ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಚಿವ ರೈ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.22. ಜಿಲ್ಲೆಯ ಹಿಂದೂ ನಾಯಕರನ್ನು, ಕಾರ್ಯಕರ್ತರನ್ನು ಸುಳ್ಳು ಕೇಸು ಹಾಕಿ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಒತ್ತಡ ಹೇರಿರುವ ಸಚಿವ ರಮನಾಥ ರೈ ವಿರುದ್ದ ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗುರುವಾರ ಕಡಬ ತಹಶೀಲ್ದಾರ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಶೆಟ್ಟಿ ಕಡಬ, ನಮ್ಮನ್ನಾಳುವ ಸರಕಾರ ಕೋಮು ಸಂಘರ್ಷಕ್ಕೆ ಕುಮ್ಮಕು ನೀಡಿ ಸಮಾಜ ಶಾಂತಿ ಕದಡುತ್ತಿದೆ. ಮತೀಯ ಸಂಘರ್ಷವೇರ್ಪಟ್ಟ ತಕ್ಷಣ ಅಮಾಯಕ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲಾಗುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ಸಿಗರೇ ಕಾರಣ. ಇತ್ತೀಚೆಗೆ ಕಲ್ಲಡ್ಕದಲ್ಲಿ ನಡೆದ ಪ್ರಕರಣಕ್ಕೆ ಸಂಘ ಪರಿವಾರದ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮೂಲ ಕಾರಣ ಎಂದು ಬಿಂಬಿಸಿ ಕೇಸು ದಾಖಲಿಸಿ ಬಂಧಿಸುವಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗೆ ಸೂಚಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ನಡೆ ಖಂಡನೀಯ. ಇಂತಹ ಜನಪ್ರತಿನಿಧಿಗಳು ಜಿಲ್ಲೆಯ ಆಶಾಂತಿಗೆ ಕಾರಣಕರ್ತರಾಗಿದ್ದಾರೆ ಎಂದರು. ಎಪಿಎಂಸಿ ಮಾಜಿ ಸದಸ್ಯ ಸೀತರಾಮ ಗೌಡ ಪೊಸವಳಿಕೆ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರ ಕಗ್ಗೊಲೆಯಾಗುತ್ತಿದೆ. ಈ ಜಿಲ್ಲೆಯಲ್ಲಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಆಕ್ರಮಣಗಳು ಮಿತಿ ಮೀರಿದ್ದು, ಇದಕ್ಕೆ ಮೂಲ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಮತ್ತು ಸಚಿವ ಯು.ಟಿ. ಖಾದರ್. ಹಲ್ಲೆ ಕೊಲೆ ನಡೆಸಿದವವರನ್ನು ರಕ್ಷಿಸುವ ಕೆಲಸ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಇಂತಹ ಪಕ್ಷಾತೀತ ಧೋರಣೆಯಿಂದ ಜಿಲ್ಲೆಯಲ್ಲಿ ಶಾಂತಿ ಕದಡುವವರು ಯಾರು ಎಂಬುದು ಜನತೆಗೆ ಗೊತ್ತಾಗಿದೆ. ಇಂತಹ ಅಯೋಗ್ಯ ಮಂತ್ರಿಗಳನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು

ಕಡಬ ಶಕ್ತಿ ಕೇಂದ್ರ ಮಾಜಿ ಅಧ್ಯಕ್ಷ ಸತೀಶ್ ನಾಯಕ್ ಮಾತನಾಡಿದರು. ಕಡಬ ಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಕಾಶ್ ಎನ್ ಕೆ ಸ್ವಾಗತಿಸಿದರು. ಕಡಬ ಗ್ರಾಮ ಸಮಿತಿ ಅಧ್ಯಕ್ಷ ಎ.ಪಿ. ಗಿರೀಶ್ ಮನವಿ ವಾಚಿಸಿ, ವಂದಿಸಿದರು. ಪ್ರತಿಭಟನೆ ಬಳಿಕ ಸಚಿವ ರಮನಾಥ ರೈ ಅವರನ್ನು ಸಂಪುಟದಿಂದ ತಕ್ಷಣ ಕಿತ್ತೊಗೆಯಲು ಸರಕಾರಕ್ಕೆ ಆದೇಶ ಮಾಡಬೇಕಾಗಿ ರಾಜ್ಯಪಾಲರನ್ನು ಆಗ್ರಹಿಸಿದ ಮನವಿಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲು ಕಡಬ ತಹಶೀಲ್ದಾರರಿಗೆ ನೀಡಲಾಯಿತು.

error: Content is protected !!

Join WhatsApp Group

WhatsApp Share