ಕೊರಗಜ್ಜನ ಆದಿಸ್ಥಳ ವರ್ಷದ 365 ದಿನವೂ ತೆರೆದಿರುತ್ತದೆ – ಆಡಳಿತ ಮಂಡಳಿ ಸ್ಪಷ್ಟನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.09. ಕುತ್ತಾರಿನಲ್ಲಿರುವ ಕೊರಗಜ್ಜನ ಏಳೂ ಆದಿಸ್ಥಳಗಳು ವರ್ಷದ 365 ದಿನವೂ ದಿನದ 24 ಗಂಟೆಯೂ ತೆರೆದಿರುತ್ತದೆ ಎಂದು ಕುತ್ತಾರು ಶ್ರೀ ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನ ಮತ್ತು ಕೊರಗ ತನಿಯ ದೈವದ ಆದಿಸ್ಥಳಗಳ ಆಡಳಿತ ಮಂಡಳಿಯು ತಿಳಿಸಿದೆ. ಏಳು ಆದಿಸ್ಥಳಗಳು ದಿನದ 24 ಗಂಟೆಯೂ ತೆರೆದಿದ್ದರೂ, ಮಹಿಳೆಯರಿಗೆ ಮಾತ್ರ ಬೆಳಗ್ಗೆ 6.30ರಿಂದ ಸಂಜೆ 6.30ರ ವರೆಗೆ ಮಾತ್ರ ಪ್ರವೇಶ ಇರುತ್ತದೆ. ಈ ಏಳು ಆದಿ ಸ್ಥಳಗಳಲ್ಲಿ ಕೊರಗಜ್ಜನ ಕೋಲಗಳು ಕತ್ತಲೆಯಲ್ಲಿಯೇ ನಡೆಯುತ್ತದೆ ಮತ್ತು ಕೊರಗಜ್ಜನ ಏಳು ಆದಿ ಸ್ಥಳಗಳಲ್ಲಿ ಯಾವುದೇ ದೀಪ ಧೂಪ ಅಗರಬತ್ತಿಗಳನ್ನು ಹಚ್ಚುವಂತಿಲ್ಲ. ಇದು ಅನಾದಿ ಕಾಲದಿಂದಲು ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಭಕ್ತರು ಯಾವುದೇ ದಿನ ಎಷ್ಟು ಹೊತ್ತಿಗೆ ಬೇಕಾದರೂ ಆದಿಸ್ಥಳಕ್ಕೆ ಭೇಟಿ ನೀಡಿ ಕೊರಗಜ್ಜನೊಂದಿಗೆ ನಿವೇದನೆ ಮಾಡಿಕೊಳ್ಳಬಹುದು. ಕಚೇರಿಗೆ ಭೇಟಿ ನೀಡಿ ಕೊರಗಜ್ಜನ ಆದಿಸ್ಥಳದಲ್ಲಿ ಮಾಡಲಾಗುವ ಸೇವಾ ವಿವರಗಳನ್ನು ಪಡೆದುಕೊಳ್ಳಬಹುದು.

