(ನ್ಯೂಸ್ ಕಡಬ) newskadaba.com ಮಾಣಿ, ಆ. 22. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ನಾವೆಲ್ಲರೂ ಪರಸ್ಪರ ದ್ವೇಷ ಬಿಟ್ಟು ಸೌಹಾರ್ದಯುತವಾದ ಬದುಕನ್ನು ನಡೆಸಿದರೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಅನ್ಯೋನ್ಯತೆಯಿಂದ ಬಾಳಿ ಸಾಮರಸ್ಯ ಹಾಗೂ ಬಾಂಧವ್ಯ ಪೂರಿತವಾದ ಸಂತಸ, ಸುಂದರ ಬದುಕನ್ನು ಜಗತ್ತಿನಲ್ಲಿ ಕಟ್ಟುವ ಎಂದು ಖ್ಯಾತ ಚಿಂತಕರಾದ ತಮ್ಮಣ್ಣ ಶೆಟ್ಟಿ ಶಂಭುಗರವರು ಹೇಳಿದರು.
ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ವತಿಯಿಂದ ದಾರುಲ್ ಇರ್ಶಾದ್ ಮಾಣಿಯಲ್ಲಿ ಆದಿತ್ಯವಾರದಂದು ನಡೆದ “ಪ್ರಜಾಭಾರತ” ಕಾರ್ಯಕ್ರಮದಲ್ಲಿ ‘ದ್ವೇಷ ಬಿಟ್ಟು ದೇಶ ಕಟ್ಟು’ ಎಂಬ ಶೀರ್ಷಿಕೆಯಡಿಯಲ್ಲಿ ವಿಚಾರ ಸಂಕಿರಣ ವಿನಿಮಯ ಮಾಡಿದರು.
ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ, ದಾರುಲ್ ಇರ್ಶಾದ್ ಶಿಲ್ಪಿ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ದುಆಃ ನೆರೆವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಇಬ್ರಾಹಿಂ ಸಅದಿ ಮಾಣಿರವರು ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿ.ಪ. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರೂ, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಕಾರ್ಯದರ್ಶಿಯೂ ಆದ ಇಸ್ಮಾಯಿಲ್ ಮಾಸ್ಟರ್ ಮಂಗಳಪದವುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿ ರವರು ಬಾಲ್ಯದ ಸಾಮರಸ್ಯದ ನೆನಪುಗಳನ್ನು ಮೆಲುಕು ಹಾಕಿದರು. ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟೀಸ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ದಾರುಲ್ ಇರ್ಷಾದ್ ಮುದರ್ರಿಸ್ ಯಅ್‌ಕೂಬ್ ಸಅದಿ, ಹಿರಿಯ ವಿದ್ವಾಂಸರಾದ ಹಂಝ ಮದನಿ ಮಿತ್ತೂರು, ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಹಿರಿಯ ಸದಸ್ಯರಾದ ಸುಲೈಮಾನ್ ಸೂರಿಕುಮೇರು ರವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸದಸ್ಯರಾದ ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಮಾಣಿ ಸರ್ಕಲ್ ಉಪಾಧ್ಯಕ್ಷರಾದ ಯೂಸುಫ್ ಹಾಜಿ, ಕೋಶಾಧಿಕಾರಿ ಖಾಸಿಂ ಪಾಟ್ರಕೋಡಿ ಉಪಸ್ಥಿತರಿದ್ದರು. ಸರ್ಕಲ್ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದರು. ಆಗಮಿಸಿದ ಗಣ್ಯ ಅತಿಥಿಗಳಿಗೆ ಕಾರ್ಯಕ್ರಮ ನೆನಪಿಗಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸರ್ಕಲ್ ಕಾರ್ಯದರ್ಶಿ ಅಬ್ದುಲ್ ಕರೀಂ ಸೂರಿಕುಮೇರು ಸಹಕರಿಸಿದರು.