ಈ ಸಾವುಗಳಿಗೆ ಕೊನೆಯಿಲ್ಲವೇ…? ✍🏻 ಡಾ.‌ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಆ. 22. ಆಕೆಯ ಹೆಸರು ರೂಪಾ (ಹೆಸರು ಬದಲಾಯಿಸಲಾಗಿದೆ). ಆಕೆ 11ನೇ ತರಗತಿ ವಿದ್ಯಾರ್ಥಿನಿ. ಆಕೆಯು ತಾನೊಂದು ‘ಮ್ಯಾರಥಾನ್’ ರೇಸಿನಲ್ಲಿ ಇದ್ದೇನೆ ಎಂಬಂತೆ ಜೀವನವನ್ನು ಎದುರಿಸುತ್ತಿದ್ದಾಕೆ. ಆದರೆ ಆ ರೇಸ್ ಮುಗಿಯುತ್ತಲೇ ಇಲ್ಲ. ಆಕೆಯ ದೈನಂದಿನ ಚಟುವಟಿಕೆ ಬೆಳಗ್ಗಿನಿಂದಲೇ ಆರಂಭವಾದರೂ ಬಿಡುವಿಲ್ಲದೆ, ಉಸಿರುಗಟ್ಟಿ ದಿನದ 24 ಗಂಟೆ ಓದಿದರೂ ಆಕೆಯ ಮನಸ್ಸಿಗೆ ತೃಪ್ತಿ ಇಲ್ಲ. ತನ್ನ ಶಾಲೆಯ ಶಿಕ್ಷಕರು ನೀಡಿದ ಗುರಿಗಳು, ಶಾಲಾ ಸಿಲೆಬಸ್, ತನ್ನ ಓರಗೆಯವರ ಜೊತೆಗಿನ ಪೈಪೋಟಿಗಳು ಮತ್ತು ಹೆತ್ತವರ ಕನಸುಗಳನ್ನು ಪೂರೈಸಲು ಹೆಣಗಾಡುತ್ತಾ ಆಕೆ ತನ್ನ ಕನಸುಗಳನ್ನು ಬಲಿ ಕೊಡುತ್ತಿದ್ದಾಳೆ. ದಿನದ ಪ್ರತಿ ಕ್ಷಣವನ್ನು ಆಕೆ ವ್ಯಯ ಮಾಡದೇ ಓದುತ್ತಲೇ ಇದ್ದಳು. ಬೆಳಿಗ್ಗೆ ಎದ್ದು ಆಕೆ ಹಲ್ಲುಜ್ಜುವ ಮೊದಲೇ ಗಣಿತಶಾಸ್ತ್ರ ಅಧ್ಯಯನ. ನಂತರ ಫಿಸಿಕ್ಸ್. ಆಕೆಯ ಶಾಲೆ ಆರಂಭವಾಗುವ ನಡುವೆ ಸಮಯವಿದ್ದರೆ ಬೆಳಗ್ಗಿನ ಉಪಹಾರ. ಸಮಯವಿದ್ದರೂ ತಿನ್ನಲು ವ್ಯವದಾನವಿಲ್ಲ, ಸೇರುವುದೂ ಇಲ್ಲ. ತರಗತಿ ಬೆಳಗ್ಗೆ 9ಕ್ಕೆ ಆರಂಭವಾಗಿ ಸಂಜೆ 5ರ ವರೆಗೆ ನಾನ್ ಸ್ಟಾಪ್ ನಡೆಯುತ್ತಲೇ ಇರುತ್ತಿತ್ತು. ರಾತ್ರಿ 6 ರಿಂದ ಕೆಮಿಸ್ಟ್ರಿ ಮತ್ತು ಬಯೋಲಜಿ ಓದು. ನಡುವೆ JEE ಮತ್ತು NEET ಕೋಚಿಂಗ್. ರಜಾ ದಿನಗಳಂತೂ ಸಿಗುವುದೇ ಇಲ್ಲ. ಭಾನುವಾರ ಬೆಳಿಗ್ಗೆ 6 ರಿಂದ ರಾತ್ರಿ 6 ರವರೆಗೆ ವಿಶೇಷ ತರಬೇತಿ. ಆಕೆ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ನೋಡದೇ ವರುಷಗಳೇ ಕಳೆದಿತ್ತು. ಆಕೆಯ ಹೆತ್ತವರು ಆಕೆಯ ಹಿಂದೆಯೇ 24 ಗಂಟೆ ಹೆಲಿಕಾಪ್ಟರ್ ನಂತೆ ಹದ್ದಿನ ಕಣ್ಣುಗಳಿಂದ ವೀಕ್ಷಿಸುತ್ತಲೇ ಮಾನಿಟರ್ ಮಾಡುತ್ತಿದ್ದರು. ಇನ್ನು ಮೋಜು ಮಸ್ತಿ, ಪಿಕ್-ನಿಕ್, ಪ್ರವಾಸ ಇವೆಲ್ಲವೂ ಗೌಣ. ಕುಟುಂಬದವರೊಂದಿಗೆ ಸಮ್ಮಿಲನ, ಮಿಲನ ಇಲ್ಲವೇ ಇಲ್ಲ. ದಿನದ 24 ಗಂಟೆಯಲ್ಲಿ 4 ರಿಂದ 6 ಗಂಟೆ ನಿದ್ದೆ. (ನಿದ್ದೆ ಬಂದರೆ). ಅರ್ಧ ಗಂಟೆ ಊಟ ಮತ್ತು 10 ನಿಮಿಷ ಮೊಬೈಲ್. ಇದು ಅವಳ ದೈನಂದಿನ ದಿನಚರಿ.

