(ನ್ಯೂಸ್ ಕಡಬ) newskadaba.com ಕಡಬ, ಆ. 27. ಪಣಂಬೂರು ಘಟಕದ ವತಿಯಿಂದ ಶ್ರೀ ನಂದನೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವು ಭಾನುವಾರದಂದು ಜರುಗಿತು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಿರಂತರವಾಗಿ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಕಾಡು ಬರಿದಾಗಿ, ಕಾಂಕ್ರೀಟ್ ಕಾಡು ದಿನೇದಿನೇ ಬೆಳೆಯುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಂಡು ಗಿಡ ನೆಟ್ಟು ಪೋಷಿಸಿ, ಕಾಡು ಉಳಿಸಬೇಕು. ಪರಿಸರದ ಅಸಮತೋಲನವಾಗದಂತೆ ನೋಡಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಈ ವರ್ಷದಲ್ಲಿ ಸುಮಾರು 1000 ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗಿಡ ನೆಟ್ಟು ಹಸಿರು ಬೆಳೆಸಿದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿಗಳನ್ನು ನೆಡುವ ಕಾರ್ಯ ಯೋಜನೆ ಸಿದ್ದಪಡಿಸಲಾಗಿದೆ ಎಂದು ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು. ದೇವಸ್ಥಾನದ ಆವರಣದಲ್ಲಿ ಬಿಲ್ವ ಪತ್ರೆ, ಮಾವು, ನೇರಳೆ, ಪೇರಳೆ, ಹಲಸು, ಹೆಬ್ಬಲಸು ಮುಂತಾದ ಗಿಡಗಳನ್ನು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ದೇವಳದ ಭಕ್ತಿ ಶ್ರೀ ಗಣಪತಿ ಐತಾಳ, ಮಾಜಿ ಘಟಕಾಧಿಕಾರಿ ಶ್ರೀ ಹರೀಶ್ ಆಚಾರ್ಯ,ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ್, ಹಿರಿಯ ಗ್ರಹ ರಕ್ಷಕರಾದ ಶ್ರೀ ಜಗದೀಶ್, ಶ್ರೀ ಗಂಗಾಧರ ಮತ್ತು ಪಣಂಬೂರು ಘಟಕದ ಎಲ್ಲಾ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.