(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪದಕ ಪಡೆದ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಕೇಂದ್ರ ಸರ್ಕಾರದಿಂದ ನಿಯೋಜಿಸಲ್ಪಟ್ಟ ತಂಡದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳ 2023-24 ನೇ ಸಾಲಿನ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಗೆ ಅರ್ಹರಿರುವ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಪ್ರಥಮ ಪಿಯುಸಿಯಿಂದ ಸ್ನಾತಕೋತ್ತರ ಪದವಿ (ವೃತ್ತಿಪರ ಕೋರ್ಸ್‍ಗಳನ್ನು ಒಳಗೊಂಡಂತೆ) ವ್ಯಾಸಂಗ ಮಾಡುತ್ತಿರುವ ಕೇಂದ್ರ ರಾಜ್ಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ ಕಾಲೇಜುಗಳ ಕ್ರೀಡಾ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಆದರೆ ಯಾವುದೇ ಆಹ್ವಾನ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಈ ಯೋಜನೆಗೆ ಅರ್ಹರಿರುವುದಿಲ್ಲ. ವಿಕಲಚೇತನ ಕ್ರೀಡಾಪಟುಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ವಿಕಲಚೇತನ ಕ್ರೀಡಾಪಟುಗಳು ಕಡ್ಡಾಯವಾಗಿ ಸರ್ಕಾರಿ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಮಂಗಳೂರು ಕಚೇರಿಯಿಂದ ಪಡೆದು ದೃಢೀಕೃತ ದಾಖಲೆಗಳೊಂದಿಗೆ ಸೆಪ್ಟೆಂಬರ್ 15 ರೊಳಗೆ ಮಂಗಳ ಕ್ರೀಡಾಂಗಣ ಮಂಗಳೂರು ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.