(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.06. ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆ ಮಾಡಲಾಗಿದ್ದ ಕಾಮಗಾರಿಯ ಬಿಲ್ ಪಾಸ್ಮಾಡಲು ಕೊಕ್ಕಡ ಗ್ರಾ.ಪಂ ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಇವರು ಗುತ್ತಿಗೆದಾರ ಉಮ್ಮರ್ ಮಲ್ಲಿಗೆಮಜಲು ಎಂಬವರಿಂದ 50,000ರೂ. ಲಂಚದ ಬೇಡಿಕೆ ಇಟ್ಟಿದ್ದಾಗಿ ಗ್ರಾ.ಪಂ. ಅಧ್ಯಕ್ಷರ ಮೇಲೆ ಗುತ್ತಿಗೆದಾರ ಎಸಿಬಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ 35 ಸಾವಿರವನ್ನು ಸದ್ರಿ ಗುತ್ತಿಗೆದಾರರಿಂದ ಕೊಕ್ಕಡ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಪುರುಷೋತ್ತಮ ಜಿ. ಇವರು ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೋಲೀಸರು ದಾಳಿ ನಡೆಸಿ ಗ್ರಾ.ಪಂ. ಅಧ್ಯಕ್ಷ ಮತ್ತು ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರನ್ನು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರದಂದು ನಡೆದಿದೆ.
ಕಾಮಗಾರಿಯ ಬಿಲ್ ಪಾಸ್ ಮಾಡಲು ಗ್ರಾ.ಪಂ. ಅಧ್ಯಕ್ಷರು 50 ಸಾವಿರ ಲಂಚ ಬೇಡಿಕೆಯನ್ನು ನೀಡಿದ್ದಾರೆಂದು ಗುತ್ತಿಗೆದಾರ ಉಮ್ಮರ್
ಮಲ್ಲಿಗೆಮಜಲು ಎಂಬವರು ಎಸಿಬಿಗೆ ದೂರು ನೀಡಿದ್ದರು. ಗುತ್ತಿಗೆದಾರ ಹಣವನ್ನು ನೀಡುತ್ತಿರುವ ಸಮಯದಲ್ಲೇ ಎಸಿಬಿ ತಂಡ ದಿಢೀರ್ ದಾಳಿ ನಡೆಸಿ ಅಧಿಕಾರಿ ಪಡೆದ ಹಣವನ್ನು ಪಂಚನಾಮೆ ಸಮೇತ ವಶಪಡಿಸಿಕೊಂಡಿದ್ದಲ್ಲದೇ ಕೊಕ್ಕಡ ಗ್ರಾ.ಪಂ. ನಲ್ಲಿ ಮಾಡಲಾದ ಕಾಮಗಾರಿಗಳಿಗೆ ಸಂಬಂದಿಸಿದ ದಾಖಲೆಗಳನ್ನು ಪರಿಶೀಲಿಸಿದೆ. ದ.ಕ. ಜಿಲ್ಲಾ ಎಸಿಬಿ ಎಸ್ಪಿ ಶ್ರುತಿ ಇವರ ನೇತೃತ್ವದಲ್ಲಿ ದ.ಕ. ಜಿಲ್ಲಾ ಡಿವೈಎಸ್ಪಿ ಸುಧೀರ್ ಹೆಗ್ಡೆ, ಉಡುಪಿ ಜಿಲ್ಲಾ ಎಸಿಬಿ ಡಿವೈಎಸ್ಪಿ ದಿನಕರ ಶೆಟ್ಟಿ, ಎಸಿಬಿ ನಿರೀಕ್ಷಕ ಯೋಗೀಶ್ ಕುಮಾರ್, ಹೆಡ್ ಕಾನ್ಸ್ಟೇಬಲ್ಗಳಾದ ಹರಿಪ್ರಸಾದ್, ಉಮೇಶ್, ರಾಧಾಕೃಷ್ಣ ಕೆ.ಜೆ., ಪೋಲೀಸ್ ಸಿಬ್ಬಂದಿಗಳಾದ ರಾಧಾಕೃಷ್ಣ ಡಿ.ಎ., ಪ್ರಶಾಂತ್, ವೈಶಾಲಿ, ರಾಜೇಶ್, ಗಣೇಶ್, ರಾಖೇಶ್, ರವೀಂದ್ರ, ಸುರೇಶ್ ನಾಯ್ಕ, ಪಾವನಾಂಗಿ, ಧರ್ಮಸ್ಥಳ ಪೋಲೀಸ್ ಠಾಣಾ ಸಿಬ್ಬಂದಿಗಳಾದ ವೀರ ನಾಯ್ಕ್ , ಸುಧಾಕರ್ ರವರ ತಂಡ ಈ ದಾಳಿಯನ್ನು ನಡೆಸಿದೆ. ಆರೋಪಿತರಿಬ್ಬರನ್ನು ಎಸಿಬಿ ಪೋಲೀಸರು ಬಂದಿಸಿದ್ದು ಮಂಗಳೂರು ಕೋಟರ್ಿಗೆ ಹಾಜರು ಪಡಿಸಿದ್ದಾರೆ.
