ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ – ಫೀಲ್ಡ್ಸ್ ಮೆಡಲ್ ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಆ. 18. ಗಣಿತ ಶಾಸ್ತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡುವ ವಿಶಿಷ್ಟ ಪದಕ ಇದಾಗಿದ್ದು, ಕೆನಡಾದ ಖ್ಯಾತ ಗಣಿತ ಶಾಸ್ತ್ರಜ್ಞ ಜಾನ್ ಚಾರ್ಲ್ಸ ಫೀಲ್ಡ್ಸ್ ಅವರ ಸ್ಮರಣಾರ್ಥ ನೀಡಲಾಗುತ್ತದೆ. 1924 ರಲ್ಲಿ ಈ ಪದಕವನ್ನು ಆರಂಭಿಸಲಾಗಿದ್ದು ಮೊದಲ ಬಾರಿ 1936ರಲ್ಲಿ ನೀಡಲಾಯಿತು. ಪ್ರತಿ 4 ವರ್ಷಕ್ಕೊಮ್ಮೆ ಈ ಪ್ರಶಸ್ತಿ ನೀಡಲಾಗುತ್ತಿದ್ದು ಕೊನೆ ಬಾರಿ 2022 ರಲ್ಲಿ ನೀಡಲಾಗಿದೆ. 40 ವರ್ಷದ ಕೆಳಗಿನ ಗಣಿತ ಶಾಸ್ತ್ರಜ್ಞರಿಗೆ ಮಾತ್ರ ಈ ಪದಕವನ್ನು ನೀಡಲಾಗುತ್ತದೆ. ಪ್ರತಿ 4 ವರುಷಕ್ಕೊಮ್ಮೆ ನಡೆಯುವ ಅಂತರಾಷ್ಟ್ರೀಯ ಗಣಿತ ಶಾಸ್ತ್ರ ಸಮ್ಮೇಳನ (ಕಾಂಗ್ರೆಸ್) ದಲ್ಲಿ ಅಂತರಾಷ್ಟ್ರೀಯ ಗಣಿತಶಾಸ್ತ್ರ ಯೂನಿಯನ್ ನಿಂದ ಈ ಪ್ರಶಸ್ತಿಯನ್ನು ಕನಿಷ್ಠ ಎರಡು, ಮೂರು ಅಥವಾ ಗರಿಷ್ಠ 4 ಮಂದಿ ಗಣಿತ ಶಾಸ್ತ್ರಜ್ಞರಿಗೆ ಮಾತ್ರ ಈ ಪದಕವನ್ನು ಪ್ರಧಾನ ಮಾಡಲಾಗುತ್ತದೆ. ಗಣಿತ ಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಗುವುದಿಲ್ಲ ಮತ್ತು ನೊಬೆಲ್ ಪ್ರಶಸ್ತಿ ಸರಿಸಮನಾದ ಪ್ರಶಸ್ತಿ ಇದಾಗಿದ್ದು, ಗಣಿತ ಶಾಸ್ತ್ರದಲ್ಲಿ ನೀಡಲಾಗುವ ಪರಮೋಚ್ಛ ಪ್ರಶಸ್ತಿ ಇದಾಗಿದೆ. ಇದೇ ಕಾರಣದಿಂದ ಫೀಲ್ಡ್ಸ್ ಮೆಡಲನ್ನು ಗಣಿತ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೂ ಪರಿಗಣಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯಲ್ಲಿ ಒಂದು ಕ್ಷೇತ್ರದಲ್ಲಿ ಒಬ್ಬರಿಗೆ ಮಾತ್ರ ನೀಡಲಾಗುತ್ತಿದ್ದು, ವಾರ್ಷಿಕವಾಗಿ ನೀಡಲಾಗುತ್ತದೆ ಮತ್ತು ಈ ಪ್ರಶಸ್ತಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಪಿಸಿಯೋಲಜಿ, ರಸಾಯನ ಶಾಸ್ತ್ರ (ಕೆಮಿಸ್ಟ್ರಿ), ಭೌತ ಶಾಸ್ತ್ರ (ಫಿಸಿಕ್ಸ್), ಮೆಡಿಸಿನ್ (ವೈದ್ಯಕೀಯಶಾಸ್ತ್ರ), ಸಾಹಿತ್ಯ, ಎಕಾನೊಮಿಕ್ಸ್ ಮತ್ತು ಶಾಂತಿ ಈ ವಿಭಾಗಗಳಲ್ಲಿ ಮಾತ್ರ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ.

