ಹ್ಯಾಕರ್ಸ್ ಗಳ ಮೋಸದಾಟಕ್ಕೆ ಬಲಿಯಾದ ಕಡಬದ ಯುವಕ- ಕಂಬಿ ಎಣಿಸುವ ಪರಿಸ್ಥಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಸ್ವಂತ ದುಡಿಮೆಯ ಮೂಲಕ ಕುಟುಂಬ ನಿರ್ವಹಿಸಬೇಕು. ಅದರ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಕಡಬ ಮೂಲದ ಯುವಕನೋರ್ವ ವಿದೇಶದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದನು. ಅದರಂತೆ ಸೌದಿ ಅರೇಬಿಯಾದಲ್ಲಿ ಉತ್ತಮ ಉದ್ಯೋಗ ದೊರೆತು ಕೈತುಂಬಾ ಸಂಪಾದನೆಯೂ ಪಡೆಯುತ್ತಿದ್ದನು. ಆದರೆ, ಇದೀಗ ಹ್ಯಾಕರ್ಸ್ ಗಳ ಮೋಸದಾಟಕ್ಕೆ ಸಿಲುಕಿದ ಆತ ಜೈಲುಕಂಬಿಗಳನ್ನು ಎಣಿಸುವ ಪರಿಸ್ಥಿತಿಗೆ ಬಂದು ತಲುಪಿದ್ದಾನೆ.

ಹೌದು, ಈತ ಕಡಬ ತಾಲೂಕಿನ ಐತ್ತೂರು ಗ್ರಾಮದ ಮುಜೂರು ದಿ. ಕೆಂಚಪ್ಪ ಗೌಡ ಹಾಗು ಹೇಮಾವತಿ ದಂಪತಿಯ ಪುತ್ರ ಚಂದ್ರಶೇಖರ್ ಎಮ್. ಕೆ. ಇವರು, ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಹ್ಯಾಕರ್ ಗಳ ಮೋಸದಾಟಕ್ಕೆ ಸಿಲುಕಿದ ಅವರು, 2022ರ ನವೆಂಬರ್ ನಿಂದ ರಿಯಾದ್ ನ ಜೈಲಿನಲ್ಲೇ ದಿನ ಕಳೆಯುವ ದುಸ್ಥಿತಿ ಬಂದೊದಗಿದ್ದು, ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.


ಚಂದ್ರಶೇಖರ್ ಕಳೆದ ವರ್ಷ ಮೊಬೈಲ್ ಮತ್ತು ಸಿಮ್ ಖರೀದಿಗಾಗಿ ರಿಯಾದ್ ನ ಮೊಬೈಲ್ ಅಂಗಡಿಯೊಂದಕ್ಕೆ ತೆರಳಿದ್ದು, ಈ ಸಂದರ್ಭ ಚಂದ್ರಶೇಖರ್ ಅವರಿಂದ 2 ಬಾರಿ ತಂಬ್ ನ್ನು ಪಡೆಯಲಾಗಿತ್ತು. ಒಂದು ವಾರದ ಬಳಿಕ ಅವರ ದೂರವಾಣಿ ಸಂಖ್ಯೆಗೆ ಅರೆಬಿಕ್ ಭಾಷೆಯಲ್ಲಿ ಸಂದೇಶವೊಂದು ಬಂದಿದ್ದು, ಅದನ್ನು ಕ್ಲಿಕ್ ಮಾಡಿದ ಚಂದ್ರಶೇಖರ್ ಬಳಿ ಸಿಮ್ ಕುರಿತ ಮಾಹಿತಿ ಹಾಗೂ ಒಟಿಪಿ ಯನ್ನು ಕೇಳಿದ್ದಾರೆ. ಇದರಂತೆ ಓಟಿಪಿ ಕೊಟ್ಟ ಚಂದ್ರಶೇಖರ್ ಬಳಿಕ ತಮ್ಮ ಕೆಲಸಕ್ಕೆ ತೆರಳಿದ್ದರು. ಇದರ ಜತೆ ತಮ್ಮ ನಿಶ್ಚಿತಾರ್ಥ ಮತ್ತಿತರ ಕೆಲಸದಲ್ಲಿ ಮಗ್ನರಾಗಿದ್ದರು. ಈ ನಡುವೆ ಅಚಾನಕ್ ಆಗಿ ಒಂದು ದಿನ ಪೊಲೀಸರು ಏಕಾಏಕಿ ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.

Also Read  ಟಿ20 ಕ್ರಿಕೆಟ್ ಗೆ ರೋಹಿತ್‌ ಶರ್ಮಾ ಶೀಘ್ರ ವಿದಾಯ..!

ಯಾರೋ ವಂಚಕರು ರಿಯಾದ್ ದೇಶದಲ್ಲಿ ಚಂದ್ರಶೇಖರ್ ಅವರಿಗೆ ತಿಳಿಯದಂತೆ ಚಂದ್ರಶೇಖರ್ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದಿದ್ದು, ಮತ್ತು ಅದೇ ದೇಶದ ಮಹಿಳೆಯೊಬ್ಬರ 22 ಸಾವಿರ ಈ ಖಾತೆಗೆ ಜಮೆಯಾಗಿ, ಕೂಡಲೇ ಅದರಿಂದ ಬೇರೆ ಯಾವುದೋ ದೇಶಕ್ಕೆ ವರ್ಗಾವಣೆಯಾಗಿತ್ತು. ಇತ್ತ ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ರವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಚಂದ್ರಶೇಖರ್ ಅವರ ಮೇಲೆ ದೂರನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಹ್ಯಾಕರ್ಸ್ ಗಳ ಮೋಸದಾಟಕ್ಕೆ ಬಲಿಯಾದ ಚಂದ್ರಶೇಖರ್ ಅವರು ಜೈಲಿನಲ್ಲಿ ಬಂಧಿಯಾಗಿದ್ದಾರೆ. ಇತ್ತ ಮಗನ ಆಗಮನಕ್ಕಾಗಿ ಕಾಯುತ್ತಿರುವ ತಾಯಿ, ಮಗನನ್ನು ಬಿಡಿಸಿಕೊಳ್ಳಲು ಕಳೆದ 8 ತಿಂಗಳಿಂದ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ.

Also Read  ಪ್ರಧಾನಮಂತ್ರಿ ಜನ್ ಸುರಕ್ಷಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ➤ ಡಾ.ಕುಮಾರ್

ಇತ್ತ ಚಂದ್ರಶೇಖರ್ ದುಡಿಯುತ್ತಿದ್ದ ರಿಯಾದ್ ಕಂಪನಿಯೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೇ ಅನ್ಯಾಯ ಮಾಡಿದೆ ಎಂದು ಚಂದ್ರಶೇಖರ್ ಅವರ ತಾಯಿ ಕಣ್ಣೀರಿಡುತ್ತಿದ್ದಾರೆ. ಇನ್ನು ಯುವಕ ಚಂದ್ರಶೇಖರ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಕೇಂದ್ರ ಸರಕಾರ, ವಿದೇಶಾಂಗ ಸಚಿವರು ಒತ್ತಡ ಹಾಕಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಗಿದೆ. ಆ ಮೂಲಕ ಯಾವುದೇ ತಪ್ಪು ಮಾಡದೇ ಸೆರೆವಾಸವನ್ನು ಅನುಭವಿಸುತ್ತಿರುವ ಯುವಕನಿಗೆ ನ್ಯಾಯ ಒದಗಿಸುವಂತೆ ಎಂಡೋ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

error: Content is protected !!
Scroll to Top