(ನ್ಯೂಸ್ ಕಡಬ) newskadaba.com ಮುಲ್ಕಿ, ಆ. 25. ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರಂಟ್ ಆದೇಶದಂತೆ ಬಂಧಿಸಲು ಹೋದ ಸಂದರ್ಭ ಆರೋಪಿಯೋರ್ವ ಕೀಟನಾಶಕ ಸೇವಿಸಿದ್ದು, ಪೊಲೀಸರು ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅಸ್ವಸ್ಥನಾದ ಘಟನೆ ಮುಲ್ಕಿಯಲ್ಲಿ ನಡೆದಿದೆ.
ಆರೋಪಿ ಕರುಣಾಕರ್ ಎಂಬಾತ ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಅಪರಾಧ ಪ್ರಕರಣದ ಆರೋಪಿಯಾಗಿದ್ದು, ಈತನ ಮೇಲೆ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಲಯ ಆದೇಶಿಸಿತ್ತು.
ಕರುಣಾಕರ ಶೆಟ್ಟಿ ಉಡುಪಿಯ ಶಿವಳ್ಳಿಯ ಬಾರ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಖಚಿತ ಮಾಹಿತಿಯ ಮೇರೆಗೆ ಬಜಪೆ ಠಾಣಾ ಉಪನಿರೀಕ್ಷಕ ಮತ್ತು ಸಿಬ್ಬಂದಿಗಳು ಗುರುವಾರದಂದು ಸಂಜೆ ವಾರಂಟ್ ಆದೇಶದ ಪ್ರಕಾರ ಆರೋಪಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಆರೋಪಿ ಕೆಲಸ ಮಾಡಿಕೊಂಡಿದ್ದ ಬಾರ್ ಗೆ ಬಂದಿದ್ದರು. ಈ ವೇಳೆ ಆರೋಪಿ ತಾನು ಬಟ್ಟೆ ಹಾಕಿಕೊಂಡು ಬರುವುದಾಗಿ ಬಾರ್‌ನ ಮೇಲೆ ಇರುವ ರೂಮಿನೊಳಗೆ ಹೋಗಿದ್ದು, ಯಾವುದೋ ಕೀಟನಾಶಕ ಸೇವನೆ ಮಾಡಿದ್ದನು. ಬಳಿಕ ಬಂದು ಪೊಲೀಸ್ ವಾಹನದಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅಸ್ವಸ್ಥಗೊಂಡ ಆರೋಪಿಯನ್ನು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.