ಮೊದಲ ಬಾರಿಗೆ ಫೀಲ್ಡ್ಸ್ ಮೆಡಲನ್ನು 1930 ರಲ್ಲಿ ಫಿನ್‍ಲ್ಯಾಂಡ್‍ನ ಗಣಿತಶಾಸ್ತ್ರಜ್ಞ ಲಾರ್ಸ್ ಅಲ್ಫೋರ್ಸ್ ಮತ್ತು ಅಮೇರಿಕಾದ ಗಣಿತಜ್ಞ ಜೆಸ್ಸಿ ಡಗ್ಲಾಸ್ ಅವರಿಗೆ ನೀಡಲಾಯಿತು. 1950 ರಿಂದ ಈ ಪದಕವನ್ನು ಪ್ರತಿ 4 ವರುಷಗಳಿಗೊಮ್ಮೆ ನೀಡಲು ಆರಂಭಿಸಲಾಯಿತು. 2014 ರಲ್ಲಿ ಮೊದಲ ಬಾರಿ ಇರಾನಿನ ಮಹಿಳೆ ಮರಿಯಮ್ ಮಿರ್ಜಾಖಾನಿ ಎಂಬಾಕೆ ಫೀಲ್ಡ್ಸ್ ಮೆಡಲ್ ಪಡೆದರು. ಕೊನೆ ಬಾರಿ 2022, ಜುಲೈ 5 ರಂದು ಫೀಲ್ಡ್ಸ್ ಮೆಡಲನ್ನು ಆನ್ ಲೈನ್ ಮುಖಾಂತರ ನಾಲ್ವರು ಗಣಿತ ಶಾಸ್ತ್ರಜ್ಞರಿಗೆ ಫಿನ್‍ಲ್ಯಾಂಡ್‍ ನ ಹೆಲ್ಸೆಂಕಿಯಲ್ಲಿ ಪ್ರಧಾನ ಮಾಡಲಾಯಿತು. ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್‍ನಲ್ಲಿ ನಡೆಯಬೇಕಾಗಿದ್ದ ಈ ಸಮಾರಂಭ, ರಷ್ಯಾ ಮತ್ತು ಉಕ್ರೇನ್ ನಡುವಿನ ಕಲಹದ ಕಾರಣದಿಂದ ಫಿನ್‍ಲ್ಯಾಂಡ್‍ಗೆ ಸ್ಥಳಾಂತರಗೊಂಡಿತ್ತು.

Also Read  ಕಾಸರಗೋಡು: ಬೈಕ್ ಹಾಗೂ ವ್ಯಾನ್ ನಡುವೆ ಢಿಕ್ಕಿ ➤ ಸವಾರ ಮೃತ್ಯು

ಕಳೆದ 87 ವರ್ಷಗಳಲ್ಲಿ ಸುಮಾರು 64 ಮಂದಿಗೆ ಈ ಫೀಲ್ಡ್ಸ್ ಮೆಡಲ್ ನೀಡಲಾಗಿದ್ದು, ಭಾರತ ಸಂಜಾತ ಇಬ್ಬರಿಗೆ ಮಾತ್ರ ಈ ಪ್ರಶಸ್ತಿ ಒಲಿದು ಬಂದಿದೆ. 2018 ರಲ್ಲಿ ಅಮೇರಿಕಾದ ಪ್ರಿನ್ಸ್ಟನ್ ವಿಶ್ವ ವಿದ್ಯಾಲಯದ ಅಕ್ಷಯ ವೆಂಕಟೇಶ್ ಮತ್ತು 2014 ರಲ್ಲಿ ಪ್ರಿನ್ಸ್ಟನ್ ವಿಶ್ವ ವಿದ್ಯಾಲಯದ  ಮಂಜು ಭಾರ್ಗವ ಅವರಿಗೆ ಈ ಗೌರವ ಸಂದಿದೆ. 63.5mm ಸುತ್ತಳತೆಯ, 169 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದಿಂದ ಮಾಡಲಾದ ಈ ಪದಕದಲ್ಲಿ ಗಣಿತ ಶಾಸ್ತ್ರದ ಪಿತಾಮಹ ಆರ್ಕಿಮಿಡೀಸ್ ಅವರ ಭಾವ ಚಿತ್ರ ಒಂದು ಬದಿಯಲ್ಲಿ ಇದೆ. ಈ ಪದಕದ ಮೂಲ ವಿನ್ಯಾಸವನ್ನು ಜಾನ್ ಚಾರ್ಲ್ಸ್ ಫೀಲ್ಡ್ಸ್ ಅವರೇ ಮಾಡಿರುತ್ತಾರೆ. ಆ ಬಳಿಕ ಕೆನಡಾದ ಶಿಲ್ಪಿ  ಟೈಟ್ ಮೆಕಿಂಝಿ ಅವರು ವಿನ್ಯಾಸವನ್ನು ಮಾರ್ಪಾಡು ಮಾಡಿ ಹೊಸ ರೂಪವನ್ನು ನೀಡಿದರು. 2006 ರಿಂದ ಈ ಪ್ರಶಸ್ತಿಯ ಮೊತ್ತವನ್ನು ಕೆನಡಿಯನ್ ಡಾಲರ್ 15,000 ಕ್ಕೆ ಏರಿಸಲಾಗಿದೆ. (ಸುಮಾರು ಹತ್ತು ಲಕ್ಷ ರೂಪಾಯಿಗಳು). ಈ ಪದಕದ ಸುತ್ತಲಿನ ವೃತ್ತದಲ್ಲಿ ಪದಕ ವಿಜೇತರ ಹೆಸರನ್ನು ಕೆತ್ತಲಾಗುತ್ತದೆ. ಪದಕ ಇನ್ನೊಂದು ಭಾಗದಲ್ಲಿ ಆರ್ಕಿಮಿಡೀಸ್ ಸಮಾಧಿಯನ್ನು ಆಲಿವ್ ಗಿಡದ ಕೊಂಬೆಯ ಚಿತ್ರದ ಹಿನ್ನಲೆಯಲ್ಲಿ ಕೆತ್ತಲಾಗಿದೆ.