ತಲೆ-ತಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಕುತ್ತಾರಿನಲ್ಲಿರುವ ಕೊರಗತನಿಯ ದೈವ ನೆಲೆ ನಿಂತ ಸ್ಥಳವನ್ನು ಆದಿಸ್ಥಳ ಎಂದು ಗುರುತಿಸಲಾಗಿದೆ. ಪಾಡ್ದನಗಳ ಉಲ್ಲೇಖದಂತೆ ಅರಸು ದೈವಗಳನ್ನು ಓಡಿಸಿದ್ದಕ್ಕೆ ಪ್ರತಿಯಾಗಿ ಪಂಜಂದಾಯ ದೈವವು ಕೊರಗತನಿಯ ದೈವಕ್ಕೆ ಏಳು ಕಲ್ಲು, ಏಳು ವರ್ಗ ತುಂಡು ಗ್ರಾಮಗಳನ್ನು ನೀಡಿರುತ್ತದೆ. ಇದೇ ಈಗ ಕೊರಗತನಿಯ ದೈವದ ಆದಿಸ್ಥಳಗಳಾಗಿವೆ. ಅವುಗಳೆಂದರೆ ಕುತ್ತಾರು ಆದಿಸ್ಥಳ, ಸೋಮೇಶ್ವರ ಆದಿಸ್ಥಳ, ಬೊಲ್ಯ ಆದಿಸ್ಥಳ, ಮಿತ್ತ ಅಗೆಲ ಆದಿಸ್ಥಳ, ಉಜಿಲ ಆದಿಸ್ಥಳ, ತಲ ಆದಿಸ್ಥಳ, ದೇರಳಕಟ್ಟೆ ಆದಿಸ್ಥಳ ಆಗಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ನೇಮ-ನಿಯಮ, ಜಾತ್ರೆ-ಕೋಲಗಳು ಮುನ್ನೂರು ಗ್ರಾಮದ ತಂತ್ರಿಗಳ ಮಾರ್ಗದರ್ಶನದಲ್ಲಿ ಮಾಗಣತ್ತಡಿ ಮನೆತನದವರ ಅನುವಂಶಿಕ ಆಡಳಿತದಲ್ಲಿ ಮತ್ತು ಮೂರು ಗುತ್ತುಗಳಾದ ಕುತ್ತಾರುಗುತ್ತು, ಕಲ್ಲಾಲಗುತ್ತು, ಬೊಲ್ಯಗುತ್ತು ಹಾಗೂ ಗೇಣಿಮನೆ ಬಾಳಿಕೆಯವರ ಮುಂದಾಳತ್ವದಲ್ಲಿ ಜೊತೆಗೆ ನೂರಾರು ಸೇವಚಾಕರಿಯವರ ನಿಸ್ವಾರ್ಥ ಸೇವೆಯೊಂದಿಗೆ ಪರಂಪರೆಯಿಂದ ನಡೆದುಕೊಂಡು ಬಂದಿರುವ ಕಟ್ಟುಕಟ್ಟಲೆಗೆ ಚ್ಯುತಿಬಾರದಂತೆ ಈಗಲೂ ನಡೆದುಕೊಂಡು ಬರುತ್ತಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರಗತನಿಯ ದೈವದ ಕಾರಣಿಕ, ಪ್ರಭಾವ–ಜನಪ್ರಿಯತೆಯ ಕಾರಣದಿಂದ ಕೆಲವು ವ್ಯಕ್ತಿಗಳು ಅಲ್ಲಲ್ಲಿ ದೈವದ ಗುಡಿಗಳನ್ನು ನಿರ್ಮಿಸಿ, ತಾವು ಹೊಸದಾಗಿ ನಿರ್ಮಿಸಿರುವ ಗುಡಿ ಮತ್ತು ಸ್ಥಳಗಳನ್ನೇ ಕೊರಗತನಿಯ ದೈವದ ಆದಿಸ್ಥಳ ಎಂದು ಬಿಂಬಿಸುತ್ತಿದ್ದಾರೆ. ಕೊರಗತನಿಯ ದೈವಕ್ಕೆ ಮೇಲೆ ಸೂಚಿಸಿದ ಏಳು ಆದಿಸ್ಥಳಗಳನ್ನು ಬಿಟ್ಟರೆ ಬೇರೆ ಆದಿಸ್ಥಳ ಇರುವುದಿಲ್ಲ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಧರ್ ಶೆಟ್ಟಿ ಮಾಗಣತ್ತಡಿ ಹಾಗೂ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ ಎಂದು ತಿಳಿದುಬಂದಿದೆ.

Also Read  ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಎಲ್ಲ ವಸ್ತುಗಳು ಸುರಕ್ಷಿತವಾಗಿದೆ ➤ ಆಡಳಿತ ಮಂಡಳಿ ಸ್ಪಷ್ಟನೆ

 

error: Content is protected !!
Scroll to Top