ಲಕ್ಷದ್ವೀಪಕ್ಕೆ ತೆರಳಿದ ಹಡಗು ನೀರುಪಾಲು ► ಆರು ಸಿಬ್ಬಂದಿಗಳ ರಕ್ಷಣೆ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.06. ಬಂದರಿನಿಂದ ಸರಕು ಸಾಗಿಸುತ್ತಾ ಲಕ್ಷದ್ವೀಪದತ್ತ ತೆರಳಿದ್ದ ಹಡಗು ಕಡಲಿನ ಪ್ರಕ್ಷುಬ್ಧ ಅಲೆಗೆ ಸಿಲುಕಿ ಭಾರೀ ಬಂಡೆಕಲ್ಲಿಗೆ ಬಡಿದು ಇಬ್ಬಾಗವಾಗಿ ನೀರುಪಾಲಾದ ಘಟನೆ ಸೋಮವಾರದಂದು ನಡೆದಿದೆ ಎನ್ನಲಾಗಿದೆ.

ಹಡಗಿನಲ್ಲಿದ್ದ ಆರು ಮಂದಿ ಸಿಬ್ಬಂದಿಗಳನ್ನು ಅಲ್ಲಿನ ಮೀನುಗಾರರು ಕ್ಷಿಪ್ರ ಕಾರ್ಯಾಚರಣೆ ಮೂಲಕ ರಕ್ಷಿಸಿದ್ದಾರೆ. ಲಕ್ಷದ್ವೀಪದ ಹಾದಿ ಮಧ್ಯೆ ಸಿಗುವ ಕಿಲ್ಟನ್ ಎಂಬಲ್ಲಿ ಸಿಲುಕಿಕೊಂಡ ನೌಕೆಯಿಂದ ಸರಕು ಖಾಲಿ ಮಾಡಲು ಬಹಳಷ್ಟು ಪ್ರಯತ್ನ ನಡೆದರೂ ಬಹುತೇಕ ಸರಕು ಕಡಲ ಪಾಲಾಗಿದೆ. ಬೆಂಗ್ರೆ ನಿವಾಸಿ ಸಿ.ಪಿ. ಮುಸ್ತಫಾ ಮಾಲಕತ್ವದ ‘ವಶೀಲಾ’ ಹೆಸರಿನ ನೌಕೆ ಜಲ್ಲಿ, ಮರಳು, ಸಿಮೆಂಟ್, ದಿನಬಳಕೆ ಸಾಮಗ್ರಿಗಳು ಸೇರಿದಂತೆ ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಸರಕು ಹೊತ್ತುಕೊಂಡು ಜನವರಿ 29ರಂದು ಧಕ್ಕೆಯಿಂದ ಹೊರಟಿತ್ತು. ಹಡಗಿನ ತಳಭಾಗ ಬಂಡೆಕಲ್ಲಿಗೆ ಬಡಿದು ಬಿರುಕು ಬಿಟ್ಟಿತ್ತು. ಇದರಿಂದ ನೀರು ಒಳನುಗ್ಗಲಾರಂಭಿಸಿ ಸಿಬ್ಬಂದಿಗಳಿಗೆ ಅಪಾಯದ ಮುನ್ಸೂಚನೆ ಸಿಕ್ಕಿತ್ತು. ಹಡಗಿನಲ್ಲಿದ್ದ ಗುಜರಾತಿನ ಡಿಕ್ಕರ್, ಹಂಝ, ಕೇರಳ ಮೂಲದ ಕೃಷ್ಣ ಮತ್ತು ಬೀರನ್ ಹಾಗೂ ಮಂಗಳೂರಿನ ಬಶೀರ್ ಮತ್ತು ಮೊಹಮ್ಮದ್ ಬಶೀರ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ರಕ್ಷಿಸುವಂತೆ ಇತರ ಮೀನುಗಾರರಿಗೆ ಮಾಹಿತಿ ರವಾನಿಸಿದ ಬಳಿಕ ಅವರನ್ನು ರಕ್ಷಣೆ ಮಾಡಲಾಗಿದೆ. ಹಡಗು ಮುಳುಗಡೆಯಿಂದ 10 ಲಕ್ಷ ರೂಪಾಯಿ ಮೌಲ್ಯದ ಸರಕು ಸೇರಿದಂತೆ ಸುಮಾರು 40 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

Also Read  ಕಡಬ: ಸ್ಕೂಟಿ ಹಾಗೂ ಓಮ್ನಿ ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ

error: Content is protected !!
Scroll to Top