ಕೊನೆ ಮಾತು:

ಗಣಿತ ಶಾಸ್ತ್ರ ಎನ್ನುವುದು ಹೆಚ್ಚಿನವರಿಗೆ ಕಬ್ಬಿಣದ ಕಡಲೆ ಎಂದರೂ ಅತಿಶಯೋಕ್ತಿಯಾಗಲಾರದು.  ಹೆಚ್ಚಿನ ವಿದ್ಯಾರ್ಥಿಗಳು ಗಣಿತ ಶಾಸ್ತ್ರ ಎಂದು ಕೂಡಲೇ ಬೆಚ್ಚಿ ಬೀಳುತ್ತಾರೆ ಮತ್ತು ಅದನ್ನು ಕಲಿಯುವ ಗೋಜಿಗೆ ಹೋಗುವುದಿಲ್ಲ. ಗಣಿತ ಶಾಸ್ತ್ರವನ್ನು ಮೂಲ ವಿಜ್ಞಾನದ ರಾಣಿ ಎಂದೂ ಸಂಬೋಧಿಸಲಾಗುತ್ತದೆ. ಭೌತ ಶಾಸ್ತ್ರವನ್ನು ಮೂಲ ವಿಜ್ಞಾನಗಳ ರಾಜ ಎಂದೂ ಕರೆಯಲಾಗುತ್ತದೆ. ಅರ್ಕಿಮಿಡಿನ್ ಅವರನ್ನು ವಿಶ್ವದ ಗಣಿತ ಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಅರ್ಕಿಮಿಡಿನ್ ಅವರು ಗ್ರೀಕ್ ಗಣಿತ ಶಾಸ್ತ್ರಜ್ಞನಾಗಿದ್ದು, ಕ್ರಿಸ್ತ ಪೂರ್ವ 287 ರಿಂದ 212 ರ ಕಾಲಘಟ್ಟದಲ್ಲಿ ಬದುಕಿದ್ದರು. ನಮ್ಮ ಭಾರತ ದೇಶದಲ್ಲಿ ಆರ್ಯಭಟ ಅವರನ್ನು ಗಣಿತ ಶಾಸ್ತ್ರದ ಪಿತಾಮಹ ಎಂದೂ ಸಂಬೋಧಿಸಲಾಗುತ್ತದೆ.  ಭಾರತ ದೇಶ ಕಂಡ ಅಪ್ರತಿಮ ಗಣಿತ ಶಾಸ್ತ್ರಜ್ಞರಲ್ಲಿ ಶ್ರೀನಿವಾಸನ್ ರಾಮನುಜನ್ ಅವರು ಅಗ್ರಗಣ್ಯರು. ಅವರು ಕೇವಲ 32 ವರ್ಷ ಬದುಕಿದ್ದರು ಮತ್ತು 1920 ರಲ್ಲಿ ಅಕಾಲಿಕವಾಗಿ ಮರಣ ಹೊಂದಿದರು. ಇಲ್ಲವಾದಲ್ಲಿ  ಅವರಿಗೆ ಫೀಲ್ಡ್ಸ್  ಮೆಡಲ್ ಖಂಡಿತವಾಗಿಯೂ ಓಲಿಯುತ್ತಿತ್ತು. ಗಣಿತ ಶಾಸ್ತ್ರ ಅಥವಾ ಮ್ಯಾಥಮ್ಯಾಟಿಕ್ಸ್ ಎಂಬ ಶಬ್ದವನ್ನು ಜಗತ್ತು ಕಂಡ ಶ್ರೇಷ್ಠ ಗಣಿತಜ್ಞ ಶ್ರೀ ಪೈಥಾಗೋರಸ್ ಅವರು ಮೊದಲು ಬಳಸಿದರು. ಗ್ರೀಕ್ ಮೂಲದ ‘ಮಾಥೆಮಾ’ ಎಂಬ ಶಬ್ದದಿಂದ ಈ ಮ್ಯಾಥಮ್ಯಾಟಿಕ್ಸ್ ಶಬ್ದ ಉಗಮವಾಯಿತು. ಮಾಥೆಮಾ ಅಂದರೆ “Subject Of Instruction (ಕಲಿಯುವಿಕೆ) ಅಂದರೆ ಸೂಚನೆ ನೀಡುವ ವಿಷಯ ಎಂಬುದಾಗಿದೆ. ಗಣಿತ ಶಾಸ್ತ್ರದ ಒಂದು ಅವಿಭಾಜ್ಯ ಅಂಗವಾದ ನಂಬರ್ ಥಿಯರಿಯನ್ನು ‘ಗಣಿತ ಶಾಸ್ತ್ರದ ರಾಣಿ” ಎಂದೂ ಗಣಿತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Also Read  ಅಕ್ರಮ ಮೂವರು ಬಾಂಗ್ಲಾ ವಲಸಿಗರ ಬಂಧನ..!