ಇನ್ನು ಈ ಎರಡು ವರುಷಗಳ ನಿರಂತರ ಶ್ರಮದ ಬಳಿಕ NEET ಮತ್ತು JEE ಪರೀಕ್ಷೆ. ನಿರೀಕ್ಷೆಗಳು ಜಾಸ್ತಿ ಇತ್ತು. ನಿರೀಕ್ಷಿತ ರಾಂಕ್ ಇರಲೇ ಇಲ್ಲ. ಅತ್ತ ವೈದ್ಯಳೂ ಆಗಲಿಲ್ಲ ಇತ್ತ IIT ಸೀಟು ಸಿಗಲೂ ಇಲ್ಲ. ಹೆತ್ತವರ ಬೈಗುಳ, ಸಮಾಜದ ಮತ್ತು ನೆರೆಕರೆಯವರ ಕೊಂಕು ನುಡಿ. ಆಕೆಯ ಗೆಳತಿಯರಿಗೆ ಸೀಟು ಸಿಕ್ಕಿ ಆಕೆ ಏಕಾಂಗಿಯಾದಳು. ಒತ್ತಡ ನಿಭಾಯಿಸುವ ಪ್ರಾಯ ಅವಳದ್ದಲ್ಲ. ಇನ್ನೂ ಜಗತ್ತು ನೋಡದ 16 ರ ಹರೆಯದ ರೂಪಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಹೆತ್ತವರ ಪ್ರತಿಷ್ಠೆ, ಶಾಲಾ ಒತ್ತಡ, ಶಿಕ್ಷಕರ ನಿರೀಕ್ಷೆ ಎಲ್ಲವೂ ಮಣ್ಣುಪಾಲಾಗಿದ್ದಕ್ಕೆ ನಾನೇ ಕಾರಣ ಎಂಬ ಪಾಪ ಪ್ರಜ್ಞೆಯಿಂದ ಹೊರ ಬರಲಾರದೇ, ರಾತ್ರಿ ತನ್ನದೇ ರೂಮಿನ ಫ್ಯಾನಿಗೆ ನೇಣು ಹಾಕಿಕೊಂಡು ತನ್ನದಲ್ಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಆಕೆ, ಒಂದು ಪತ್ರದಲ್ಲಿ ‘ಅಮ್ಮ ಸಾಧ್ಯವಾದರೆ ಕ್ಷಮಿಸು’ ಎಂದು ಎರಡು ಸಾಲು ಬರೆದು ಎಲ್ಲಾ ಸಮಸ್ಯೆಗೂ ಶಾಶ್ವತ ಪರಿಹಾರ ಪಡೆದಿದ್ದಳು. ಹಲವು ಪ್ರಶ್ನೆಗಳಿಗೆ ಉತ್ತರ ನೀಡದೇ ಅವಳು ಪ್ರಶ್ನೆಯಾಗಿಯೇ ಉಳಿದಳು.


ಈ ಸಾವುಗಳಿಗೆ ಕೊನೆ ಇಲ್ಲವೇ?

ಅಕ್ಟೋಬರ್ 29, 2019ರ ಬೆಳಗಿನ ಜಾವ 3.26ರ ಸಮಯ. ಎಲ್ಲರೂ ಸಕ್ಕರೆಯ ಸವಿ ನಿದ್ರೆಯಲ್ಲಿ ಇರುವ ಹೊತ್ತು. ಆದರೆ ಭಾರತೀಯ ತಾಂತ್ರಿಕ ವಿದ್ಯಾಲಯ (ಐಐಟಿ) ಹೈದರಾಬಾದ್ ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿ, ಚಿಗುರು ಮೀಸೆಯ ಕುರುಚಲು ಗಡ್ಡದ ಸ್ಪುರದ್ರೂಪಿ ಯುವಕ ಪಿಚಕಾಲ ಸಿದ್ಧಾರ್ಥ ತನ್ನ ಹಾಸ್ಟೆಲ್‍ನ ಮೂರನೇ ಮಹಡಿಯಿಂದ ಜೀವನದಲ್ಲಿ ವೈರಾಗ್ಯ ಎಂದು ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಕ್ಷಣಾರ್ಧದಲ್ಲಿ ನೂರು ಕಾಲ ಬಾಳಿ ಭಾರತದ ಏಳಿಗೆಗೆ ಪೂರಕವಾಗಬೇಕಿದ್ದ ಯುವಶಕ್ತಿಯೊಂದರ ದೀಪ ನಂದಿ ಹೋಗಿತ್ತು. ಆತನ ಆತ್ಮಹತ್ಯಾ ಚೀಟಿಯಲ್ಲಿ “ಬದುಕಿನಲ್ಲಿ ಆಸೆಯಿಲ್ಲ. ಜೀವನದಲ್ಲಿ ವೈರಾಗ್ಯ ಮೂಡಿದೆ. ನನ್ನ ಜೀವನದಲ್ಲಿ ಬರೀ ಕೆಟ್ಟ ಘಳಿಗೆಗಳೇ ವಿಜೃಂಭಿಸುತ್ತಿದೆ. ಪದೇ ಪದೇ ಅದೃಷ್ಟವೂ ಕೈಕೊಡುತ್ತಿದೆ. ನನ್ನ ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ನನಗೆ ತೋಚುತ್ತಿಲ್ಲ. ಕಳೆದ ಎರಡು ತಿಂಗಳುಗಳಿಂದ ಮಾನಸಿಕ ಹಿಂಸೆಯಿಂದ ಬಳಲಿ ಬೆಂಡಾಗಿದ್ದೇನೆ. ಶೈಕ್ಷಣಿಕವಾಗಿ ಬದ್ದತೆ ಮತ್ತು ಏಕಾಗ್ರತೆ ಬರಲು ಸಾಧ್ಯವಾಗುತ್ತಿಲ್ಲ. ನನ್ನ ಆತ್ಮವೇ ನನ್ನನ್ನು ಪ್ರತಿ ಬಾರಿಯೂ ಪ್ರಶ್ನಿಸುತ್ತಿದೆ. ನಾನು ಬದುಕಿರುವುದೇ ವ್ಯರ್ಥ. ನಾನು ನನ್ನನ್ನು ಪ್ರೀತಿಸುವ ವೈಭವೀಕರಿಸುವ ವ್ಯಕ್ತಿಯಾಗಿದ್ದೇನೆ. ನಾನು ಬದುಕಿರುವ ಯೋಗ್ಯತೆ ಹೊಂದಿಲ್ಲ. ನಾನು ವಿದ್ಯಾರ್ಥಿ ಜೀವನದುದ್ದಕ್ಕೂ ನನ್ನ ಸಹಪಾಠಿಗಳ ಜೊತೆ ಹೋಲಿಕೆ ಮಾಡಿಕೊಳ್ಳುತ್ತಲೇ ಇದ್ದೇನೆ. ನನಗಿನ್ನೂ ಒತ್ತಡ ತಾಳಲು ಸಾಧ್ಯವಿಲ್ಲ. ನನಗೆ ಬದುಕುವ ಯೋಗ್ಯತೆ ಇಲ್ಲ. ನನ್ನ ಸಾವಿಗೆ ನಾನೇ ಹೊಣೆ.” ಇದು 2019ನೇ ವರ್ಷದಲ್ಲಿ ಐಐಟಿ ಹೈದರಾಬಾದ್‍ನ ಕ್ಯಾಂಪಸ್‍ನಲ್ಲಿ ನಡೆದ ಮೂರನೇ ಆತ್ಮಹತ್ಯೆ.

