(ನ್ಯೂಸ್ ಕಡಬ) newskadaba.com ಮಂಗಳೂರು, ಆ. 15. ಡಿಸಿ, ಎ.ಸಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ವಾರದಲ್ಲಿ ದಿನವೊಂದನ್ನು ನಿಗದಿಪಡಿಸಿಕೊಂಡು ಪ್ರಕರಣಗಳ ವಿಚಾರಣೆ ನಡೆಸಬೇಕು, ಅಂದು ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಮುಂದೂಡಲೇಬಾರದು. ವಿಚಾರಣೆ ನಡೆಸಿ ಇತ್ಯರ್ಥಪಡಿಸುವ ಮೂಲಕ ಸಾರ್ವಜನಿಕರಿಗೆ ಆಡಳಿತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅವರು ಸೋಮವಾರದಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಸಹಾಯಕ ಆಯುಕ್ತರ ವ್ಯಾಪ್ತಿಯಲ್ಲಿ ಹೆಚ್ಚಿನ ನ್ಯಾಯಾಲಯ ಪ್ರಕರಣಗಳು ವಿಚಾರಣೆಗಾಗಿ ಬಾಕಿ ಉಳಿದಿವೆ. ಗಣಕೀಕರಣ ಕಾಲದಲ್ಲೂ ಹೆಚ್ಚಿನ ಪ್ರಕರಣಗಳು ಬಾಕಿ ಉಳಿಸಿಕೊಳ್ಳಬಾರದು. ಅವುಗಳನ್ನು ಇತ್ಯರ್ಥ ಪಡಿಸುವಲ್ಲಿ ಎದುರಾಗುವ ಸವಾಲುಗಳೇನು, ನಿಮಗಿರುವ ಅಧಿಕಾರವೆಷ್ಟು ಎಂಬುದನ್ನು ಪರಿಶೀಲಿಸಿಕೊಳ್ಳಿ, ಸ್ಥಳೀಯ ಬಾರ್ ಅಸೋಸಿಯೇಷನ್‍ನ ಸಹಕಾರದೊಂದಿಗೆ ದಾಖಲಾಗುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ, ನಿರಂತರವಾಗಿ ಅವುಗಳನ್ನು ಬಾಕಿ ಉಳಿಸಬೇಡಿ. ಬಹು ದೂರದಿಂದ ಬರುವ ಕಕ್ಷಿದಾರರು ಪ್ರಕರಣ ಇತ್ಯರ್ಥಕ್ಕೆಂದೇ ಬರುತ್ತಾರೆ. ಅದಕ್ಕಾಗಿ ಅವರು ಸಾಕಷ್ಟು ಸಮಯ ಹಾಗೂ ಹಣವನ್ನು ವಿನಿಯೋಗಿಸುತ್ತಾರೆ, ಅವರ ಈ ಶ್ರಮವನ್ನು ವ್ಯರ್ಥ ಮಾಡಬಾರದು ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಕಳೆದ 7-8 ತಿಂಗಳಲ್ಲಿ ಪ್ರಕರಣಗಳ ವಿಚಾರಣೆಯಾಗದ ಕಾರಣ ಸಾಕಷ್ಟು ಬಾಕಿ ಉಳಿದಿವೆ ಎಂದರು. ಬೆಳ್ತಂಗಡಿ ತಾಲೂಕಿನಲ್ಲಿ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಅಧಿಕಾರಿಗಳು ಒತ್ತುವರಿಯಾಗಿದೆ ಎಂದು ಹೇಳಲಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅದು ಸರ್ಕಾರಿ ಜಾಗವಾಗಿದ್ದರೆ ಮರಳಿ ವಶಕ್ಕೆ ಪಡೆಯುವಂತೆ ಸೂಚಿಸಿದರು. ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳು ಇನ್ನು ಮುಂದೆ ಕಡ್ಡಾಯವಾಗಿ ಇ-ಆಫೀಸ್ (ಪೇಪರ್ ಲೆಸ್) ನಲ್ಲಿಯೇ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದ ಅವರು, ಯಾವ ಕಚೇರಿಯಲ್ಲಿ ಇ-ಆಫೀಸ್ ಅನುಷ್ಠಾನಕ್ಕೆ ತೊಡಕಾಗಿದೆ, ಯಾವ ಕಾರಣಕ್ಕಾಗಿ ಅದು ಆಗಿದೆ ಎಂಬುದನ್ನು ಲಿಖಿತವಾಗಿ ನೀಡುವಂತೆ ತಿಳಿಸಿದರು. ಸರ್ಕಾರದ ಮಟ್ಟದಲ್ಲಿ ಎಲ್ಲಾ ಇಲಾಖೆಗಳು ಈಗ ಇ-ಕಚೇರಿಗಳ ಮೂಲಕವೇ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಇಲಾಖೆಯವರು