(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿ ಹ್ಯಾಕರ್‌ಗಳ ಮೋಸಕ್ಕೆ ಸಿಲುಕಿ ಜೈಲು ಶಿಕ್ಷೆಗೊಳಗಾಗಿರುವ ಕಡಬ ಮೂಲದ ಚಂದ್ರಶೇಖರ್ ಅವರ ಬಿಡುಗಡೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡುಬಂದಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಉದ್ಯೋಗದಲ್ಲಿದ್ದ ಸದ್ಯ ಜೈಲಿನಲ್ಲಿರುವ ಕಡಬ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಅವರ ವಿರುದ್ಧ ದೂರು ನೀಡಿದ ಮಹಿಳೆಗೆ ವಂಚನೆಯಾದ ಮೊತ್ತವನ್ನು ಪಾವತಿಸಿ ಎನ್‌ಒಸಿ ಪಡೆದು ಅದನ್ನು ಪೊಲೀಸ್ ಹಾಗೂ ಜೈಲಾಧಿಕಾರಿಗೆ ನೀಡಬೇಕಾಗಿದೆ. ಈ ಕೆಲಸವನ್ನು ರಿಯಾದ್‌ನಲ್ಲಿ ಅವರ ಸ್ನೇಹಿತರು ಸೇರಿ ಮಾಡುತ್ತಿದ್ದು, ಎನ್‌ಒಸಿ ಸಿಕ್ಕಿದ ಬಳಿಕ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಚಂದ್ರಶೇಖರ್ ಅವರು ಕಳೆದ ನವೆಂಬರ್ ನಲ್ಲಿ ಮೊಬೈಲ್ ಹಾಗೂ ಸಿಮ್ ಕಾರ್ಡ್ ಪಡೆಯಲೆಂದು ಮೊಬೈಲ್ ಅಂಗಡಿಗೆ ಹೋಗಿದ್ದಾದ ಅವರಿಂದ ಹೆಬ್ಬೆಟ್ಟಿನ ಮುದ್ರೆಯನ್ನು ಪಡೆಯಲಾಗಿತ್ತು. ಅದನ್ನೇ ನೆಪವಾಗಿಸಿಕೊಂಡ ಮೋಸಗಾರರು ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಜಮೆ ಮಾಡಿ, ಅಲ್ಲಿಂದ ಬೇರೆ ದೇಶಕ್ಕೆ ಹಣ ವರ್ಗಾವಣೆ ಮಾಡಿದ್ದರು. ಈ ಕುರಿತು ಮಹಿಳೆ ನೀಡಿದ ದೂರಿನಂತೆ ಚಂದ್ರಶೇಖರ್ ಬಂಧಿತರಾಗಿದ್ದರು.