(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.05. ನಾಡ ದೋಣಿಯನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಹಾಗೂ ಕಂದಾಯ ಇಲಾಖಾಧಿಕಾರಿಗಳು 15 ಲಕ್ಷ ಮೌಲ್ಯದ ಸೊತ್ತುಗಳ ಸಹಿತ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಭಾನುವಾರದಂದು ತಾಲೂಕಿನ ಅರಳ ಗ್ರಾಮದ ಮುಲಾರ ಪಟ್ಟಣದ ನೇತ್ರಾವತಿ ನದಿ ದಂಡೆಯಲ್ಲಿ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಎಸ್ಪಿ ರವಿಕಾಂತೇಗೌಡ IPS ರವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ ಸಜಿತ್ ರವರ ನೇತೃತ್ವದಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಡಿ.ಎಸ್.ಬಿ. ಇನ್ಸ್ ಪೆಕ್ಟರ್ ನಾಗರಾಜ್ ಟಿ.ಡಿ. ಮತ್ತು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರ ತಂಡ ದಾಳಿ ನಡೆಸಿ ಅಕ್ರಮವಾಗಿ ಮರಳು ತೆಗೆಯಲು ಬಳಸುತ್ತಿದ್ದ 10 ದೋಣಿಗಳು, ಮರಳು ಸಾಗಟಕ್ಕೆ ಬಳಸುತ್ತಿದ್ದ 4 ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಮರಳು ತೆಗೆಯುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.