2019ರ ಫೆಬ್ರವರಿ ತಿಂಗಳ ಮೊದಲ ವಾರ ಐಐಟಿ ಹೈದರಾಬಾದ್ ಇದರ ಮೂರನೇ ವರ್ಷದ ವಿದ್ಯಾರ್ಥಿ ಅನಿರುದ್ಧ ಮುಮ್ಮನೇನಿ ಸಾವಿಗೆ ಶರಣಾಗಿದ್ದ. ಕನಸು ಕಂಗಳ ಸ್ಪುರದ್ರೂಪಿ ಯುವಕ. ಇನ್ನೂ 20 ವರ್ಷ ದಾಟಿರದ ಸುಂದರಾಂಗ. ತನ್ನ ಹಾಸ್ಟೆಲಿನ 7ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ, ಮಾಡಿಕೊಂಡಿದ್ದ. ಆತನೂ ಆತ್ಮಹತ್ಯೆ ಮಾಡುವ ಮೊದಲು ಚೀಟಿ ಬರೆದಿಟ್ಟಿದ್ದ. “ನನಗೂ ಕನಸುಗಳಿವೆ ಎಲ್ಲರಂತೆ ಆಗಸದಲ್ಲಿ ಹಾರಾಡಬೇಕು. ಜೀವನದಲ್ಲಿ ಸಾಧಿಸಬೇಕು. ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ವಿಧಿ ಅದಕ್ಕೆ ಆಸ್ಪದ ನೀಡುತ್ತಿಲ್ಲ. ನನ್ನ ಕನಸುಗಳು ನುಚ್ಚುನೂರಾಗಿದೆ, ಮನಸ್ಸು ಮುರಿದಿದೆ, ಕನಸು ಕಮರಿದೆ, ಬದುಕು ಬರಡಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನ ಒತ್ತಡದಲ್ಲಿ ನಾನು ಗೆಲ್ಲಲಾರೆ. ನಾನು ಸೋಲುತ್ತಿದ್ದೇನೆ. ನಾನು ಕುಸಿದು ಹೋಗುತ್ತಿದ್ದೇನೆ. ನನ್ನ ಹೆತ್ತವರ ಆಶೋತ್ತರಗಳಿಗೆ ನಾನು ಪೂರಕವಾಗಿ ಬಾಳಲು ಸಾಧ್ಯವಾಗುತ್ತಿಲ್ಲ. ಆದರೂ ನಾನು ಚೆನ್ನಾಗಿದ್ದೇನೆ. ನಾನು ಎಲ್ಲರಂತೆಯೇ OK ಎಂದು ನಾಟಕವಾಡಲು ನನ್ನಿಂದ ಸಾಧ್ಯವಿಲ್ಲ. ಈ ನಾಟಕವಾಡುವ ಜಗತ್ತಿನಿಂದ ದೂರ ಬಹುದೂರ ಹೋಗುತ್ತಿದ್ದೇನೆ. ನನ್ನನ್ನು ಸಾಧ್ಯವಾದರೆ ಕ್ಷಮಿಸಿ ಎಂದು ತನ್ನ ಹೆತ್ತವರಿಗೆ ಮನಕಲುಕುವ ಪತ್ರ ಬರೆದಿದ್ದ. ಸ್ನೇಹಿತರಿಗೆ ಬರೆದ ಪತ್ರದಲ್ಲಿ “ನಾನು ನಿಷ್ಪ್ರಯೋಜಕ, ನಾನೊಬ್ಬ ಕನಸುಗಳನ್ನು ನನಸುಗೊಳಿಸಲಾರದ ಹುಡುಗ. ನನ್ನಿಂದ ಯಾರಿಗೂ ಉಪಯೋಗವಿಲ್ಲ. ನಾನು ನನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೊರೆಯಾಗಬಾರದು. ದಯವಿಟ್ಟು ನನ್ನ ಹೆಣವನ್ನು ಸುಡಬೇಡಿ, ಹೂತು ಹಾಕಬೇಡಿ. ನನ್ನ ಹೆಣವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಕಡೇ ಪಕ್ಷ ನನ್ನ ಹೆಣವಾದರೂ ಉಪಯೋಗಕ್ಕೆ ಬರಲಿ. ನನ್ನ ಹೆಣ ಭವ್ಯ ಭಾರತದ ಭಾವೀ ವೈದ್ಯರುಗಳಿಗಾದರೂ ಉತ್ತಮ ಕಲಿಕೆಯ ವಸ್ತುವಾಗಲಿ. ಬದುಕಿದ್ದಾಗ ಯಾರಿಗೂ ಉಪಯೋಗವಾಗಲಿಲ್ಲ. ಸತ್ತಾಗಲಾದರೂ ನನ್ನ ಹೆಣವನ್ನು ಯಾರಾದರೂ ಬಳಸಲಿ ಎಂಬ ಮನಕಲುಕುವ ಪತ್ರ ಬರೆದಿದ್ದ.

