(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.12. ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ಹಣ ವಸೂಲಿ ಮಾಡಿದ ಆರೋಪದಡಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಕನ್ನಡ ಚಿತ್ರರಂಗದಲ್ಲಿ ‘ಸ್ವಯಂಕೃಷಿ’ ಎಂಬ ಚಿತ್ರ ನಿರ್ಮಾಣ ಮಾಡಿ, ನಟಿಸಿದ್ದ ವೀರೇಂದ್ರ ಬಾಬು ಎಂಬುವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ನಿರ್ಮಾಪಕ ತನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ, ಸೆರೆ ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ ಹಾಗೂ 15 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ದೂರುದಾರ ಮಹಿಳೆಯು 2021ರ ನವೆಂಬರ್‌ನಲ್ಲಿ ಕೆಲಸವೊಂದರ ನಿಮಿತ್ತ ವೀರೇಂದ್ರ ಬಾಬುನನ್ನು ಭೇಟಿಯಾಗಿದ್ದು, ಆ ಸಂದರ್ಭದಲ್ಲಿ ಕಾಫಿಯಲ್ಲಿ ಮತ್ತೇರಿಸುವ ಔಷಧ ಸೇರಿಸಿ ಕುಡಿಸಿ ಅತ್ಯಾಚಾರ ಎಸಗಿದ್ದು, ಬಳಿಕ ಆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ 15 ಲಕ್ಷ ರೂ. ಹಣ ಪೀಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಬಳಿಕ ತನ್ನ ಸ್ನೇಹಿತರಾದ ನಿರಂಜನ್ ರಾವ್, ಬಸವರಾಜ್, ಶಿವಕುಮಾರ್, ದೀಕ್ಷಿತ್ ನೆರವಿನಿಂದ ಮಹಿಳೆಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಕಡೆ ಸುತ್ತಾಡಿಸಿ, ಆಕೆಯ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿದ್ದಾನೆ. ಪಿಸ್ತೂಲ್ ತಲೆಗೆ ಇಟ್ಟು ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.