ಡಿಸಿ ಮನ್ನಾ ಸ್ಥಳಗಳ ಪಟ್ಟಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 22. ನಿವೇಶನ ಹಾಗೂ ಕೃಷಿಗಾಗಿ ಅರ್ಹರಿಗೆ ಡಿಸಿ ಮನ್ನಾ ಜಮೀನು ನೀಡಲು ಜಿಲ್ಲೆಯ ಬೆಳ್ತಂಗಡಿ, ಮೂಡುಬಿದಿರೆ ಹಾಗೂ ಮಂಗಳೂರು ತಾಲೂಕಿನಲ್ಲಿ ಡಿಸಿ ಮನ್ನಾ ಜಮೀನು ಎಂದು ಘೋಷಿಸಲಾಗಿರುವ ಸ್ಥಳಗಳ ಪಟ್ಟಿಯನ್ನು ಒದಗಿಸುವಂತೆ ಸಂಬಂಧಿಸಿದ ತಾಲೂಕುಗಳ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನಿರ್ದೇಶನ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಡಿಸಿ ಮನ್ನಾ ಜಮೀನಿಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಜಮೀನುಗಳು ಯಾವುದು, ಅದು ಎಷ್ಟಿದೆ, ಎಂಬ ಮಾಹಿತಿಯಲ್ಲಿ ವ್ಯತ್ಯಾಸಗಳು ಕಂಡುಬಂದಿರುವುದರಿಂದ ಹಾಗೂ ಸಭೆಯಲ್ಲಿ ಸಮುದಾಯದ ಮುಖಂಡರು ಡಿಸಿ ಮನ್ನಾ ಜಮೀನು ಇನ್ನೂ ಹೆಚ್ಚು ಇದೆ ಎಂಬ ಅಂಶಗಳನ್ನು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಒಟ್ಟಾರೆಯಾಗಿ ಅಡಂಗಲ್ ಒಳಗೊಂಡಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಡಿಸಿ ಮನ್ನಾ ಜಮೀನು ಎಷ್ಟಿದೆ ಎಂಬುದನ್ನು ಒಂದರಿಂದ ಒಂದೂವರೆ ತಿಂಗಳಲ್ಲಿ ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದ ಅವರು, ವರದಿ ಬಂದ ನಂತರ ಅದನ್ನು ಪ್ರಕಟಿಸಿ, ಸಾರ್ವಜನಿಕರಿಂದಲೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು ಎಂದರು.

Also Read  ಪವರ್ ಸ್ಟಾರ್ ನಿಧನದ ಹಿನ್ನೆಲೆ ➤ ನಾಳೆ (ಅ. 30) ಖಾಸಗಿ ಶಾಲೆಗಳಿಗೆ ರಜೆ ಘೋಷಣೆ

ಡಿಸಿ ಮನ್ನಾ ಜಮೀನನ್ನು ಯಾವ ರೀತಿ ವಿತರಣೆ ಮಾಡಬೇಕೆಂದು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿರುವ ಕರಡು ಪ್ರತಿ ಹಾಗೂ ಅದರಿಂದ ಪ್ರಾಕ್ಟಿಕಲ್ ಆಗಿ ಎದುರಾಗಬಹುದಾದ ಸಮಸ್ಯೆಗಳು ಯಾವುವು ಎಂಬುದನ್ನು ಪರಿಶೀಲಿಸಲಾಗುವುದು, ನಂತರದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡದಂತೆ ಡಿಸಿ ಮನ್ನಾ ಜಮೀನನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರು 94-ಸಿ, 94-ಸಿಸಿಯಡಿ ಬರುವ ಅರ್ಜಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಡಿಸಿ ಮನ್ನಾ ಜಮೀನಿಗೆ ಸಂಬಂಧಪಡುವ ಪ್ರಕರಣವೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಲತಿ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರರು, ದಕ್ಷಿಣ ಕನ್ನಡ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕರಾದ ದೇವದಾಸ್, ಉಪ ಸಂಚಾಲಕ ರಮೇಶ್ ಕೋಟ್ಯಾನ್, ಅಶೋಕ್, ಸಂಚಾಲಕರಾದ ರಘು, ಚಂದ್ರು, ಶೇಖರ್, ಬಿ.ಕೆ. ವಸಂತ, ಆನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Also Read  ಕೊರಗಜ್ಜ ಹಿಂದೂ ಅಲ್ಲ ➤‌ ಕೊರಗಜ್ಜನಿಗೆ ನಟ ಚೇತನ್ ಅವಮಾನ

error: Content is protected !!
Scroll to Top