Also Read  ಜಾತಕದಲ್ಲಿನ ಸರ್ಪದೋಷದ ಮಾಹಿತಿ

2019ರ ಜುಲೈ ತಿಂಗಳ ಕೊನೆ ವಾರ. ಅದೇ ಐಐಟಿ ಹೈದರಾಬಾದ್‍ನ ಎರಡನೇ ವರ್ಷದ ಸ್ನಾತಕೋತ್ತರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಮಾರ್ಕ್ ಅಂಡ್ರ್ಯೂ ಚಾಲ್ರ್ಸ್ ಎಂಬ 25 ರ ಹರೆಯದ ಯುವಕ ತನ್ನ ಹಾಸ್ಟೆಲಿನ ಫ್ಯಾನ್‍ಗೆ ನೇಣು ಹಾಕಿ ಜೀವ ತೆತ್ತಿದ್ದ. ವಾರಣಾಸಿಯ ಮಧ್ಯಮ ವರ್ಗದ ಕುಟುಂಬದ ಅತ್ಯಂತ ಪ್ರತಿಭಾ ಸಂಪನ್ನ ವಿದ್ಯಾರ್ಥಿ, ಬಹಳಷ್ಟು ನಿರೀಕ್ಷೆಗಳೊಂದಿಗೆ ಐಐಟಿ ಸೇರಿದ್ದ. ತಂದೆ ಸರಕಾರಿ ಸಂಸ್ಥೆಯಲ್ಲಿ ಗುಮಾಸ್ತ, ತಾಯಿ ಶಿಕ್ಷಕಿ. ಎಲ್ಲ ಮಧ್ಯಮ ವರ್ಗದ ಮಕ್ಕಳಲ್ಲಿ ಇರುವ ಆಸೆ, ಆಕಾಂಕ್ಷೆ ಮತ್ತು ಸಾಧಿಸಬೇಕೆಂಬ ಛಲ ಮತ್ತು ಕನಸನ್ನು ಹೊತ್ತುಕೊಂಡು ಐಐಟಿ ಸೇರಿದ್ದ. ಆದರೆ ಕಾಲ ಕಳೆದಂತೆ ಆತನಿಗೆ ವಾಸ್ತವದ ಕಟುಸತ್ಯಗಳು ಒಂದೊಂದಾಗಿ ಅರಿವಾಗತೊಡಗಿತ್ತು. ಅತಿಯಾದ ನಿರೀಕ್ಷೆ, ತೀವ್ರ ಪೈಪೋಟಿಯ ವಿದ್ಯಾರ್ಥಿಗಳ ಎದುರು ಆತನಿಗೆ ನಿರೀಕ್ಷಿತ ಫಲಿತಾಂಶ ದೊರಕದಾದಾಗ ಹತಾಶೆ ಮಡುಗಟ್ಟಿತ್ತು. ತಾನಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗದೇ ಇದ್ದಾಗ ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದ. ತನ್ನ ಎಲ್ಲಾ ಸಮಸ್ಯೆಗಳಿಗೆ ಒಂದೇ ಉತ್ತರ ಸಾವು ಎಂದು ದೃಢ ನಿರ್ಧಾರ ಮಾಡಿ ಇಹಲೋಕ ತ್ಯಜಿಸಿದ್ದ. ತನ್ನ ಸಾವಿನ ಚೀಟಿಯಲ್ಲಿ ಹೀಗೆ ಬರೆದಿತ್ತು. “ನನಗೆ ಕೆಲಸವಿಲ್ಲ. ನನಗೆ ಕೆಲಸ ಸಿಗುವುದೂ ಇಲ್ಲ. ಯಾಕೆಂದರೆ ಯಾರಿಗೂ ಸೋಲುವ ಕುದುರೆ ಬೇಕಿಲ್ಲ. ಎಲ್ಲರೂ ಗೆಲ್ಲುವ ಕುದುರೆಗೆ ಮಾತ್ರ ಬಾಜಿ ಕಟ್ಟುತ್ತಾರೆ. ನಾನೊಬ್ಬ ಸೋತ ವ್ಯಕ್ತಿ. ನಾನು ಗೆಲ್ಲುವುದು ಸಾಧ್ಯವೂ ಇಲ್ಲ. ಆತ ಎಂಟು ಪುಟಗಳ ದೀರ್ಘವಾದ ಆತ್ಮಹತ್ಯಾ ಚೀಟಿ ಬರೆದಿದ್ದ. “ಏಕ್ ಹೀ ಜಿಂದಗೀ ಹೈ, ಹರ್ ಫಲ್ ಜಿಯೋ” ಅಂದರೆ ಜೀವನ ಇರುವುದು ಒಂದೇ. ಪ್ರತಿಕ್ಷಣವನ್ನು ಜೀವಿಸಿ, ಆನಂದಿಸಿ.

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ನಿಮ್ಮ ಜೀವನವನ್ನು ಮರೆತು ಬಿಡಬೇಡಿ. ಪ್ರತೀ ದಿನವನ್ನು ಜೀವಿಸಿ. ಪ್ರತಿಕ್ಷಣವನ್ನು ಅನುಭವಿಸಿ. ಐಟಿ ಮೇ ಕಾಮ್ ಕರ್ತೇ, ಕರ್ತೇ ಅಪ್ನಾ ಲೈಫ್ ಮತ್‍ಬೂಲ್‍ನ ಜಾನಾ” ಎಂಬ ಮನಕಲುಕುವ ಪತ್ರವನ್ನು ಬರೆದು ಇಹಲೋಕದ ಪಯಣವನ್ನು ಮುಗಿಸಿದ್ದ. ಇದು ಇವತ್ತಿನ ಭಾರತದ ಪ್ರತಿಭಾವಂತ ಮಕ್ಕಳ ವಾಸ್ತವ ಸ್ಥಿತಿ. ಯಾಕಾಗಿ ನಮ್ಮ ಮಕ್ಕಳು ಸಾಯುತ್ತಿದ್ದಾರೆ ಮತ್ತು ಜೀವನದ ಪರೀಕ್ಷೆಯಲ್ಲಿ ಸೋಲುತ್ತಿದ್ದಾರೆ ಎಂಬುದಕ್ಕೆ ನಾವು ಉತ್ತರ ಪಡೆಯಲೇ ಬೇಕು. ಇಲ್ಲವಾದಲ್ಲಿ ಪ್ರತಿಭಾವಂತ ಯುವಶಕ್ತಿ ಈ ರೀತಿ ಜೀವ ತೆತ್ತಲ್ಲಿ, ಭವ್ಯ ಭಾರತದ ಭವಿಷ್ಯಕ್ಕೆ ಮುನ್ನುಡಿ ಬರೆಯುವರ್ಯಾರು? ನಾವು ನಮ್ಮ ಮಕ್ಕಳಿಗೆ ಗೆದ್ದಾಗ ಸಂಭ್ರಮಿಸುವುದನ್ನು ಬಹಳ ಸುಲಭವಾಗಿ ಕಲಿಸಿಕೊಡುತ್ತೇವೆ. ಆದರೆ ಬಿದ್ದಾಗ ಸೋಲನ್ನು ಸವಾಲಾಗಿ ಸ್ವೀಕರಿಸಿ ಮಗದೊಮ್ಮೆ ಎದ್ದು ನಿಲ್ಲುವ ಮನೋಧರ್ಮವನ್ನು ಕಲಿಸಿಕೊಡುವುದು ಮರೆತಿದ್ದೇವೆ. ಅದುವೇ ಇಂದಿನ ಈ ಎಲ್ಲಾ ದುರಂತಗಳು ಕಾರಣವಾಗುತ್ತಿದೆ.