ಇ-ಆಫೀಸ್ ಮೂಲಕ ಕಡತ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಗಳಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಕ್ಯಾಂಪ್‍ಗಳನ್ನು ಆಯೋಜಿಸಿ, ಅಲ್ಲಿ ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ವಿವಿಧ ಯೋಜನೆಗಳಲ್ಲಿ ನೋಂದಾಯಿಸಿ ಪಿಂಚಣಿ ನೀಡಬೇಕು, ಜನನ ಹಾಗೂ ಮರಣ ದಾಖಲೆಗಳನ್ನು ನಿಮ್ಮಲ್ಲಿಯೇ ಲಭ್ಯವಿರುತ್ತವೆ. 60 ವರ್ಷ ಪೂರ್ಣಗೊಂಡವರನ್ನು ಪತ್ತೆ ಮಾಡಿ ಅರ್ಹರನ್ನು ಪಿಂಚಣಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭೂ ಪರಿವರ್ತನೆ ಪ್ರಕರಣಗಳಲ್ಲಿ ಸಾರ್ವಜನಿಕ ಒತ್ತುವರಿ, ರಸ್ತೆ ಇತ್ಯಾದಿ ಅಗತ್ಯ ಸೌಲಭ್ಯಗಳನ್ನು ಪರಿಶೀಲಿಸಿಕೊಂಡು ಅವುಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಬೇಕು, ಜಿಲ್ಲೆಯಲ್ಲಿ ಜಲ ಮೂಲಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕೆರೆಗಳನ್ನು ರಕ್ಷಿಸಲು ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದರು. ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಮಲೇರಿಯಾ-ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಪಚ್ಚತೆ ಕಾಪಾಡುವ ಮೂಲಕ ಈ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು, ಅದೇ ರೀತಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಂದರು, ಕುದ್ರೋಳಿ ಹಾಗೂ ಶಕ್ತಿನಗರದಲ್ಲಿ ಈ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಅಲ್ಲಿ ಮಹಾನಗರ ಪಾಲಿಕೆಯವರು ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು. ಬ್ಲಡ್ ಬ್ಯಾಂಕ್‍ಗಳಲ್ಲಿ ಅಗತ್ಯ ರಕ್ತ ಲಭಿಸುವಂತಿರಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣ ಕಡಿಮೆಯಾಗಿದೆ ಎಂದರು. ಆಸ್ಪತ್ರೆಯಲ್ಲಿ ಔಷಧಿಗಳು, ಶಸ್ತ್ರಚಿಕತ್ಸಾ ಉಪಕರಣಗಳ ಸ್ಥಿತಿ-ಗತಿಗಳ ಬಗ್ಗೆ ಜಿಲ್ಲಾ ಶಸ್ತಚಿಕಿತ್ಸಕ ಸದಾಶಿವ ಶಾನುಬೋಗ್ ಅವರಿಂದ ಖಚಿತಪಡಿಸಿಕೊಂಡ ಅವರು, ವೆನ್‍ಲಾಕ್ ಆಸ್ಪತ್ರೆಯಲ್ಲಿ ಪ್ರತಿದಿನ 800 ರಿಂದ 900 ಹೊರರೋಗಿಗಳು ಹಾಗೂ ಪ್ರತಿಮಾಹೆ 600ಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸೆ ಆಗುವ ಬಗ್ಗೆ ಮಾಹಿತಿ ಪಡೆದರು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆಗೊಳಗಾಗದಂತೆ ಎಚ್ಚರ ವಹಿಸಬೇಕು. ಆಸ್ಪತ್ರೆಯ ಸ್ವಚ್ಛತೆ ಕಾಪಾಡುವಂತೆಯೂ ಸೂಚಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಶಿಕ್ಷಣ ಸೂಚ್ಯಂಕದಲ್ಲಿ ಇಳಿಮುಖವಾದ ಬಗ್ಗೆ ಪ್ರಸ್ತಾಪವಾಗಿತ್ತು. ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಣ ಇಲಾಖೆಯಿಂದ ಉತ್ತಮ ಕ್ರಮಗಳನ್ನು ರೂಪಿಸಬೇಕು. ಕ್ಷೀರಭಾಗ್ಯ, ಮೊಟ್ಟೆ ವಿತರಣೆಯಲ್ಲಿ ಯಾವುದೇ ಲೋಪ ಕಂಡುಬರಬಾರದು. ಜಿಲ್ಲೆಯಲ್ಲಿನ ಶಿಥಿಲಗೊಂಡ ಶಾಲಾ ಕೊಠಡಿಗಳ ದುರಸ್ತಿಯಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಡಿಡಿಪಿಐಗೆ ತಾಕೀತು ಮಾಡಿದರು.
ನದಿ ಪಾತ್ರದ 50 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಇತ್ತೀಚೆಗೆ ಟೈಲ್ಸ್ ಫ್ಯಾಕ್ಟರಿಯೊಂದಕ್ಕೆ ಅವಕಾಶ ನೀಡಿರುವ ಬಗ್ಗೆ ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ಬಂದರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನು ಗುರುತಿಸಿ, ಅವರನ್ನು ಒಂದೊಂದು ತಾಲೂಕುಗಳ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು, ಅವರು ತಮ್ಮ ಇಲಾಖೆಯ ಕಾರ್ಯ ಚಟುವಟಿಕೆಯೊಂದಿಗೆ ಅವರಿಗೆ ವಹಿಸಲಾದ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆಯ ಮೂಲಕ ನಡೆಯುವ ಹಾಸ್ಟೇಲ್‍ಗಳಿಗೆ ಭೇಟಿ ನೀಡಿ, ಕಟ್ಟಡದ ಸ್ಥಿತಿಗತಿಗಳು, ಅಲ್ಲಿನ ಕುಂದುಕೊರತೆಗಳು, ಅಲ್ಲಿ ನೀಡುವ ಊಟ ಉಪಹಾರ ಸೇವಿಸುವುದು, ಅಲ್ಲಿಯ ಸ್ವಚ್ಛತೆಯ ಬಗ್ಗೆ ವರದಿ ನೀಡವುದು ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವರದಿ ನೀಡುವಂತಹ ಕೆಲಸ ಮಾಡಬೇಕು. ಪ್ರತಿ ಹಾಸ್ಟೆಲ್ ನಲ್ಲಿ ಮೆನು ಇರಲೇಬೇಕು. ಅದೇ ರೀತಿ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಹಾಗೂ ಆಹಾರ ಸುರಕ್ಷಿತವಾಗಿರುವ ಬಗ್ಗೆ ಖಾತ್ರಿ ಪಡಿಸಬೇಕು ಎಂದರು.
ಹೆಲ್ತ್ ಇಂಜಿನಿಯರಿಂಗ್ ವಿಭಾಗದಿಂದ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಪಟ್ಟಿ ಪಡೆಯುವಂತೆ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ತಿಳಿಸಿದ ಅವರು, ಈ ಕಟ್ಟಡಗಳ ನಿರ್ಮಾಣ ಟೆಂಡರ್ ನಲ್ಲಿ ಅಂಗೀಕರಿಸಿದಂತೆ ಆಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಆಗಿಂದಾಗೆ ಕಟ್ಟಡಗಳಿಗೆ ಭೇಟಿ ನೀಡಿ ನಿರ್ಮಾಣ ಕಾರ್ಯವನ್ನು ಪರಿಶೀಲಿಸಬೇಕು ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್, ಪ್ರಬೋಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್ ವೇದಿಕೆಯಲ್ಲಿದ್ದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.