ಗಣಿತ ಶಾಸ್ತ್ರದ ಪ್ರಾಮುಖ್ಯತೆ ಮತ್ತು ಬಳಕೆ ನಮ್ಮ ದಿನನಿತ್ಯದ ಜೀವನದಲ್ಲಿ ಅತಿ ಅಗತ್ಯ ಮತ್ತು ಕಂಪ್ಯೂಟರ್ ನಿಂದ ಹಿಡಿದು  ಬಾಹ್ಯಾಕಾಶ ಯಾನಕ್ಕೂ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಮಕ್ಕಳು ಈ ಗಣಿತಶಾಸ್ತ್ರ ಕಲಿಯಲು ಮುಂದಾಗಬೇಕು. ಇನ್ನೂ ತಮ್ಮ  ಮಕ್ಕಳು ವೈದ್ಯ ಅಥವಾ ಇಂಜಿನಿಯರ್ ಆಗಲಿ ಎಂದು ಹೆತ್ತವರು ಮಕ್ಕಳ ಮೇಲೆ ಒತ್ತಡ ಹಾಕಿ ದೇಶದ ಮತ್ತು ಮಗುವಿನ ಭವಿಷ್ಯವನ್ನು ಹಾಳು ಮಾಡಬಾರದು. ಮಕ್ಕಳ ಆಸಕ್ತಿಯನ್ನು  ಗುರುತಿಸಿ ಗೌರವಿಸಿ ಪ್ರೋತ್ಸಾಹ ನೀಡುವ ಕೆಲಸವನ್ನು ಹೆತ್ತವರು ಮಾಡಲೇಬೇಕು. ಹಾಗಾದಲ್ಲಿ ಮಾತ್ರ ಹೊಸ ಹೊಸ ಸಂಶೋಧನೆಗಳು ನಡೆದು, ವಿಜ್ಞಾನ, ವೈದ್ಯಕೀಯ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಕಾರಿ ಬದಲಾವಣೆ ಬರಲು ಸಾಧ್ಯವಾಗಬಹುದು. ಅದರಲ್ಲಿಯೇ ದೇಶದ ಮತ್ತು ವಿಶ್ವದ ಶಾಂತಿ ಅಡಗಿದೆ.

Also Read  ಬ್ಲಾಕ್ ಫಂಗಸ್‍ಗೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಔಷಧ ಪೂರೈಕೆ ➤ ಡಿವಿಎಸ್

ಡಾ|| ಮುರಲೀ ಮೋಹನ್‍ಚೂಂತಾರು                                                                                MDS,DNB,MOSRCSEd(U.K), FPFA, M.B.A

ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು.

error: Content is protected !!
Scroll to Top