ವಾಸ್ತವ ಸ್ಥಿತಿ:
ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (NCRB) ಇದರ 2021ರ ಅಂಕಿ ಅಂಶಗಳ ಪ್ರಕಾರ ಸುಮಾರು ಪ್ರತಿದಿನ 35 ಮಂದಿ ವಿದ್ಯಾರ್ಥಿಗಳು ನಮ್ಮ ಭಾರತ ದೇಶವೊಂದರಲ್ಲಿಯೇ ಆತ್ಮ ಹತ್ಯೆಯಿಂದ ಸಾಯುತ್ತಿದ್ದಾರೆ. 2021ನೇ ಇಸವಿಯಲ್ಲಿ ಸುಮಾರು 13,000 ಸಾವಿರ ವಿದ್ಯಾರ್ಥಿಗಳು ಜೀವ ತೆತ್ತಿದ್ದಾರೆ. 2017 ರಲ್ಲಿ 9905, 2018ರಲ್ಲಿ 10,159, 2019ರಲ್ಲಿ 10335, 2021 ರಲ್ಲಿ 12.526, 2022ರಲ್ಲಿ 13,089 ಹೀಗೆ ಸಾಯುವವರ ಸಂಖ್ಯೆ ವಾರ್ಷಿಕವಾಗಿ 5 ಶೇಕಡಾದಂತೆ ಏರುತ್ತಲೇ ಇದೆ. ಇದೇ ಅನುಪಾತ ಮುಂದುವರಿದರೆ 2023ರ ಡಿಸೆಂಬರ್ ಹೊತ್ತಿಗೆ ಈ ಸಂಖ್ಯೆ 15,000 ದಾಟಿದರೆ ಅತಿಶಯೋಕ್ತಿಯಲ್ಲ. 2023ರಲ್ಲಿ ಜನವರಿಯಿಂದ ಜೂನ್ ವರೆಗೆ ಈಗಾಗಲೇ ಆತ್ಮಹತ್ಯೆಯ ಸಂಖ್ಯೆ 6000 ದಾಟಿದೆ. 2018 ರಿಂದ 2023ರ ವರೆಗೆ 103 ವಿದ್ಯಾರ್ಥಿಗಳು IIT, NIT ಮತ್ತು ಸೆಂಟ್ರಲ್ ಯುನಿವರ್ಸಿಟಿಗಳಲ್ಲಿ ಆತ್ಮಹತ್ಯೆಯಿಂದ ಸಾವಿಗೀಡಾಗಿದ್ದಾರೆ.

 

ನಮ್ಮ ದೇಶದ ಎಂಜಿನಿಯರಿಂಗ್ ಮತ್ತು ಮೆಡಿಕಲ್ ದಾಖಲಾತಿ ತರಬೇತಿಯ ರಾಜಧಾನಿ ಎನಿಸಿರುವ ರಾಜಸ್ಥಾನದ ಕೋಟಾದಲ್ಲಿ ಈಗಾಗಲೇ ಜನವರಿಯಿಂದ ಜೂನ್ ವರೆಗೆ 20 ಮಂದಿ ಆತ್ಮಹತ್ಯೆಯ ಕೂಪಕ್ಕೆ ಬಿದ್ದಿದ್ದಾರೆ. ಈಗಾಗಲೇ ನಮ್ಮ ದೇಶದ ವಿದ್ಯಾರ್ಥಿಗಳಿಂದ ಆತ್ಮಹತ್ಯೆಯ ರಾಜಧಾನಿ ಎಂಬ ಕೆಟ್ಟ ಹಣೆಪಟ್ಟಿಯನ್ನು ಕೂಡಾ ಪಡೆದುಕೊಂಡಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ನೀಟ್ (NEET) (ರಾಪ್ಟ್ರೀಯ ಅರ್ಹತಾ ಪ್ರವೇಶ ಪತ್ರ) JEE ಮತ್ತು UPSC (ಯೂನಿಯನ್ ಪಬ್ಲಿಕ್ ಸರ್ವಿಸ್ ಪರೀಕ್ಷೆಯನ್ನು ಬರೆಯುತ್ತಾರೆ.

ನಮ್ಮ ದೇಶದಲ್ಲಿ ಒಟ್ಟು 23 IIT ಇದ್ದು, ಪರೀಕ್ಷೆ ಬರೆದ 85 ರಿಂದ 90 ಲಕ್ಷ ವಿದ್ಯಾರ್ಥಿಗಳಲ್ಲಿ ಕೇವಲ 1.4 ಶೇಕಡಾ ವಿದ್ಯಾರ್ಥಿಗಳಿಗೆ ಮಾತ್ರ ಸೀಟು ಲಭಿಸುತ್ತದೆ. ಅದೇ ರೀತಿ ನೀಟ್ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಕೇವಲ 6 ಶೇಕಡಾ ವಿದ್ಯಾರ್ಥಿಗಳಿಗೆ ಮಾತ್ರ ವೈದ್ಯಕೀಯ ಪದವಿಗೆ ದಾಖಲಾತಿ ದೊರಕುತ್ತದೆ. ಹೀಗಿರುವಾಗ ಎಷ್ಟು ಒತ್ತಡ ಮಕ್ಕಳ ಮೇಲೆ ಇರುತ್ತದೆ ಎಂಬುದನ್ನು ಊಹಿಸಲು ಅಸಾಧ್ಯವಾಗಿರುತ್ತದೆ. ಇದೇ ರೀತಿಯ ಸ್ಪರ್ಧಾತ್ಮಕ ವಾತಾವರಣ ಮುಂದುವರಿದಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ಮೇಲೆ ವಿಪರೀತ ಒತ್ತಡ ಬಿದ್ದು ಮಾನಸಿಕವಾಗಿ ಕುಗ್ಗಿ ಹೋಗಿ ಮಾನಸಿಕ ಖಿನ್ನತೆ ರೋಗಕ್ಕೆ ತುತ್ತಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದೆಲ್ಲದರ ಹೊರತಾಗಿಯೂ ಹೆತ್ತವರು ತಮ್ಮ ಸ್ವ-ಪ್ರತಿಷ್ಠೆ, ಆರ್ಥಿಕ ಪ್ರತಿಷ್ಠೆ ಮ್ತತು ಸಾಮಾಜಿಕ ಸ್ಥಾನಮಾನದ ಆಸೆಗೆ ಜೋತು ಬಿದ್ದು ಮಕ್ಕಳ ಮೇಲೆ ಇನ್ನಿಲ್ಲದ ಒತ್ತಡ ಏರಿ ಪರೋಕ್ಷವಾಗಿ ತಮ್ಮದೇ ಮಕ್ಕಳ ಅವನತಿಗೆ ಕಾರಣರಾಗುತ್ತಾರೆ. ಇನ್ನು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ತಮ್ಮ ಶಾಲೆಯ ಪ್ರತಿಷ್ಠೆ ಮತ್ತು ವ್ಯಾಪಾರೀ ಉದ್ದೇಶಕ್ಕಾಗಿ ತಮ್ಮ ಶಾಲೆಯ ಮಕ್ಕಳಿಗೆ ಹೆಚ್ಚು ರ್ಯಾಂಕ್ ಬರಲಿ ಎಂದು ಇನ್ನಿಲ್ಲದ ಒತ್ತಡ ಮಕ್ಕಳ ಮೇಲೆ ಹೇರುತ್ತಾರೆ. ಶಾಲಾ ಶಿಕ್ಷಕರು ಶಾಲೆಯ ಆಡಳಿತ ಮಂಡಳಿ ಮತ್ತು ಹೆತ್ತವರ ನಡುವೆ ಸಿಕ್ಕಿಹಾಕಿಕೊಂಡ ಪ್ರತಿಭಾವಂತ ಮಕ್ಕಳು ತಮ್ಮ ಕನಸುಗಳು ನನಸಾಗುವ ಮೊದಲೇ ಮಸಣ ಸೇರುವುದು ವಾಸ್ತವ ಸ್ಥಿತಿಗೆ ಹಿಡಿದ ಕೈಗನ್ನಡಿ.

