಾಯಿತು–ಮೇರಿ ಗಾಂಧಿಬೈಲು ಉಜಿರೆ ಅವರ ಅಭಿಪ್ರಾಯ.
ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಬೃಹತ್ ಯೋಜನೆಯಾದ, ಪ್ರತೀ ಕುಟುಂಬದ ಮನೆಯ ಯಜಮಾನಿಗೆ ಪ್ರತೀ ತಿಂಗಳು ರೂ. 2000 ನೀಡುವ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯ ಅರ್ಹ 3,99,022 ಕುಟುಂಬಗಳ ಪೈಕಿ ಇದುವರೆಗೆ 3,05,358 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಯೋಜನೆಯ ಫಲಾನುಭವಿಗಳಿಗೆ ಖಾತೆಗೆ ಡಿಬಿಟಿ ಮೂಲಕ ಹಣ ಪಾವತಿಯಾಗಲಿದೆ. ಬೆಲೆಯೇರಿಕೆಯ ಇಂದಿನ ದಿನಗಳಲ್ಲಿ ಕುಟುಂಬವನ್ನು ನಿಭಾಯಿಸುವುದು ಮಹಿಳೆಯರಿಗೆ ಅತ್ಯಂತ ಸವಾಲಿನ ಸಂಗತಿ. ಈ ಸಮಯದಲ್ಲಿ ಗೃಹಲಕ್ಷ್ಮೀ ಮೂಲಕ ಮನೆ ಯಜಮಾನಿಗೆ 2000 ರೂ ನೀಡುವುದು ಅತ್ಯಂತ ಹೆಚ್ಚು ಪ್ರಯೋಜನವಾಗಲಿದೆ. ಅಲ್ಲದೇ ಅನೇಕ ಮನೆಗಳಲ್ಲಿ ದುಡಿಯಲು ಶಕ್ತಿಯಿಲ್ಲದ, ಅನಾರೋಗ್ಯ ಪೀಡಿತ ಹಿರಿಯ ಮಹಿಳಾ ಜೀವಗಳಿಗೆ ಸಹ ಯೋಜನೆ ನೆರವಾಗಲಿದೆ: ಪ್ರೇಮಲತಾ, ಶಕ್ತಿನಗರ. ಯೋಜನೆಗೆ ನೋಂದಾಯಿಸಿರುವ ಮಹಿಳೆ.
ರಾಜ್ಯದ ಪ್ರತೀ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಅರ್ಹ 5.59 ಲಕ್ಷ ವಿದ್ಯುತ್ ಬಳಕೆಗೆ ಗ್ರಾಹಕರಲ್ಲಿ ಇದುವರೆಗೆ 3.53 ಲಕ್ಷ ಗ್ರಾಹಕರಿಗೆ ಸಹಾಯಧನ ಬಿಲ್ಲನನ್ನು ವಿತರಿಸುವ ಮೂಲಕ ಅಂದಾಜು 21.61 ಕೋಟಿ ರೂ.ಗಳ ಮೊತ್ತದ ಬಿಲ್ಲಿನ ವಿನಾಯಿತಿ ನೀಡಲಾಗಿದೆ. ಯೋಜನೆಯ ನೋಂದಣಿಗೆ ಅಂತಿಮ ದಿನಾಂಕ ಇರುವುದಿಲ್ಲ. ನನ್ನ ಮನೆಗೆ ಪ್ರತೀ ತಿಂಗಳು 800 ರಂದ 900 ರೂ ವಿದ್ಯುತ್ ಬಿಲ್ ಬರುತಿತ್ತು, ಪ್ರಸ್ತುತ ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿದ ನಂತರ ಈ ತಿಂಗಳಲ್ಲಿ ಶೂನ್ಯ ವಿದ್ಯುತ್ ಬಿಲ್ ಬಂದಿದೆ. ಖಾಸಗಿ ಸಂಸ್ಥೆಯಲ್ಲಿ ಕಡಿಮೆ ವೇತನಕ್ಕೆ ದುಡಿಯುವ ನಮಗೆ, ವಿದ್ಯುತ್ ಬಿಲ್‍ನ ಈ ಉಳಿತಾಯದ ಮೊತ್ತ ಹೆಚ್ಚುವರಿ ಬೋನಸ್ ರೂಪದಲ್ಲಿ ದೊರೆತಂತಾಗಿದೆ: ವಿಜಯ ದೀಪ, ಜಪ್ಪಿನಮೊಗರು ನಿವಾಸಿ. ಗೃಹಜ್ಯೋತಿ ಯೋಜನೆಯ ಫಲಾನುಭವಿ.
ಅನ್ನ ಭಾಗ್ಯ ಯೋಜನೆಯು ಸರ್ಕಾರ ಬಹು ಮುಖ್ಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಅಂತ್ಯೋದಯ 15,520 ಹಾಗೂ 1,97,200 ಆದ್ಯತಾ ಪಡಿತರ ಚೀಟಿಯ ಸದಸ್ಯರಿಗೆ, ಪ್ರತಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆಜಿಯಂತೆ ಅಕ್ಕಿ ವಿತರಿಸಲು ಆಹಾರಧಾನ್ಯ ಬದಲು ನೇರ ನಗದು ವರ್ಗಾವಣೆಯಡಿ 30.03 ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಪಾವತಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ, ಎಷ್ಟೇ ಟೀಕೆಗಳು ಎದುರಾದರೂ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡು, ನುಡಿದಂತೆ ನಡೆವ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಆರ್ಥಿಕ ಪ್ರಗತಿಯ ಫಲಗಳು ದೊರೆತು, ಅವರು ಅಭಿವೃದ್ದಿಯ ಪಾಲುದಾರರಾಗಬೇಕು ಎಂಬ ಆಶಯದಲ್ಲಿ ಕಾರ್ಯನಿರ್ವಹಿಸುತ್ತಿದೆ.