ಈ ದಾಳಿಯ ಘಟನೆಯ ಬಗ್ಗೆ ಎಸಿಬಿ ಎಸ್ಪಿಯವರು ಮಾಧ್ಯಮದೊಂದಿಗೆ ಮಾತನಾಡಿ, ದೂರುದಾರ ಗುತ್ತಿಗೆದಾರರ ದೂರಿನಲ್ಲಿ ಕೊಕ್ಕಡ ಗ್ರಾ.ಪಂ. ಅಧ್ಯಕ್ಷರ ಮೇಲೆಯೇ ಲಂಚ ಬೇಡಿಕೆಯ ಗುರುತರ ಆರೋಪ ಮಾಡಲಾಗಿದ್ದರೂ ಈ ಘಟನೆಯಲ್ಲಿ ಹಣವನ್ನು ಸ್ವೀಕರಿಸಿರುವುದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ. ಆದುದರಿಂದ ದೂರಿನನ್ವಯ ಲಂಚ ಬೇಡಿಕೆಯಿಟ್ಟ ಒಂದನೇ ಆರೋಪಿಯಾಗಿ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಮತ್ತು ಲಂಚದ ಹಣವನ್ನು ಗುತ್ತಿಗೆದಾರರಿಂದ ಸ್ವೀಕರಿಸಿದ ಕಾರಣಕ್ಕಾಗಿ ಎರಡನೇ ಆರೋಪಿಯಾಗಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಪುರುಷೋತ್ತಮ ಜಿ. ಇವರ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದೆ. ಮತ್ತು ಗ್ರಾ.ಪಂ. ನಲ್ಲಿ ಈ ವರೆಗೆ ನಡೆದಿದೆ ಎನ್ನಲಾದ ಕಾಮಗಾರಿಗಳ ಕುರಿತಾಗಿ ದಾಖಲೆ ಪತ್ರಗಳು, ಕಡತಗಳು ಸರಿಯಾಗಿವೆಯೇ ಅನ್ನುವ ಕುರಿತೂ ಮಾಹಿತಿಗಳನ್ನು ಕಲೆಹಾಕಿದ್ದು ಈ ಕೇಸಿನ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದಿದ್ದಾರೆ.
ಸದ್ರಿ ಗುತ್ತಿಗೆದಾರ ಉಮ್ಮರ್ ಮಲ್ಲಿಗೆ ಮಜಲು ಎಂಬಾತ ಕೊಕ್ಕಡ ಗ್ರಾ.ಪಂ. ನ ಕಾಮಗಾರಿಗಳನ್ನು ಈ ಹಿಂದೆ ವಹಿಸಿಕೊಂಡಿದ್ದಲ್ಲದೇ, ಈ ಕಾಮಗಾರಿಗಳಿಗಾಗಿ ಬೇಕಾದ ಸಾಮಾಗ್ರಿಗಳನ್ನು ನನ್ನ ಸಂಬಂದಿಕರ ಮತ್ತು ಸ್ಥಳೀಯ ಕೆಲ ಅಂಗಡಿಗಳಿಂದ ತನ್ನ ಶಿಫಾರಸ್ಸಿನ ಮೂಲಕ ಪಡೆದಿದ್ದು ಈ ಅಂಗಡಿಗಳಿಗೆ ಲಕ್ಷಾಂತರ ಹಣ ಪಾವತಿ ಮಾಡಲು ಬಾಕಿ ಇರುತ್ತದೆ. ವರ್ಷದ ಹಿಂದಿನ ಕಾಮಗಾರಿಗಳ ಬಿಲ್ ಗಳನ್ನು ಇದೇ ಗುತ್ತಿಗೆದಾರ ಗ್ರಾ.ಪಂ.ನಿಂದ ಪಡಕೊಂಡಿದ್ದರೂ ಸದ್ರಿ ಅಂಗಡಿಗಳಿಗೆ ಸಾಲವನ್ನು ಮರುಪಾವತಿಸದೇ ಇರುವ ಕಾರಣ ಹಿಂದಿನ ಅವಧಿಯ ಅಂಗಡಿಗಳ ಸಾಲವನ್ನು ಮೊದಲು ಚುಕ್ತಾ ಮಾಡಬೇಕು ಎಂದು ತಾನು ಈ ದೂರುದಾರ ಗುತ್ತಿಗೆದಾರರಲ್ಲಿ ಹೇಳಿದ್ದೆ. ನನ್ನ ಮೂಲಕ ಅಂಗಡಿಗಳಿಂದ ಪಡೆದ ಲಕ್ಷಾಂತರ ಹಣದ ಮೊತ್ತದಲ್ಲಿ 35 ಸಾವಿರವನ್ನು ಇಂದು ನೀಡುತ್ತೇನೆ. ನನ್ನ ಈಗಿನ ಬಿಲ್ ನ್ನು ಪಾಸ್ ಮಾಡಿ ಕೊಡಿ. ಆ ಬಿಲ್ ನ ಹಣದಲ್ಲಿ ಉಳಿದ ಸಾಲವನ್ನು ಸಂದಾಯಮಾಡುತ್ತೇನೆ ಎಂದು ನನ್ನನ್ನು ನಂಬಿಸಿದ್ದಲ್ಲದೇ, ಇತ್ತ ಅಂಗಡಿಗಳಿಂದ ನನ್ನ ಶಿಫಾರಸ್ಸಿನ ಮೇಲೆ ಪಡೆದ ಅಷ್ಟೂ ಹಣವನ್ನು ಕೊಡದೇ ವಂಚಿಸುವುದಕ್ಕಾಗಿ ನನ್ನನ್ನೆ ಬಳಸಿಕೊಂಡು ಲಂಚದ ಆಮಿಷವೊಡ್ಡಿರುವ ದೂರನ್ನು ನೀಡುವ ನಾಟಕವನ್ನು ಈ ಗುತ್ತಿಗೆದಾರ ಮಾಡಿರುವುದಾಗಿದೆ. ನನ್ನ ಶಿಫಾರಸ್ಸಿನ ಮೂಲಕ ಈ ಗುತ್ತಿಗೆದಾರ ಅಂಗಡಿಗಳಿಂದ ಪಡಕೊಂಡ ಲಕ್ಷಾಂತರ ಸಾಲ ಇನ್ನೂ ಬಾಕಿಯುಳಿದಿದ್ದು ಅಧಿಕಾರಿಗಳಿಗೆ ಈ ವಿಷಯವನ್ನು ತನಿಖೆಯ ವೇಳೆ ತಿಳಿಸಿರುತ್ತೇನೆ. ಲಂಚ ಬೇಡಿಕೆ ಅನ್ನುವ ಪ್ರಹಸನವನ್ನು ನನ್ನ ರಾಜಕೀಯ ತೇಜೋವಧೆಯನ್ನು ಮಾಡುವ ಉದ್ದೇಶಕ್ಕಾಗಿ ಇಲ್ಲಿ ಸ್ಥಾಪಿತ ಹಿತಾಸಕ್ತಿಗಳ ಸಂಚಿನೊಂದಿಗೆ ಹೆಣೆದಿದ್ದಾಗಿದ್ದು ಈ ಕುರಿತಂತೆ ಮಾನ್ಯ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಬ್ಬರ ಜಗಳದಲ್ಲಿ ನಡುವೆ ಸಿಲುಕಿದ ಪಿಡಿಒ; ಕೊಕ್ಕಡ ಗ್ರಾ.ಪಂ. ನ ಕಾಮಗಾರಿಯ ಬಿಲ್ ಪಾವತಿಯ ಬಗ್ಗೆ ಮತ್ತು ಗುತ್ತಿಗೆದಾರ ಅಂಗಡಿಗಳಿಗೆ ಬಿಲ್ ಪಾವತಿಸದೇ ಇರುವ ಬಗ್ಗೆ ಕಳೆದ ಹಲವು ತಿಂಗಳ ಹಿಂದೆಯೇ ಗ್ರಾ.ಪಂ. ಅಧ್ಯಕ್ಷರು ಮತ್ತು ಸದ್ರಿ ಗುತ್ತಿಗೆದಾರರೊಳಗೆ ವಾದ ವಿವಾದ ತಾರಕಕ್ಕೇರಿದ್ದು ಸಾರ್ವಜನಿಕವಾಗಿ ಈ ವಿಷಯ ಚಚರ್ೆಯೂ ನಡೆಯುತ್ತಿತ್ತು. ಕಾಮಗಾರಿಗಾಗಿ ಪಡೆದ ಸಾಮಾಗ್ರಿಗಳ ಹಣವನ್ನು ಅಂಗಡಿಗಳಿಗೆ ಪಾವತಿಸುವ ವಿಚಾರದಲ್ಲಿ ಗುತ್ತಿಗೆದಾರ ಮತ್ತು ಅಧ್ಯಕ್ಷರೊಳಗಿನ ವಿವಾದವು ಇಂದು ಬೇರೆಯೇ ರೂಪ ತಾಳಿದ್ದಲ್ಲದೇ ಈ ವಿವಾದದಲ್ಲಿ ಸಂಬಂದವೇ ಪಡದ ಪಿಡಿಒ ಮಾತ್ರ ಅಮಾಯಕರಾಗಿ ಸಿಲುಕಿಕೊಳ್ಳುವಂತಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪ್ರಸಕ್ತ ಪಿಡಿಒ ಕೊಕ್ಕಡ ಗ್ರಾ.ಪಂ. ನಲ್ಲಿ ಅಧಿಕಾರ ಸ್ವೀಕರಿಸಿ ಕೆಲವೇ ಸಮಯದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಸಾರ್ವಜನಿಕವಾಗಿ ನಡೆಯುವಂತಾಗಿದ್ದರೂ ಈ ವಿವಾದದಲ್ಲಿ ಸಿಲುಕಿ ಕೊಕ್ಕಡ ಗ್ರಾ.ಪಂ. ನ ಮುಂದಿನ ಅಭಿವೃದ್ದಿ ಕಾರ್ಯಗಳು ಕುಂಟಿತವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.