Also Read  "Mental health and workplace"- Dr Supriya Hegde Aroor

ವಿದ್ಯಾಭ್ಯಾಸ ಎನ್ನುವುದು, ಸಮಾಜದ ಅತ್ಯಂತ ಪ್ರಾಮುಖ್ಯವಾದ ಹೊಣೆಗಾರಿಕೆಯಾಗಿರುತ್ತದೆ. ವಿದ್ಯಾಸಂಸ್ಥೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಆತನ ದೈಹಿಕ ಬೆಳವಣಿಗೆ ಮತ್ತು ಮಾನಸಿಕವಾದ ಆರೋಗ್ಯ, ಬುದ್ಧಿಮತ್ತೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಆದರೆ ದೌರ್ಭಾಗ್ಯವೆಂದರೆ ನಮ್ಮ ಹೆಚ್ಚಿನ ಎಲ್ಲಾ ವಿದ್ಯಾಸಂಸ್ಥೆಗಳು ಡಾಕ್ಟರ್ ಗಳು, ಇಂಜಿನಿಯರ್‌ಗಳು, ವಕೀಲರು ಅಥವಾ ಇನ್ನಾವುದೇ ವೃತ್ತಿಯ ವ್ಯಕ್ತಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿ ಪರಿವರ್ತನೆಯಾಗಿದೆ. ಮಗು ಹುಟ್ಟುವ ಮೊದಲೇ ಹೆತ್ತವರು ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟ್ ಬುಕ್ ಮಾಡಿ ತಮ್ಮ ಪ್ರತಿಷ್ಠೆ ಮೆರೆಯುತ್ತಾರೆ. ಒಟ್ಟಿನಲ್ಲಿ ನನ್ನ ಮಗನಿಗೆ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್ ಸೀಟು ಅಥವಾ ಐಐಟಿಗಳಲ್ಲಿ ಸೀಟು ದಕ್ಕಬೇಕು ಎಂಬ ಅತಿಯಾದ ಪ್ರತಿಷ್ಠೆ ಮತ್ತು ಸಾಮಾಜಿಕವಾದ ಬೂಟಾಟಿಕೆಗೆ ಜೋತು ಬಿದ್ದ ಹೆತ್ತವರೇ ಇದಕ್ಕೆ ಪರೋಕ್ಷ ಕಾರಣ. ಹೆತ್ತವರು ನಮ್ಮ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮಾಜ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆತ್ತವರು ತನ್ನ ಮಕ್ಕಳನ್ನು ಗ್ರಾಹಕನಾಗಿ ನೋಡಬಾರದು. ತನ್ನ ಮಕ್ಕಳನ್ನು ಸಂಬಳ ಪಡೆಯುವ ಸರಕಾಗಿ ನೋಡಬಾರದು. ನನ್ನ ಮಗ ಅಥವಾ ಮಗಳಿಗೆ ಆರಂಭಿಕ ಸಂಬಳ ವರ್ಷಕ್ಕೆ ಒಂದು ಕೋಟಿ ಎಂದು ಹೇಳುವ ಹೆತ್ತವರ ಮನಸ್ಸು ಬದಲಾಗಬೇಕು. ಇಲ್ಲವಾದಲ್ಲಿ ಈ ದುರಂತಕ್ಕೆ ಕೊನೆಯೇ ಇಲ್ಲ.

ಎಲ್ಲಿ ಎಡವುತ್ತಿದ್ದೇವೆ?

1) ಒಬ್ಬ ಮಗುವಿಗೆ ಮಾನಸಿಕ ಒತ್ತಡ ಬರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಹೆತ್ತವರಲ್ಲಿದೆ. ಮಗುವಿನ ಸಾಮರ್ಥ್ಯ, ಕಲಿಕಾ ಚತುರತೆ ಮತ್ತು ವಿವೇಚನಾ ಶಕ್ತಿಯ ಬಗೆಗಿನ ದೌರ್ಬಲ್ಯ ಮತ್ತು ಸಾಮರ್ಥ್ಯದ ಅರಿವು ಹೆತ್ತವರು ತಿಳಿದಿರಬೇಕು. ತಮ್ಮ ಮಕ್ಕಳನ್ನು ಅದಕ್ಕೆ ಪೂರಕವಾದ ವಿದ್ಯಾಭ್ಯಾಸ ಮತ್ತು ಪ್ರೋತ್ಸಾಹ ನೀಡಬೇಕು. ಹುಟ್ಟಿದ ಎಲ್ಲಾ ಮಕ್ಕಳು ಐಐಟಿ ಸೇರಲು ಸಾಧ್ಯವೇ ಇಲ್ಲ. ಐಐಟಿ ಸೀಟಿಗಾಗಿ 85 ಲಕ್ಷ ಮಂದಿ ದೇಶದಾದ್ಯಂತ ಪರೀಕ್ಷೆ ಬರೆಯುತ್ತಾರೆ. ಆದರೆ ಸಿಗುವುದು ಕೇವಲ ಹತ್ತುಸಾವಿರ ಮಕ್ಕಳಿಗೆ ಮಾತ್ರ. ಐಐಟಿ ಬಾಂಬೆಯಲ್ಲಿ ಸೀಟು ಸಿಗಬೇಕಾದಲ್ಲಿ ನೂರರ ಒಳಗೆ ರ್ಯಾಂಕ್ ಪಡೆಯಬೇಕು ಎಂಬ ವಾಸ್ತವದ ಅರಿವು ಹೆತ್ತವರಿಗೆ ಇರಬೇಕು. ಅನಗತ್ಯವಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು. ನನ್ನ ಮಗ ಬಹಳ ಪ್ರತಿಭಾವಂತ, ಆತನಿಗೆ ಐಐಟಿ ಸೀಟು ಸಿಕ್ಕೇ ಸಿಗುತ್ತದೆ ಎಂದು ಮಗನ ಎದುರು ಎಲ್ಲರಲ್ಲಿ ಹೇಳಿದಾಗ ತಾನು ಸೀಟು ಪಡೆಯದಿದ್ದಲ್ಲಿ ತನ್ನ ಹೆತ್ತವರ ಪ್ರತಿಷ್ಠೆ ಮಣ್ಣು ಪಾಲಾಗುತ್ತದೆ ಎಂಬ ಜಿಜ್ಞಾಸೆ ಮಕ್ಕಳಲ್ಲಿ ಮೂಡುತ್ತದೆ. ಅದು ಆತನ ಮೇಲೆ ದುಷ್ಪರಿಣಾಮ ಬೀರುತ್ತದೆ. ನನ್ನ ಮಗನಿಗೆ ಎಲ್ಲಿಯಾದರೂ ಸಿಗಲಿ ಪರವಾಗಿಲ್ಲ ಎಂದು ಮಗನಿಗೆ ಆತ್ಮವಿಶ್ವಾಸ, ಧೈರ್ಯ ನೀಡುವ ಕೆಲಸ ಹೆತ್ತವರು ಮಾಡಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಪ್ರೋತ್ಸಾಹ, ಉತ್ತೇಜನ ಮತ್ತು ಸಹಕಾರ ನೀಡಬೇಕು. ಆದರೆ ಒತ್ತಡ ಹಾಕಬಾರದು. ತಮ್ಮ ಪ್ರತಿಷ್ಠೆಗಾಗಿ ಮಕ್ಕಳ ಹಿತಾಸಕ್ತಿ ಬಲಿ ಕೊಡಬಾರದು.

 

2) ಇನ್ನು ಪ್ರಾಥಮಿಕ ಮತ್ತು ಪದವಿಪೂರ್ವ ಹಂತದಲ್ಲಿ ಶಿಕ್ಷಕರು ಮಕ್ಕಳ ಸಾಮರ್ಥ್ಯದ ಅರಿವನ್ನು ಮಕ್ಕಳಿಗೆ ಮೂಡಿಸಬೇಕು. ಆ ಮಕ್ಕಳ ದೌರ್ಬಲ್ಯ ಮತ್ತು ಅಭಿರುಚಿಯನ್ನು ಪತ್ತೆಹಚ್ಚಬೇಕು. ಮಕ್ಕಳ ಸಾಮರ್ಥ್ಯ ಮತ್ತು ಅಭಿರುಚಿಗೆ ಪೂರಕವಾದ ಕಲಿಕೆಯನ್ನೇ ಮುಂದುವರಿಸುವಂತೆ ಹೆತ್ತವರಿಗೆ ಮನವರಿಕೆ ಮಾಡಬೇಕು. ಹುಟ್ಟಿದ ಎಲ್ಲಾ ಮಕ್ಕಳು ವೈದ್ಯರಾಗಲು ಸಾಧ್ಯವಿಲ್ಲ, ಇಂಜಿನಿಯರ್ ಆಗಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಹೆತ್ತವರಿಗೆ ಮನವರಿಕೆ ಮಾಡಿಸಬೇಕು.

3) ವಿದ್ಯಾರ್ಥಿ ಯಾವತ್ತೂ ತನ್ನನ್ನು ತನ್ನ ಸಹಪಾಠಿಗಳ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬ ವ್ಯಕ್ತಿಗೂ, ವಿದ್ಯಾರ್ಥಿಗೂ ಅವರದ್ದೇ ಆದ ಕಲಿಕಾ ಶಕ್ತಿ ಬುದ್ಧಿಮತ್ತೆ ಮತ್ತು ಕೌಶಲ್ಯ ಇದೆ. ಪ್ರತಿ ವಿದ್ಯಾರ್ಥಿಯೂ ಭಿನ್ನ, ಪ್ರತಿ ವಿದ್ಯಾರ್ಥಿಯೂ ಸಮಾಜಕ್ಕೆ ಆಸ್ತಿಯಾಗಬಹುದು ಎಂಬ ಸತ್ಯವನ್ನು ಹೆತ್ತವರು ಮತ್ತು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಯಾವತ್ತೂ ಆರೋಗ್ಯಕರವಾದ ಸ್ಪರ್ಧೆ ಇರಬೇಕು. ಅನಾರೋಗ್ಯಕರವಾದ ಹೋಲಿಕೆ ಮತ್ತು ಸ್ಪರ್ಧೆ ಒಳ್ಳೆಯದಲ್ಲ.

ಏನು ಮಾಡಬೇಕು?

1) ಬಾಲ್ಯದಿಂದಲೂ ಮಕ್ಕಳಿಗೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಪೂರಕವಾದ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು. ಸೋಲೇ ಗೆಲುವಿನ ಮೂಲ ಎಂಬುದನ್ನು ಮನವರಿಕೆ ಮಾಡಬೇಕು. ಗೆಲುವನ್ನು ಸಂಭ್ರಮಿಸುವುದನ್ನು ಹೇಳಿ ಕೊಡುವುದರ ಜೊತೆಗೆ ಸೋಲನ್ನು ಎದುರಿಸುವ ತಂತ್ರವನ್ನು ಮತ್ತು ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಬೇಕು. ಶೈಕ್ಷಣಿಕ ಪರೀಕ್ಷೆಗಿಂತ ಜೀವನದ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಧರ್ಮವನ್ನು ಹೇಳಿಕೊಡಬೇಕು. ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಹೇರಿ ಅವರ ಮೇಲೆ ಒತ್ತಡ ಬರುವಂತೆ ಮಾಡಬಾರದು. ಅದವರ ಸಾಮರ್ಥ್ಯಕ್ಕೆ ತಕ್ಕಂತೆ ಫಲಿತಾಂಶವನ್ನು ಸ್ವೀಕರಿಸಬೇಕು.

Also Read  ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

2) ಮಕ್ಕಳನ್ನು ಯಾವತ್ತೂ ಆದಾಯದ ಮೂಲ ಅಥವಾ ಗ್ರಾಹಕರಂತೆ ನೋಡಬಾರದು. ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ನೀಡಬೇಕು. ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಕಲಿಕೆಗೂ ಆದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಹೇಳಬೇಕು. ಕಲಿಯುವುದೇ ಆದಾಯಕ್ಕೆ ಎಂಬ ತಪ್ಪು ಕಲ್ಪನೆ ಮಕ್ಕಳಲ್ಲಿ ಬರದಂತೆ ನೋಡಿಕೊಳ್ಳಬೇಕು. ಮಾಧ್ಯಮಗಳು ಕೂಡಾ ಸಾಮಾಜಿಕ ಹೊಣೆಗಾರಿಕೆ ಹೊಂದಿದೆ. ಐಐಟಿಗಳನ್ನು ವೈಭವೀಕರಿಸುವುದನ್ನು ನಿಲ್ಲಿಸಬೇಕು. ವಿದ್ಯಾಭ್ಯಾಸ ಎಲ್ಲಿ ಮಾಡಿದ್ದು ಎನ್ನುವುದಕ್ಕಿಂತ, ಮಗು ಎಷ್ಟು ಸಂಸ್ಕಾರ ಮತ್ತು ಜ್ಞಾನ ಪಡೆದಿದ್ದಾನೆ ಎಂಬುದನ್ನು ತುಲನೆ ಮಾಡಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಂತರ್ಜಾಲದ ಮಹಿಮೆಯಿಂದಾಗಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲವೂ ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ದೊರಕುತ್ತಿದೆ. ನೈತಿಕತೆಯ ಮಟ್ಟವೂ ಕುಸಿಯುತ್ತಿದೆ. ಇಂತಹಾ ಸಂದಿಗ್ಧ ಕಾಲಘಟ್ಟದಲ್ಲಿ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಾಧ್ಯಮಗಳು ಒಟ್ಟು ಸೇರಿ ತಮ್ಮ ಜವಾಬ್ದಾರಿ ಮತ್ತು ಕೆಲಸವನ್ನು ಸರಿಯಾಗಿ ಅರಿತು ನಿಭಾಯಿಸಿದ್ದಲ್ಲಿ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗುವ ಸಾಧ್ಯವಿದೆ.

ಕೊನೆಮಾತು:
ಆತ್ಮಹತ್ಯೆ ಎನ್ನುವುದು ನಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಲ್ಲ ಎನ್ನುವ ಸತ್ಯದ ಅರಿವು ಎಲ್ಲರಿಗೂ ಇದೆ. ಆತ್ಮಹತ್ಯೆ ಮಾಡುವವರೆಲ್ಲ ಪಲಾಯನವಾದಿಗಳು ಅಥವಾ ಹೇಡಿಗಳು ಎಂದು ಹಣೆಪಟ್ಟಿ ನೀಡುವುದು ತಪ್ಪಾಗುತ್ತದೆ. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ನಿರಂತರವಾಗಿ ಸೋಲಿನ ಸುಳಿಗೆ ಸಿಕ್ಕಿ ಹತಾಶನಾದಾಗ ಆತ್ಮಹತ್ಯೆಯ ಆಲೋಚನೆ ಮಾಡುತ್ತಾರೆ. ಆದರೆ ಆತನ ವಿವೇಚನಾ ಶಕ್ತಿ ಮತ್ತು ಚಿಂತನಾ ಸಾಮರ್ಥ್ಯದ ಮೂಲಕ ನೋವಿನಿಂದ ಹೊರಬರುತ್ತಾನೆ. ಆದರೆ ಒಂದೆರಡು ಶೇಕಡಾ ಮಂದಿ ಈ ನೋವಿನಿಂದ ಹೊರಬರಲಾಗದೇ ಶಾಶ್ವತ ಪರಿಹಾರಕ್ಕೆಂದು ಕ್ಷಣಿಕವಾದ ದುಡುಕು ನಿರ್ಧಾರದಿಂದ ಆತ್ಮಹತ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಮಕ್ಕಳಲ್ಲಿ ಹೆಚ್ಚಾಗಿ ಹೆತ್ತವರ ಅತಿಯಾದ ನಿರೀಕ್ಷೆಗಳು, ಸಮಾಜ ತನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂಬ ಆತಂಕ ಮತ್ತು ನಿರಂತರ ಸೋಲಿನ ಹತಾಶೆ ಇವೆಲ್ಲವೂ ಆತ್ಮಹತ್ಯೆಯಲ್ಲಿ ಪರ್ಯವಸಾನವಾಗುತ್ತದೆ. ಹೆತ್ತವರು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು. ಸಮಾಜ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಾಧ್ಯಮಗಳು ಕೆಲವೊಂದು ವಿಚಾರಗಳನ್ನು ಅತಿಯಾಗಿ ವೈಭವೀಕರಿಸುವುದನ್ನೂ ಬಿಡಬೇಕು. ವಾಸ್ತವದ ಅರಿವನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿಡಬೇಕು. ಐಐಟಿಗೆ ಸೇರಿದ ಎಲ್ಲರಿಗೂ ಕೋಟಿಗಟ್ಟಲೆ ಸಂಬಳ ಬರುತ್ತದೆ ಎಂಬ ಮಿಥ್ಯವನ್ನು ತೊಡೆದುಹಾಕಬೇಕು. ಮಕ್ಕಳಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಗಳಿಕೆಯ ಬಗ್ಗೆ ಚಕಾರವೆತ್ತಬಾರದು. ಮಕ್ಕಳಿಗೆ ಮುಕ್ತವಾದ, ಒತ್ತಡ ರಹಿತವಾದ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಅನಿರ್ದಿಷ್ಟವಾದ ಕಲಿಕೆ ಮತ್ತು ಅವರ ಕೌಶಲ್ಯಕ್ಕೆ ಪೂರಕವಾದ ವಿದ್ಯಾಭ್ಯಾಸ ನೀಡಬೇಕು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು. ಅವರಿಗಿಷ್ಟವಾದ ಸೋಲುಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಬೇಕು. ಹಾಗಾದಲ್ಲಿ ಮಾತ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮೇಲೆ ನಿರೀಕ್ಷೆ ಮತ್ತು ಒತ್ತಡ ಕಡಿಮೆಯಾಗಿ ಆತ್ಮಹತ್ಯೆಯ ಪ್ರಮಾಣ ಇಳಿಮುಖವಾಗಬಹುದು ಮತ್ತು ಪ್ರತಿಭಾನ್ವಿತ ಯುವಶಕ್ತಿಯ ಅಕಾಲಿಕ ವಿನಾಶವನ್ನು ತಡೆಯಬಹುದು. ಅದರಲ್ಲಿಯೇ ನಮ್ಮ ದೇಶದ ಹಿತ ಅಡಗಿದೆ.

ಕಿವಿಮಾತು
ಇತ್ತೀಚೆಗೆ ಕೋಟಾದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ತಡೆಯಲು ಸೀಲಿಂಗ್ ಫ್ಯಾನ್ ಗಳಿಗೆ ಸ್ಪ್ರಿಂಗ್ ಅಳವಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜಕ್ಕೂ ಚೋದ್ಯದ ಸಂಗತಿ. ನಮ್ಮ ಚಿಂತನೆ ಮತ್ತು ದೃಷ್ಟಿಕೋನ ಬದಲು ಮಾಡದಿದ್ದಲ್ಲಿ ಆತ್ಮಹತ್ಯೆ ತಡೆಯಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ನಾವು ಅರಿತು ಬದಲಾವಣೆ ತಂದರೆ ಮಾತ್ರ ಸುಭೀಕ್ಷ ಸಾಮಾಜದ ನಿರ್ಮಾಣ ಸಾಧ್ಯವಾಗಬಹುದು… ಜೈ ಹಿಂದ್

ಡಾ|| ಮುರಲೀ ಮೋಹನ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು. 9845135787
ಮಂಗಳೂರು.

error: Content is protected !!
Scroll to Top